ಬೆಳ್ತಂಗಡಿ: ಕಳೆಂಜ ಗ್ರಾಮದಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ನಡೆದ ಗಲಾಟೆ ಪ್ರಕರಣದ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶನಿವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಕಳೆಂಜ ಗ್ರಾಮದ ಲೋಲಾಕ್ಷ ಎಂಬುವರು ಮೀಸಲು ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದನ್ನು ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಿತ್ತು ಹಾಕಿದ್ದರು. ಇದನ್ನು ಖಂಡಿಸಿ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ ಮನೆ ನಿರ್ಮಾಣ ಮಾಡಿದ್ದರು.
ಬಳಿಕ 2023ರ ಅ.9ರಂದು ಅರಣ್ಯ ಇಲಾಖೆಯವರು ಮನೆ ತೆರವು ಮಾಡಲು ಯತ್ನಿಸಿದಾಗ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹನಾಯಕ್, ಪಕ್ಷದ ಕಾರ್ಯಕರ್ತರು ಸೇರಿ ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಧರ್ಮಸ್ಥಳ ಪೊಲೀಸರು ತನಿಖೆ ನಡೆಸಿ ಹರೀಶ್ ಪೂಂಜ, ಕೆ.ಪ್ರತಾಪಸಿಂಹನಾಯಕ್ ಮತ್ತು ಇತರ 15 ಮಂದಿ ಸೇರಿ 17 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.