ಉಜಿರೆ: “ಯಾರು ತಮ್ಮ ಮೇಲೆ ತಾವು ಅಗಾದ ವಿಶ್ವಾಸವನ್ನು ಇಟ್ಟುಕೊಂಡಿದ್ದರೋ,ಅಂತಹ ವ್ಯಕ್ತಿಗಳ ಮೇಲೆ ಇತಿಹಾಸ ನಿಂತಿರುವಂತಹದ್ದು.ಛತ್ರಪತಿ ಶಿವಾಜಿ, ಅಶೋಕ ಮಹಾರಾಜ,ಗಾಂಧೀಜಿ ಮುಂತಾದ ಮಹಾನ್ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಿದ್ದರು. ಎನ್ಎಸ್ಎಸ್ ಸ್ವಯಂಸೇವಕರಾಗಿ ತಮ್ಮ ಸರ್ವಸ್ವವನ್ನು ಸಮಾಜಕ್ಕೆ ಅರ್ಪಿಸಬೇಕು”ಎಂದು ಹಿರಿಯ ಸ್ವಯಂಸೇವಕ, ಶ್ರೇಷ್ಠ ವಾಗ್ಮಿ ಹಾಗು ವಕೀಲರಾದ ಪೃಥ್ವೀಶ್ ಧರ್ಮಸ್ಥಳ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು [ಸ್ವಾಯತ್ತ] ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ 2023-24ರ ಅಂತರಾಷ್ಟ್ರೀಯ ಸ್ವಯಂಸೇವಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.’ಸಾಮಾಜಿಕ ಬದಲಾವಣೆಯಲ್ಲಿ ಸ್ವಯಂಸೇವಕರ ಪಾತ್ರ’ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪೃಥ್ವೀಶ್ ಧರ್ಮಸ್ಥಳ ಮಾತನಾಡಿದರು.
“ನಮ್ಮ ದೇಶವನ್ನು ಭಾರತಾಂಬೆಯ ರಥವೆಂದು ತಿಳಿದರೆ,ಸೈನಿಕರು, ರೈತರು,ಕಾರ್ಮಿಕರು ಹಾಗೂ ಶ್ರಮಿಕರು ನಾಲ್ಕು ಚಕ್ರಗಳಿದ್ದ ಹಾಗೆ. ಇವರೆಲ್ಲರೂ ಸ್ಥಿರವಾಗಿದ್ದರೆ, ರಥ ಛಲದಿಂದ ಮುಂದೆ ಸಾಗುತ್ತದೆ.ಇಡೀ ಜಗತ್ತಿನಲ್ಲಿ ಸರ್ಕಾರವಿಲ್ಲದೆಯೂ ದೇಶವನ್ನು ನಡೆಸಬಹುದೆಂದರೆ,ಅದು ಭಾರತದಲ್ಲಿ ಮಾತ್ರ ಸಾಧ್ಯ.ಭಾರತದ ಆತ್ಮ ತ್ಯಾಗ ಮತ್ತು ಸೇವೆ,ಇಲ್ಲಿರುವ ಯುವ ಜನತೆ ಒಗ್ಗೂಡಿ ಯಾವುದೇ ಆಸೆ,ಆಮಿಷಗಳನ್ನು ಇಟ್ಟುಕೊಳ್ಳದೆ ದೇಶಕ್ಕೆ ಮೊದಲ ಆದ್ಯತೆ ಕೊಟ್ಟು ಸ್ವಯಂಇಚ್ಛೆಯಿಂದ ದುಡಿಯಬೇಕು”ಎಂದು ದೇಶಪ್ರೇಮವನ್ನು ತುಂಬಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ.ಹೆಚ್ ಹಾಗೂ ಪ್ರೊ.ದೀಪಾ ಆರ್.ಪಿ ಮಾರ್ಗದರ್ಶಿಸಿದರು.ಹಿರಿಯ ಹಾಗು ಕಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು.
ಸ್ವಯಂಸೇವಕರಾದ ಸುಶ್ಮಿತಾ ಸ್ವಾಗತಿಸಿ,ವಸಿಷ್ಠ ವಂದಿಸಿದರು. ನಿತನ್ಯ ನಿರೂಪಿಸಿದರು.