ಕೊಯ್ಯೂರು ಗ್ರಾಮದ ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬುದು ಆಧಾರ ರಹಿತ ಆರೋಪವಾಗಿದೆ ಸಂಘದ ಏಳಿಗೆ ಸಹಿಸದ ಮಂದಿ ಹೆಸರು ಹಾಳು ಮಾಡುವ ಹುನ್ನಾರದಿಂದ ಈ ರೀತಿ ಆರೋಪ ಮಾಡುತ್ತಿದ್ದು ಅಗತ್ಯ ದಾಖಲೆಗಳನ್ನು ಒದಗಿಸಲಿ ಎಂದು ಮಲೆಬೆಟ್ಟು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನ.30 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಷ್ಟದಲ್ಲಿ ನಡೆಯುತ್ತಿದ್ದ ಸಂಘವು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಲಾಭದೊಂದಿಗೆ ಮುನ್ನುಗುತ್ತಿದೆ.ಲೆಕ್ಕ ಪರಿಶೋಧನೆಯಲ್ಲಿ ಯಾವುದೇ ನ್ಯೂನ್ಯತೆಗಳು ಇರುವುದಿಲ್ಲ.ಕಳೆದ ಸಾಲಿನಲ್ಲಿ ಸಂಗವು 9 ಲಕ್ಷ ರೂ. ಲಾಭವನ್ನು ಗಳಿಸಿದ್ದು 16 ಲಕ್ಷ ರೂ.ಠೇವಣಿಯನ್ನು ಹೊಂದಿದೆ.ಸಂಘದ ಪ್ರತಿ ಆದಾಯ-ವೆಚ್ಚದ ದಾಖಲೆಗಳು ಇವೆ. ಅವ್ಯವಹಾರ ಆರೋಪದ ಬಗ್ಗೆ ಸಹಕಾರಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ್ದು ಯಾವುದೇ ಆರೋಪ ಸಾಬೀತಾಗಿಲ್ಲ ಎಂಬ ವರದಿಯನ್ನು ನೀಡಿದ್ದಾರೆ ಇದನ್ನು ಸಹಿಸದ ಕೆಲವು ನಿರ್ದೇಶಕರು ಹಾಗೂ ಸದಸ್ಯರು ಅಪಪ್ರಚಾರ ಮಾಡುತ್ತಾ ಸಂಘದ ಹೆಸರು ಕೆಡಿಸುತ್ತಿದ್ದಾರೆ ಎಂದು ಹೇಳಿದರು.
ರಾಜೀನಾಮೆ ನೀಡಿಲ್ಲ: ಸಂಘದ ಎಲ್ಲಾ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗೆ ಉತ್ತರಿಸಿದ ಅವರು ಮಾನಸಿಕ ಒತ್ತಡದಿಂದ ರಾಜೀನಾಮೆ ನೀಡುವ ಬಗ್ಗೆ ಮೀಟಿಂಗ್ ಪುಸ್ತಕದಲ್ಲಿ ನಿರ್ಣಯ ಬರೆಯಲಾಗಿದೆ.ಆದರೆ ನಿರ್ದೇಶಕರು ಹಾಜರಾತಿಗೆ ಮಾತ್ರ ಸಹಿ ಹಾಕಿದ್ದು ರಾಜೀನಾಮೆ ನಿರ್ಣಯಕ್ಕೆ ಸಹಿ ಹಾಕಿಲ್ಲ.ಅಧ್ಯಕ್ಷರು ಮತ್ತು ಕಾರ್ಯದರ್ಶಿ ನ.29ರಂದು ನಡೆದ ಸಭೆಯ ನಿರ್ಣಯಗಳಿಗೆ ಸಹಿ ಮಾಡಿಲ್ಲ.ಆರೋಪ ಸಾಬೀತಾಗುವ ತನಕ ಸಂಘದ ಹಿತ ದೃಷ್ಟಿಯಿಂದ ರಾಜೀನಾಮೆ ನೀಡುವುದಿಲ್ಲ ಎಂದು ಅಧ್ಯಕ್ಷರು ಹಾಗೂ ಪತ್ರಿಕಾಗೋಷ್ಠಿಯಲ್ಲಿದ್ದ ನಿರ್ದೇಶಕರು ಸ್ಪಷ್ಟಿಕರಿಸಿದರು.
ಉಪಾಧ್ಯಕ್ಷ ಗಂಗಯ್ಯ ಗೌಡನಿರ್ದೇಶಕರಾದ ದಾಮೋದರ ಗೌಡ, ಸಂಜೀವ ಮಲೆಕುಡಿಯ, ಶೇಷಪ್ಪ, ಜಯಂತಗೌಡ, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.