ಧರ್ಮಸ್ಥಳ: ಜಾಗದ ವಿಚಾರವಾಗಿ ಮಹಿಳೆಯರ ಜೊತೆ ತಂಡವೊಂದು ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪದಡಿ ನಾಲ್ವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಹಿಳೆ ನೀಡಿದ ದೂರಿನ ಮೇರೆಗೆ ಒಟಿ ಜಾರ್ಜ್, ಒಟಿ ಕುರಿಯಾಕೋಸ್, ಪ್ರಮೋದ್ ಟಿಎಂ, ಮ್ಯಾಗ್ಯೂ ಟಿಕೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆ ಹಾಗೂ ಆಪಾದಿತರ ನಡುವೆ ಜಾಗದ ವಿಚಾರದಲ್ಲಿ ತಕರಾರು ಇದೆ. ನ.7ರಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ದೂರುದಾರ ಮಹಿಳೆಯ ಪತಿಯ ಸ್ವಾಧೀನದಲ್ಲಿರುವ ಸರಕಾರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಹಿಳೆಯ ಮನೆಯವರಿಗೆ ಯಾವುದೇ ಮಾಹಿತಿ ನೀಡದೆ ಖಾಸಗಿ ಸರ್ವೇಯವರ ಮೂಲಕ ಅಳತೆ ಮಾಡಲು ಬಂದಾಗ ಮಹಿಳೆ ಮತ್ತು ಮನೆಯವರು ತಡೆಯಲು ಹೋಗಿದ್ದಾರೆ.ಆ ಸಮಯದಲ್ಲಿ ಮಹಿಳೆ ಮತ್ತು ಮಹಿಳೆಯೊಂದಿಗೆ ಇದ್ದ ಇನ್ನೋರ್ವ ಮಹಿಳೆಯ ಜೊತೆ ಆರೋಪಿಗಳಾದ ಒ.ಟಿ. ಜಾರ್ಜ್, ಒ.ಟಿ. ಕುರಿಯಾಕೋಸ್, ಪ್ರಮೋದ್ ಟಿ.ಎಂ ಮತ್ತು ಮ್ಯಾಗ್ಯೂ ಟಿ.ಕೆ. ಎಂಬವರು ಅನುಚಿತವಾಗಿ ವರ್ತಿಸಿರುವುದಲ್ಲದೆ ಕೈಯಿಂದ ಹಲ್ಲೆ ನಡೆಸಿದ್ದಾರೆ.ಇದನ್ನು ತಡೆಯಲು ಹೋದ ಮಹಿಳೆಯ ಪತಿಗೂ ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಯಾವುದೇ ರೀತಿಯ ಹಲ್ಲೆ ಹಾಗೂ ನಿಂದನೆ ಮಾಡಿರುವುದಿಲ್ಲ: ಒ.ಟಿ.ಜಾರ್ಜ್
ಗಡಿ ಗುರುತಿಗೆ ಅರ್ಜಿ ಹಾಕಿದ್ದರು.ಅದರ ಕುರಿತಾಗಿ ಸರ್ವೆಯವರು ಪರಿಶೀಲಿಸುತ್ತಿದ್ದಾಗ ನಮ್ಮ ಮನೆಯವರಿಗೆ ಮತ್ತು ಸರ್ವೆಯವರಿಗೆ ನಿಂದಿಸಿರುತ್ತಾರೆ.ಸರ್ವೆಯವರು ಅಳತೆ ಮಾಡದೆ ಹೋಗಿರುತ್ತಾರೆ.ಫಿರ್ಯಾದುದಾರರಿಗೆ ನಾವು ಯಾವುದೇ ರೀತಿಯ ಹಲ್ಲೆ ಹಾಗೂ ನಿಂದನೆಯನ್ನು ಮಾಡಿರುವುದಿಲ್ಲ.ಇದು ಸಂಪೂರ್ಣ ತಪ್ಪು ಮಾಹಿತಿ ಎಂದು ಒ.ಟಿ.ಜಾರ್ಜ್ ರವರು ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ.