ಬಳಂಜ: ಬಾವಲಿಗುಂಡಿ ಫಲ್ಗುಣಿ ನದಿಗೆ ವಿಷ ಹಾಕಿ ಮೀನು ಹಿಡಿಯಲು ಪ್ರಯತ್ನಿಸಿದ ಪರಿಣಾಮ ಮೀನುಗಳ ಮಾರಣಹೋಮ ನಡೆದಿದೆ. ಅಳದಂಗಡಿ-ಬಳಂಜ ಸಂಪರ್ಕ ರಸ್ತೆಯ ಬಾವಲಿಗುಂಡಿಯಲ್ಲಿರುವ ಫಲ್ಗುಣಿ ನದಿಗೆ ಕೆಲವು ಕಿಡಿಗೇಡಿಗಳು ಮೀನು ಹಿಡಿಯುವ ಉದ್ದೇಶದಿಂದ ವಿಷ ಬೆರೆಸಿ ನದಿ ನೀರಿಗೆ ಹಾಕಿದ ಪರಿಣಾಮ ಸಾವಿರಾರು ಮೀನುಗಳು ವಿಲವಿಲ ಒದ್ದಾಡಿ ಸಾಯುತ್ತಿವೆ.
ಈ ವರ್ಷ ಬಿಸಿಲ ಬೇಗೆಯಿಂದ ನದಿ ನೀರು ಬತ್ತಿ ಹೋಗಿದ್ದು ಅಲ್ಲಲ್ಲಿ ಸ್ವಲ್ಲ ಸ್ವಲ್ಪ ನೀರು ಶೇಖರಣೆಗೊಂಡಿದೆ.ಜೀವ ಉಳಿಸುವ ಪ್ರಯತ್ನದ ಭಾಗವಾಗಿ ಮೀನುಗಳು ನೀರು ಇರುವ ಕಡೆ ಓಡಾಡುತ್ತಿದೆ.ಇದನ್ನು ಗಮನಿಸಿದ ಕಿಡಿಗೇಡಿಗಳು ವಿಷ ಹಾಕಿ ಮೀನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯ ಸಮಾಜ ಸೇವಕರಾದ ಕ್ರಿಸ್ತ ಎರೇಂಜರ್ಸ್‌ನ ಮಾಲಕ ಅಲ್ವಿನ್ ಪಿಂಟೋರವರು ತಕ್ಷಣವೇ ವಿಷ ಹಾಕಲು ಬಂದವರನ್ನು ತಡೆದು ತರಾಟೆಗೆತ್ತಿಕೊಂಡಿದ್ದಾರೆ.ಈ ಪ್ರದೇಶದಲ್ಲಿ ನದಿ ನೀರನ್ನೇ ಆಶ್ರಯಿಸಿಕೊಂಡಿರುವ ಜನರು, ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳು ಕಲುಷಿತಗೊಂಡಿರುವ ನೀರನ್ನು ಉಪಯೋಗಿಸುವುದರಿಂದ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ತಕ್ಷಣವೇ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮೀನುಗಳ ಮಾರಣಹೋಮವನ್ನು ತಡೆಗಟ್ಟಬೇಕು ಎಂದು ಆಲ್ವಿನ್ ಪಿಂಟೋ ಆಗ್ರಹಿಸಿದ್ದಾರೆ.