ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

0

ಬೆಳ್ತಂಗಡಿ: ವಿಜ್ಞಾನ ಸಾಕಷ್ಟು ಮುಂದುವರಿದಿದ್ದರೂ ಸಹಾ ಕ್ಯಾನ್ಸರ್ ರೋಗವು ಈ ಯುಗದಲ್ಲಿ ಮಾರಕ ರೋಗವಾಗಿ ಪರಿಣಮಿಸಿದೆ. ಆರೋಗ್ಯ ಹದೆಗೆಟ್ಟಾಗ ಮೊದಲ ಹಂತದಲ್ಲಿಯೇ ಸೂಕ್ತ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಉತ್ತಮ ಚಿಕಿತ್ಸೆ ಪಡೆದಾಗ ಕ್ಯಾನ್ಸರ್ ಹಾಗೂ ಇತರ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.ಕ್ಯಾನ್ಸರ್ ರೋಗದ ಬಗ್ಗೆ ಯಾವತ್ತೂ ನಿರ್ಲಕ್ಷ ಮಾಡಬಾರದು.ಆತ್ಮವಿಶ್ವಾಸ ಇದ್ದರೆ ಈ ರೋಗವನ್ನು ಗೆಲ್ಲಬಹುದು ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಅಧ್ಯಕ್ಷರಾದ ಅತೀ ವಂದನೀಯ ಫಾ.ಲಾರೆನ್ಸ್ ಮುಕ್ಕುಯಿರವರು ಅಭಿಪ್ರಾಯಪಟ್ಟರು.

ಅವರು 30 ಅಕ್ಟೋಬರ್ 2023 ರಂದು ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ, ಕಾರಿತಾಸ್ ಇಂಡಿಯಾ ನವದೆಹಲಿ ಸ್ಪರ್ಶ ಕಾರ್ಯಕ್ರಮ, ಎನ್.ಜಿ. ವಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ), ಫ್ಯಾಮಿಲಿ ಅಪೋಸ್ತಲೇಟ್ ಬೆಳ್ತಂಗಡಿ ಧರ್ಮಪ್ರಾಂತ್ಯ, ಪಟ್ಟಣ ಪಂಚಾಯತ್ ಬೆಳ್ತಂಗಡಿ, ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ, ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ ಹಾಗೂ ಅರುಣೋದಯ ಮಹಾಸಂಘ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಬೆಳ್ತಂಗಡಿ ಪೇಟೆಯಲ್ಲಿ ನಡೆದ ಕ್ಯಾನ್ಸರ್ ರೋಗದ ವಿರುದ್ಧದ ಬೃಹತ್ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ತಾರಕೇಶ್ವರಿ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂದನೀಯ ಫಾ.ಬಿನೋಯಿ ಎ.ಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಮೂಲಕ ನಡೆಸಲ್ಪಡುವ ಸ್ಪರ್ಶ- ಕ್ಯಾನ್ಸರ್ ರೋಗದ ವಿರುದ್ಧದ ಅಭಿಯಾನದ ಕುರಿತು ಸಮಗ್ರವಾಗಿ ವಿವರಿಸಿದರು. ಬೆಳ್ತಂಗಡಿ ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಏಲಿಯಮ್ಮ ತೋಮಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅಧ್ಯಕ್ಷೀಯ ಭಾಷಣಗೈದರು.ರೋಶನಿ ನಿಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಈವ್ಲಿನ್ ಬೆನ್ನಿಸ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಫ್ಯಾಮಿಲಿ ಅಪೋಸ್ತಲೇಟ್ ನಿರ್ದೇಶಕರಾದ ವಂದನೀಯ ಫಾ. ತೋಮಸ್ ಪುಲ್ಲಾಟ್ ಹಾಗೂ ಬೆಳ್ತಂಗಡಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಇದರ ಅಧ್ಯಕ್ಷೆ ಮಂಜುಳಾ ಜೋನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಮಹಿಳಾ ಸಶಕ್ತತಾ ಯೋಜನೆಯ ಸಂಯೋಜಕಿ ಸಿಸಿಲ್ಯಾ ತಾವ್ರೊ ಎಲ್ಲರನ್ನು ಸ್ವಾಗತಿಸಿ, ಮಂಜುಳಾ ಜೋನ್ ಎಲ್ಲರಿಗೂ ಧನ್ಯವಾದವಿತ್ತರು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತರಾದ ಮಾರ್ಕ್ ಡಿ’ಸೋಜಾರವರು ಕಾರ್ಯಕ್ರಮ ನಿರೂಪಿಸಿದರು.

ಧರ್ಮಸ್ಥಳ ವಲಯದ ಸಂಘದ ಸದಸ್ಯೆ ಸಂಧ್ಯಾರವರು ರಚಿಸಿ ರಾಗ ಸಂಯೋಜಿಸಿದ ಕ್ಯಾನ್ಸರ್ ರೋಗದ ಬಗ್ಗೆ ಅರಿವಿನ ಹಾಡನ್ನು ಹಾಡಿ ಈ ಕ್ಯಾನ್ಸರ್ ವಿರುದ್ಧದ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಸಭಾ ಕಾರ್ಯಕ್ರಮದ ಬಳಿಕ ಬೆಳ್ತಂಗಡಿ ಪೇಟೆಯಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಮೈಕ್ ಉದ್ಘೋಷಣೆ ಮಾಡಿ, ಸಾರ್ವಜನಿಕರಿಗೆ ಕ್ಯಾನ್ಸರ್ ರೋಗದ ಬಗ್ಗೆ ಕರಪತ್ರ ವಿತರಿಸಲಾಯಿತು.ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗ ಪೀಡಿತ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಅಂಗಡಿ ಮುಂಗಟ್ಟುಗಳ ವರ್ತಕರಿಂದ ಧನ ಸಹಾಯ ಸಂಗ್ರಹಣೆ ಮಾಡಲಾಯಿತು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗ, ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ, ಅರುಣೋದಯ ಮಹಾಸಂಘ ಬೆಳ್ತಂಗಡಿ, ಮಂಗಳೂರು ರೋಶನಿ ನಿಲಯ, ಮಂಗಳೂರು ಸಂತ ಅಲೋಶಿಯಸ್, ಸುಳ್ಯ ತಾಲೂಕಿನ ಬೆಳ್ಳಾರೆ ಡಾ. ಕೆ. ಶಿವರಾಮ್ ಕಾರಂತ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಈ ಜನಜಾಗೃತಿ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಮುಂದಿನ ದಿನದಲ್ಲಿ ಅರ್ಹ ಕ್ಯಾನ್ಸರ್ ರೋಗಿಗಳಿಗೆ ವಿತರಿಸಲಾಗುವುದು.

LEAVE A REPLY

Please enter your comment!
Please enter your name here