ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್‌‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿದ ವಕ್ಫ್ ಮಂಡಳಿ- ಸರಕಾರದಿಂದ ಆಡಳಿತಾಧಿಕಾರಿ ನೇಮಕ

0

ಬೆಳ್ತಂಗಡಿ; ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿಯಮಾವಳಿ (ಬೈಲಾ) ಅಂಗೀಕರಿಸಿಲ್ಲ, ಲೆಕ್ಕ ಪರಿಶೋಧಕರಿಗೆ ಲೆಕ್ಕ ಪತ್ರ ಪ್ರಸ್ತುತಪಡಿಸಿಲ್ಲ ಹಾಗೂ ಆಡಳಿತ ಮಂಡಳಿಯನ್ನು ರಚಿಸಿ ಅದಕ್ಕೆ ರಾಜ್ಯ ವಕ್ಫ್ ಮಂಡಳಿಯಿಂದ ಅಂಗೀಕಾರ ಪಡೆಯದೆ ಸ್ವಯಂ ಘೋಷಿತ ಸಮಿತಿ ರಚಿಸಿಕೊಂಡಿರುವ ಪ್ರಮುಖ ಕಾರಣಗಳಿಂದಾಗಿ ಚಾರ್ಮಾಡಿ ಜಲಾಲಿಯಾ ನಗರ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್‌‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ರಾಜ್ಯ ವಕ್ಫ್ ಮಂಡಳಿ ಆದೇಶ ನೀಡಿದೆ. ಅದರೊಂದಿಗೆ ವಕ್ಫ್ ಮಂಡಳಿಯಿಂದ ಮಸ್ಜಿದ್ ಗೆ ಆಡಳಿತಾಧಿಕಾರಿಯನ್ನೂ ನೇಮಿಸಿದೆ.

ಆ ಸಂಬಂಧ ಜೂನ್ 1ರಂದು ಮಸ್ಜಿದ್ ಗೆ ಭೇಟಿ‌ ನೀಡಿದ ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕ್ಕರ್ ಅವರು ನೋಟೀಸು ಜಾರಿಗೊಳಿಸಿ ಸಮಿತಿಯನ್ನು ವಜಾಗೊಳಿಸಿ ಅಧಿಕಾರ ಪಡೆದುಕೊಂಡರು. ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಮಾಜಿ ಸೈನಿಕ ಮುಹಮ್ಮದ್ ರಫಿ ಅವರಿಗೆ ಅಧಿಕೃತವಾಗಿ ಅಧಿಕಾರ ವಹಿಸಿಕೊಟ್ಟರು. ಈ ವೇಳೆ ವಕ್ಫ್ ಜಿಲ್ಲಾ ಸಲಹಾ ಸಮಿತಿ ಉಪಾಧ್ಯಕ್ಷ ಪಕೀರಬ್ಬ ಮಾಸ್ಟರ್ ಮರೋಡಿ, ಮಾಜಿ ಸದಸ್ಯ ಬಿ.ಎಸ್ ಹಸನಬ್ಬ ಚಾರ್ಮಾಡಿ, ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.

ಮಸ್ಜಿದ್ ನಲ್ಲಿ‌ ಈ‌ ಮೇಲಿನ ಗೊಂದಲಗಳ ಕಾರಣದಿಂದದೈನಂದಿನ ಆಡಳಿತ ಸುಗಮವಾಗಿ ನಡೆಯುತ್ತಿರಲಿಲ್ಲ. ನಿರಂತರ ಅಶಾಂತಿಯ ಸನ್ನಿವೇಶ ನಿರ್ಮಾಣವಾಗಿತ್ತು. ಈ‌ ಬಗ್ಗೆ ಮುನಿಸಿಕೊಂಡಿದ್ದ ಕೆಲ ಸದಸ್ಯರು ಜಿಲ್ಲಾ ದಂಡಾಧಿಕಾರಿಗಳಾಗಿರುವ ಡಿಸಿ ಅವರಿಗೆ ದೂರನ್ನೂ ಸಲ್ಲಿಸಿದ್ದರು. ದೂರನ್ನು ಕೂಲಂಕಷವಾಗಿ ಪರಿಶೀಲಿಸಿದ ವಕ್ಫ್ ಮಂಡಳಿ ಇಲ್ಲಿನ ಆಡಳಿತವನ್ನುನೇರ ಸುಪರ್ದಿಗೆ ಪಡೆದು, ತಮ್ಮ ವತಿಯಿಂದಲೇ ಆಡಳಿತಾಧಿಕಾರಿಯನ್ನೂ ನೇಮಿಸಿ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ಮುಂದಿನ ಆದೇಶದವರೆಗೆ ಜಮಾಅತ್ ಎಲ್ಲಾ ಆಡಳಿತ ನಿರ್ವಹಣೆ ಆಡಳಿತಾಧಿಕಾರಿಯ ವ್ಯಾಪ್ತಿಗೆ ಬರುತ್ತದೆ. ಜಮಾಅತ್‌ಗೆ ವಂತಿಗೆ, ಇತರ ಧನ ಸಹಾಯ ಮಾಡುವವರು ಆಡಳಿತಾಧಿಕಾರಿಯನ್ನು ನೇರ ಭೇಟಿಯಾಗಿ ಸೂಕ್ತ ರಶೀದಿ ಒಡೆದುಕೊಳ್ಳಬಹುದು. ಅಲ್ಲದೆ ಈ‌ ಹಿಂದೆ ಅಧ್ಯಕ್ಷರಾಗಿದ್ದ ಅವರ ಮಂಡಳಿಯು ಮೂರು ದಿನಗಳ ಒಳಗಾಗಿ ಮಸೀದಿಯ ಎಲ್ಲಾ ದಾಖಲೆಪತ್ರಗಳನ್ನು, ರಶೀದಿ ವಗೈರೆ ಕಡತಗಳನ್ನು ಕಡ್ಡಾಯವಾಗಿ ಆಡಳಿತಾಧಿಕಾರಿಗೆ ತಂದೊಪ್ಪಿಸಬೇಕು ಎಂದು ವಕ್ಫ್ ಮಂಡಳಿ ನೋಟೀಸು ಜಾರಿ ಗೊಳಿಸಿ ಆದೇಶ ನೀಡಿದೆ.

ಹೆಚ್ಚಿನ ಮಾಹಿತಿ ಬೇಕಾದವರು ಆಡಳಿತಾಧಿಕಾರಿ ಮುಹಮ್ಮದ್ ರಫಿ ಅವರನ್ನು ಕಚೇರಿ ಸಮಯದಲ್ಲಿ ದೂರವಾಣಿ ಮೂಲಕವೂ ಸಂಪರ್ಕಿಸಬಹುದೆಂದೂ 9611032786 ಜಮಾಅತ್ ಗೆ ಸೂಚಿಸಿದೆ.

LEAVE A REPLY

Please enter your comment!
Please enter your name here