ಮರೋಡಿ: ಊರ ದೇವರಿಗೆ ನಡೆಯುವ ಬ್ರಹ್ಮಕಲಶದಿಂದ ಸ್ಥಳ ಸಾನ್ನಿಧ್ಯ ವೃದ್ಧಿಯಾಗುವ ಜತೆಗೆ ಊರಿಗೆ ಬರಬಹುದಾದ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗಿ, ನಾಡಿಗೆ ಶ್ರೇಯಸ್ಸು ಪ್ರಾಪ್ತವಾಗುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಹಿಂದೂ ಧರ್ಮದ ರಕ್ಷಣೆಯಲ್ಲಿ ದೇವಸ್ಥಾನಗಳ ಕೊಡುಗೆ ಅಪಾರವಾದುದು. ಈ ಶ್ರದ್ಧಾಕೇಂದ್ರಗಳ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯ. ಈ ಕೇಂದ್ರಗಳ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಆಗಬೇಕು ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ದಕ್ಷಿಣ ಪ್ರಮುಖ್ ಸುನಿಲ್ ಕೆ.ಆರ್, ಮರೋಡಿ ಗ್ರಾಮ ಪಂಚಾಯತಿ ಅಧ್ಯಕ್ಷ ರತ್ನಾಕರ ಬುಣ್ಣಾನ್, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಭಾರತ್ ಬ್ಯಾಂಕ್ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ, ಸಂತೋಷ್ ಪೂಜಾರಿ, ಬೆಂಗಳೂರಿನ ಉದ್ಯಮಿ ದಯಾನಂದ ಪೂಜಾರಿ, ಕಲ್ಯಾಣ್ ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಸದಾಶಿವ ಸುವರ್ಣ, ಉದ್ಯಮಿ ಪ್ರವೀಣ್ ಜೈನ್, ಮುಂಬೈ ಘಟಕದ ಅಧ್ಯಕ್ಷ ನಾರಾಯಣ ಸುವರ್ಣ, ಮೊಕ್ತೇಸರ ವಿಜಯ ಆರಿಗ ನಿಡ್ಡಾಜೆ ವೇದಿಕೆಯಲ್ಲಿದ್ದರು.
ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಪ್ರದೀಶ್ ಮರೋಡಿ ವಂದಿಸಿದರು. ಸುರೇಂದ್ರ ಸಾಲ್ಯಾನ್ ಪ್ರಾರ್ಥಿಸಿದರು. ಕ್ಷೇತ್ರಕ್ಕೆ ವಿವಿಧ ರೀತಿಯ ಕೊಡುಗೆ ನೀಡಿದ ಹಲವರನ್ನು ಗೌರವಿಸಲಾಯಿತು.
ಗುರುವಾರ ಬೆಳಿಗ್ಗೆ ಮತ್ತು ದುರ್ಗಾಪರಮೇಶ್ವರಿ ದೇವರ ಕಲಶಾಭಿಷೇಕ, ನವಗ್ರಹ ಶಾಂತಿ ಪ್ರಾಯಶ್ಚಿತ್ತ ಹೋಮ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀ ಉಮಾಮಹೇಶ್ವರ ದೇವರಿಗೆ ಪರಿಕಲಶಾಧಿವಾಸ, ಅಧಿವಾಸ ಹೋಮಗಳು, ಪ್ರಸನ್ನ ಪೂಜೆ, ಭಜನಾ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನರಂಜನೆ, ಉಡುಪಿ ಅಭಿನಯ ಕಲಾವಿದರಿಂದ ಶಾಂಭವಿ ನಾಟಕ ಪ್ರದರ್ಶನಗೊಂಡಿತು.