ಮಡಂತ್ಯಾರು: “ಶೈಕ್ಷಣಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಕಾರಣವಾದರೆ, ಪಠ್ಯೇತರ ಚಟುವಟಿಕೆಗಳು ಬದುಕನ್ನು ಸುಂದರಗೊಳಿಸಲು ನೆರವಾಗುತ್ತವೆ.ಆದ್ದರಿಂದ ವಿದ್ಯಾರ್ಥಿಗಳು ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು” ಎಂಬುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಸಚಿವರಾದ ಡಾ.ಪ್ರಭಾಕರ ನೀರ್ ಮಾರ್ಗ ಹೇಳಿದರು.
ಅವರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ನ.16ರಂದು ಸಾಹಿತ್ಯ ಸಂಘದ ವತಿಯಿಂದ ‘ಅಭಿವ್ಯಕ್ತಿ’ ಎಂಬ ಆಶಯದಲ್ಲಿ ನಡೆದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ ಅವರು ಮಾತನಾಡುತ್ತಾ “ನಮ್ಮ ಮೌಖಿಕ ಇತಿಹಾಸವನ್ನು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಪರಿಚಯಿಸಿದವರು ಡಾ.ಪ್ರಭಾಕರ ನೀರ್ ಮಾರ್ಗ ಅವರು.ಅವರ ಅನುಭವಗಳನ್ನು ವಿದ್ಯಾರ್ಥಿಗಳು ಗ್ರಹಿಸಬೇಕು ಮತ್ತು ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು” ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ ‘ಪವಿತ್ರ’ ವನ್ನು ಬಿಡುಗಡೆಗೊಳಿಸಲಾಯಿತು.ಸಂಚಿಕೆಯ ಸಂಪಾದಕಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪ್ರೀತಿ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಹಿತ್ಯ ಸಂಘದ ಸಂಯೋಜಕಿ ಡಾ.ಲತಾ ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ದೀಪ್ತಿ.ಕೆ ಧನ್ಯವಾದವಿತ್ತರು.
ವಿದ್ಯಾರ್ಥಿನಿ ಕು.ನಿಖಿತಾ ಅತಿಥಿಗಳನ್ನು ಪರಿಚಯಿಸಿದರು. ಕು. ಮೆಲಾನಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಬರವಣಿಗೆಯ ಕೌಶಲ ವೃದ್ಧಿಸುವ ಬಗ್ಗೆ ಡಾ.ಪ್ರಭಾಕರ ನೀರ್ ಮಾರ್ಗ ಅವರು ಆಯ್ದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು.ಡಾ| ಲತಾ, ಕನ್ನಡ ಉಪನ್ಯಾಸಕಿ ರಾಜೇಶ್ವರಿ ಎಂ, ವಿದ್ಯಾರ್ಥಿ ಮಹಮ್ಮದ್ ರಾಝಿಕ್ ಸಹಕರಿಸಿದರು.