ಉಜಿರೆ ಶ್ರೀ.ಧ.ಮ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಪಿನಾಕಲ್-2k24 ಅಂತರ್ ತರಗತಿ ಕಾರ್ಯಕ್ರಮ-ಕೌಶಲ್ಯಯುತ ವಿದ್ಯಾರ್ಥಿಯಾಗುವುದು ವೃತ್ತಿ ಜೀವನಕ್ಕೆ ಅತ್ಯಗತ್ಯ- ಪ್ರೊ. ಟಿ. ಕೃಷ್ಣಮೂರ್ತಿ

0

ಉಜಿರೆ: “ಅಂಕಗಳತ್ತ ಗಮನ ನೀಡುವುದರ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಜೀವನವನ್ನು ಉತ್ತಮವಾಗಿ ಕಂಡುಕೊಳ್ಳಬಹುದು. ಈಗಿನ ವಿದ್ಯಾರ್ಥಿಗಳಲ್ಲಿ ಬುದ್ಧಿವಂತಿಕೆಯ ಅಂಶ (ಐಕ್ಯೂ) ಅಧಿಕವಾಗಿದೆ. ಆದರೆ ಭಾವನಾತ್ಮಕ ಅಂಶ (ಇಕ್ಯೂ), ಸಾಂಸ್ಕೃತಿಕ ಅಂಶ (ಸಿಕ್ಯೂ), ಸಾಮಾಜಿಕ ಅಂಶ (ಎಸ್ ಕ್ಯೂ) ಗಳ ಕೊರತೆ ಇದೆ. ದೇಶ, ಮನೆ ಮತ್ತು ಶಿಕ್ಷಣ ಎಲ್ಲದರೆಡೆಗೆ ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿರಬೇಕು. ಆತ್ಮಸ್ಥೈರ್ಯ ಬೆಳೆಸಿಕೊಂಡು, ಎಲ್ಲ ಸವಾಲುಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳಬೇಕು” ಎಂದು ಶ್ರೀಧಮ ವಸತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಟಿ.ಕೃಷ್ಣಮೂರ್ತಿ ಹೇಳಿದರು.
ಉಜಿರೆಯ ಶ್ರೀ.ಧ.ಮ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗವು ಪಿನಾಕಲ್-2k24 ಎಂಬ ಅಂತರ್ ತರಗತಿ ಕಾರ್ಯಕ್ರಮವನ್ನು ಫೆ.8ರಂದು ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಆಯೋಜಿಸಿತ್ತು.

ಶ್ರೀ.ಧ.ಮ ವಸತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಟಿ. ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದ್ವಿತೀಯ ವಾಣಿಜ್ಯ ಪದವಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.

ಕಾರ್ಯಕ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ, “ನಾವು ಉನ್ನತ ಗುರಿಯನ್ನು ಇಟ್ಟುಕೊಳ್ಳಬೇಕು. ಆ ಗುರಿಯನ್ನು ತಲುಪಲು ತರಬೇತಿಯ ಅವಶ್ಯಕತೆ ಇದೆ. ಈ ರೀತಿಯ ಕಾರ್ಯಕ್ರಮಗಳು ನಮಗೆ ಆ ಗುರಿ ತಲುಪಲು, ಮುಂದಿನ ವೃತ್ತಿ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿಸಲು ಸಹಾಯ ಮಾಡುತ್ತದೆ. ಕೌಶಲ್ಯಯುತ ಅಭ್ಯರ್ಥಿಗಳನ್ನು ಉದ್ಯೋಗದಾತರು ಅಪೇಕ್ಷಿಸುತ್ತಾರೆ. ಇದೆಲ್ಲವನ್ನು ಮನಗಂಡು ನಮ್ಮ ಕಾಲೇಜಿನ ವಾಣಿಜ್ಯ ವಿಭಾಗ ನವನವೀನ ಯೋಜನೆಗಳನ್ನು ಹಾಕಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಾ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ನೀಡುತ್ತಿದೆ” ಎಂದರು.

ಉದ್ಘಾಟನಾ ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಡೀನ್ ಶಕುಂತಲಾ, ಕಾರ್ಯಕ್ರಮ ಸಂಯೋಜಕರೂ, ಸಹಾಯಕ ಪ್ರಾಧ್ಯಾಪಕರೂ ಆದ ಡಾ. ಲಕ್ಷ್ಮೀನಾರಾಯಣ. ಕೆ. ಎಸ್ ಮತ್ತು ಹರೀಶ್ ಶೆಟ್ಟಿ, ವಿದ್ಯಾರ್ಥಿ ಸಂಯೋಜಕರಾದ ರಾಜೇಶ್ ಹಾಗೂ ಸಹನಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಶಿವಾನಿ ಮತ್ತು ಭೂಮಿಕ ಕಾರ್ಯಕ್ರಮ ನಿರೂಪಿಸಿದರು. ಸಹನಾ ಸ್ವಾಗತಿಸಿ, ರಾಜೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಮತ್ತಿತರರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here