ಉಜಿರೆ: ಮಕ್ಕಳಲ್ಲಿ ಉತ್ತಮ ಚಾರಿತ್ರ್ಯ ಮತ್ತು ವ್ಯಕ್ತಿತ್ವ ರೂಪಿಸಲು ಸಕಾಲದಲ್ಲಿ ಮಾರ್ಗದರ್ಶನ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ.ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪೋಷಿಸಿದಾಗ ಮಾತ್ರ ಮಕ್ಕಳು ಸರ್ವತೋಮುಖವಾಗಿ ವಿಕಾಸ ಹೊಂದಲು ಸಾಧ್ಯ ಎನ್ನುತ್ತಾ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ “ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣುಮಕ್ಕಳನ್ನು ಓದಿಸಿ” ಎಂಬುದರ ಕುರಿತಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮುಖ್ಯ ಅತಿಥಿಗಳಾದ ಪ್ರಿಯಾ ಆ್ಯಗ್ನೇಸ್, ಶಿಶು ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ ತಾಲೂಕು ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್), ದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ, ಉಜಿರೆಯ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಇವರು “ ಮಕ್ಕಳಿಗೆ ಸೋಲಿನ ಭಯದಿಂದ ಮತ್ತು ಹತಾಶ ಭಾವನೆಯಿಂದ ಹೊರಬರುವಂತೆ ನಿರಂತರ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವುದು ಅಗತ್ಯ” ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಎಸ್.ಡಿ.ಎಂ. ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು.2019-21 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಬಿ.ಎಡ್. ವಾರ್ಷಿಕ ಪರೀಕ್ಷೆಯಲ್ಲಿ ತೃತಿಯ ಹಾಗೂ ಚತುರ್ಥ ರ‍್ಯಾಂಕ್ ವಿಜೇತರಾದ ಸುನೀತ ಎ ಎಸ್. ಹಾಗೂ ಪೂಜಶ್ರೀ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಸೋಮಶೇಖರ್ ಶೆಟ್ಟಿ ಬಿ., ಡಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿ ಕೆ ಎ, ರತ್ನಮಾನಸದ ನಿಲಯಪಾಲಕರಾದ ಯತೀಶ್ ಕೆ ಬಳಂಜ, ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನ ಉಪನ್ಯಾಸಕರಾದ ವಿದ್ಯಾಶ್ರೀ ಪಿ, ತಿರುಮಲೇಶ್ ರಾವ್ ಎನ್ ಕೆ, ಹರೀಶ್ ಕುಮಾರ್, ಮಂಜು ಆರ್, ಅನುಷಾ ಡಿ ಜೆ ಹಾಗೂ ಬೋಧಕೇತರ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿ ಸಾರ್ಥಕ್ ಜೈನ್ ಸ್ವಾಗತಿಸಿ, ಕೀರ್ತನ್ ಕುಮಾರ್ ವಂದಿಸಿ, ಪೂಜಶ್ರೀ ಹಾಗೂ ಬ್ಲೆಸ್ಸಿ ಸೆಬಾಸ್ಟಿಯನ್ ಕಾರ್ಯಕ್ರಮ ನಿರೂಪಿಸಿದರು