ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧದ ಎರಡು ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ: ಶಾಸಕ ಹರೀಶ್ ಪೂಂಜ ಕ್ರಮಕ್ಕೆ ಹೈಕೋರ್ಟ್‌ ತೀವ್ರ ತರಾಟೆ

0

ಬೆಳ್ತಂಗಡಿ: ಪರವಾನಿಗೆ ಪಡೆಯದೆ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ದಾಸ್ತಾನು ಮಾಡಿದ್ದ ಆರೋಪದಡಿ ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಬಂಧನ ಮಾಡಿದ ಪೊಲೀಸರ ಕ್ರಮ ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದಲ್ಲದೆ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಶಾಸಕ ಹರೀಶ್ ಪೂಂಜರವರ ವರ್ತನೆಯನ್ನು ಮೇ‌ 31ರಂದು ಹೈಕೊರ್ಟ್ ತೀವ್ರ ತರಾಟೆಗೆ ತೆಗೆದು ಕೊಂಡಿದೆ.

ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ ಹಾಗೂ ಪ್ರತಿಭಟನೆ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಮತ್ತು ಪ್ರಕರಣ ರದ್ದು ಕೋರಿ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಶಾಸಕರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಬಹುದು. ಅಕ್ರಮ ಬಂಧನ ಮಾಡಿದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆದರೆ, ಜನಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ಅವರು ಶಾಸಕರು ಕಾನೂನು ಮಾಡುವ ಕೆಲಸವನ್ನು ಮಾಡಬೇಕು. ಅದರ ಬದಲಾಗಿ ನ್ಯಾಯಾಲಯದ ಕೆಲಸದಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ಮುಂದಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿದ್ದಾರೆ, ನ್ಯಾಯಾಲಯದ ಕಾರ್ಯವನ್ನು ನೀವು ಮಾಡುವುದಕ್ಕೆ ಮುಂದಾಗಬೇಡಿ. ನಿಮ್ಮ ಕೆಲಸ ಕಾನೂನು ಮಾಡುವುದು. ಅದನ್ನು ಮಾಡಿ, ನ್ಯಾಯಾಲಯ ತನ್ನ ಕಾರ್ಯ ಮಾಡುವುದಕ್ಕೆ ಬಿಡಿ ಎಂದು ನ್ಯಾಯಪೀಠ ಸಲಹೆ ನೀಡಿತು. ಮುಂದೊಂದು ದಿನ ನ್ಯಾಯಾಧೀಶರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ನಮ್ಮ ಹಿಂದೆ ಬಂದು ಕೂತರೆ ನಾವೆಲ್ಲರೂ ಹೇಗೆ ಕೆಲಸ ಮಾಡಬೇಕು. ಈ ರೀತಿಯ ವರ್ತನೆಯನ್ನು ಸಹಿಸಲಾಗುವುದಿಲ್ಲ ಎಂದು ಪೀಠ ತಿಳಿಸಿತು. ಪ್ರಸ್ತುತ ದಿನಗಳಲ್ಲಿ ಪೊಲೀಸರ ವಿರುದ್ಧ ಧರಣಿ ಮಾಡುವುದು, ಕಲ್ಲು ಎಸೆಯುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಂದ ಒಬ್ಬರಿಗೆ ತೊಂದರೆ ಆಗಬಹುದು. ಆದರೆ, ಪೊಲೀಸರನ್ನು ನಾವು ರಕ್ಷಣೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅವರು ಸೇವೆ ಸಲ್ಲಿಸುವುದಾದರೂ ಹೇಗೆ ಎಂದು ನ್ಯಾಯಪೀಠ ಇದೇ ವೇಳೆ ಪ್ರಶ್ನೆ ಮಾಡಿತು.

ಜನಪ್ರತಿನಿಧಿಯಾದ ವ್ಯಕ್ತಿ ಯಾವುದೋ ವ್ಯಕ್ತಿಯನ್ನು ಬಂಧಿಸಿದಲ್ಲಿ ಪೊಲೀಸ್ ಠಾಣೆಗೆ ಹೋಗುವುದು ಎಷ್ಟು ಸರಿ. ಭಯೋತ್ಪಾದಕನನ್ನು ಪೊಲೀಸರು ಬಂಧಿಸುತ್ತಾರೆ. ಅವನ ಪತ್ನಿ ಬಂದು ನನ್ನ ಪತಿ ಅತ್ಯುತ್ತಮ ವ್ಯಕ್ತಿಯಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದರೆ ತಕ್ಷಣ ಜನಪ್ರತಿನಿಧಿ ಪೊಲೀಸ್‌ ಠಾಣೆಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು ನೀವು ಠಾಣೆಗೆ ಹೋಗಬಾರದಾಗಿತ್ತು ಎಂದು ಶಾಸಕರಿಗೆ ತಿಳಿಸಿತು. ಯಾವುದೇ ವ್ಯಕ್ತಿಯನ್ನು ಬಂಧಿಸಿದಲ್ಲಿ ಅದನ್ನು ಕಾನೂನು ಪ್ರಕಾರ ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಬದಲಾಗಿ ಶಾಸಕರಾದವರು ಠಾಣೆಗೆ ಹೋದರೆ ಪೊಲೀಸರು ತಮ್ಮ ಸೇವೆ ಸಲ್ಲಿಸುವುದಾದರೂ ಹೇಗೆ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.

ಈ ರೀತಿಯ ಪ್ರಕರಣದಲ್ಲಿ ಯಾವುದೇ ನ್ಯಾಯಾಲಯ ಆರೋಪಿತರ ಪರವಾಗಿ ಆದೇಶಿಸಿರುವ ಭಾರತದ ಯಾವುದೇ ನ್ಯಾಯಾಲಯದ ಅಥವಾ ವಿದೇಶ ನ್ಯಾಯಾಲಯ ಒಂದೇ ಒಂದು ಆದೇಶ ನೀಡಿರುವ ಉದಾಹರಣೆ ಇದೆಯೇ? ಇದ್ದರೆ ಸಲ್ಲಿಸಿ ಅದರ ಆಧಾರದಲ್ಲಿ ಮುಂದಿನ ವಿಚಾರಣೆ ನಡೆಸಿ ಆದೇಶಿಸಲಾಗುವುದು ಎಂದು ಪೀಠ ತಿಳಿಸಿತು. ಬಳಿಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು. ಅಲ್ಲದೆ, ಮುಂದಿನ ವಿಚಾರಣೆಯವರೆಗೆ ಸಾವಧಾನದಿಂದ ಇರಿ. ಅರ್ಜಿದಾರರಿಗೆ ಯಾವುದೇ ತೊಂದರೆ ಮಾಡುವುದಕ್ಕೆ ಮುಂದಾಗಬೇಡಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ವಿಚಾರಣಾ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ಅವರು ಬಿಜೆಪಿ ಯುವ ಮೋರ್ಚಾದ ಶಶಿರಾಜ್ ಶೆಟ್ಟಿ ಅವರನ್ನು ಪೊಲೀಸರು ಅಕ್ರಮ ಗಣಿಗಾರಿಗೆ ಆರೋಪದಲ್ಲಿ ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಸಂಬಂಧ ಬಂಧಿತನ ಪತ್ನಿ ಅರ್ಜಿದಾರರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಬೆಳ್ತಂಗಡಿ ಠಾಣೆಗೆ ಬಂದ ಶಾಸಕರು ರಾತ್ರಿ 11:30ಕ್ಕೆ ಭೇಟಿ ನೀಡಿ ಯಾವ ಕಾರಣಕ್ಕೆ ಎಫ್‌ಐಆ‌ರ್ ಆಗಿದೆ ಎಂದು ಪ್ರಶ್ನಿಸಿದರು. ಪೊಲೀಸರು ಸೂಕ್ತ ರೀತಿಯ ಉತ್ತರ ನೀಡಿರಲಿಲ್ಲ. ಆದ ಕಾರಣ ಧ್ವನಿ ಜೋರು ಮಾಡಿ ಮಾತನಾಡಿದ್ದರು ಎಂದು ವಾದಿಸಿದ್ದರು‌.

ಪ್ರಕರಣದ ಹಿನ್ನೆಲೆ: ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಆರೋಪದಲ್ಲಿ ಮೇ.18ರಂದು ರಾತ್ರಿ ಶಶಿರಾಜ್ ಶೆಟ್ಟಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಇದರಿಂದ ಸಿಟ್ಟಾಗಿದ್ದ ಅರ್ಜಿದಾರ ಶಾಸಕ ಹರೀಶ್ ಪೂಂಜ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ವಿರುದ್ಧ ಅವಾಚ್ಯವಾಗಿ ಬೈದು ಬೆದರಿಕೆ ಒಡ್ಡಿದ್ದರು. ಅಲ್ಲದೆ, ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಜತೆಗೆ, ಪ್ರತಿಭಟನೆ ನಡೆಸಿದ್ದರು. ಈ ಆರೋಪದಲ್ಲಿ ಎರಡು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದ್ದರು.‌ ಇದನ್ನು ಪ್ರಶ್ನಿಸಿ ಹರೀಶ್ ಪೂಂಜ ಹೈಕೋರ್ಟ್ ಮೆಟ್ಟಿಲೇರಿದ್ದರು.ಶಾಸಕ ಹರೀಶ್ ಪೂಂಜ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದಿಸಿದ್ದರು.‌ ಪ್ರಸನ್ನ ದೇಶಪಾಂಡೆ ವಕಾಲತ್ತು ವಹಿಸಿದ್ದರು.

p>

LEAVE A REPLY

Please enter your comment!
Please enter your name here