ರಾಜ್ಯ ಸರಕಾರ ರೈತರನ್ನು ಸಂಪೂರ್ಣ ಕಡೆಗಣಿಸುತ್ತಿದೆ: ಪ್ರತಾಪಸಿಂಹ ನಾಯಕ್ ಆರೋಪ

0

ಬೆಳ್ತಂಗಡಿ: ಶಾಸಕರೊಳಗಿನ ವೈರುಧ್ಯ, ಜಾತಿ ರಾಜಕಾರಣದ ವೈಮನಸ್ಸು, ಗ್ಯಾರಂಟಿಗಳ ತೊಳಲಾಟಗಳಲ್ಲೇ ರಾಜ್ಯದಲ್ಲಿ ಅಧಿಕಾರವಿರುವ ಕಾಂಗ್ರೇಸ್‌ ಸರಕಾರವು ಮುಳುಗಿದ್ದು, ರಾಜ್ಯದ ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಕ್ಕೆ ಬಂದ ಸರಕಾರ ರೈತರ ಶೂನ್ಯ ಬಡ್ಡಿದರದ ಸಾಲವನ್ನು ಮೂರು ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ನಿರ್ಧಾರ ಮಾಡಿತ್ತು. ಆದರೆ ಇದುವರೆಗೆ ಅದಕ್ಕೆ ಬೇಕಾದ ಹಣದ ವ್ಯವಸ್ಥೆ ಮಾಡದೆ ಕೇವಲ ಆದೇಶ ಮಾತ್ರ ಹೊರಡಿಸಿ ಸುಮ್ಮನೆ ಕೂತಿದೆ. ಅದೇ ರೀತಿ ದೀರ್ಘಾವಧಿ ಸಾಲವನ್ನು ಹತ್ತರಿಂದ ಹದಿನೈದು ಲಕ್ಷಕ್ಕೆ ಏರಿಸುವ ಭರವಸೆ ನೀಡಿತ್ತು. ಇದಕ್ಕೂ ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ನೀಡದೆ ಹಣವನ್ನೂ ನೀಡದೆ ವಂಚಿಸಿದೆ. ಹಿಂದಿನ ಬಿಜೆಪಿ ಸರಕಾರ ರೈತರಿಗೆ ನಾಲ್ಕು ಸಾವಿರ ಕಿಸಾನ್‌ ಸಮ್ಮಾನ್‌ ನೀಡುತ್ತಿತ್ತು ಅದನ್ನು ಈಗಿನ ಸರಕಾರ ನಿಲ್ಲಿಸಿದೆ. ರೈತರ ಮಕ್ಕಳಿಗೆ ಇದ್ದ ವಿದ್ಯಾನಿಧಿಗೂ ತಡೆ ನೀಡಿದೆ.

ದ.ಕ. ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಅಡಕೆ ಕೊಳೆ, ಎಲೆಚುಕ್ಕಿ ರೋಗದಿಂದ ಬಾಧಿತವಾಗುತ್ತಿದೆ. ಇದಕ್ಕೂ ಸರಕಾರ ಯಾವುದೇ ಸ್ಪಂದನೆಯನ್ನು ನೀಡುತ್ತಿಲ್ಲ.ಆಡಳಿತದಲ್ಲಿರುವವರು ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುವುದು ಎಂಬ ಆಲೋಚನೆಯಲ್ಲಿ ಮಾತ್ರ ಬಿದ್ದಿರುವುದರಿಂದ ಸರಕಾರವು ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸಂಕಷ್ಟಕ್ಕೆ ದೂಡಿದೆ.ಇತ್ತ ನೀರಿನ ಕೊರತೆ, ವಿದ್ಯುತ್‌ ಕೊರತೆಯುಂಟಾಗುವ ಸ್ಥಿತಿಯಲ್ಲಿದ್ದು ವಿದ್ಯುತ್‌ ಸಾಲ ಪಡೆಯುವ ಸ್ಥಿತಿಯಲ್ಲಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಚೆಗೆ ಶಿವಮೊಗ್ಗದಲ್ಲಿ ನಡೆದ ಗಲಭೆಗಳ ಸಂದರ್ಭ ಸರಕಾರ ತೋರಿದ ನಡವಳಿಕೆ ರಾಜ್ಯದ ಬಹುಸಂಖ್ಯಾತ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಕಾಂಗ್ರೇಸ್‌ ಬಂದಲ್ಲಿ ತುಷ್ಟೀಕರಣದ ನೀತಿ ಮುನ್ನೆಲೆಗೆ ಬರುತ್ತದೆ. ಭಯೋತ್ಪಾದಕ ಶಕ್ತಿಗಳು ವಿಜೃಂಭಿಸುತ್ತದೆ ಎಂಬ ಮಾತು ರಾಜ್ಯದಲ್ಲಿ ಪಕ್ಕಾ ಸಾಬೀತಾಗಿದೆ. ಸಮಾಜ ಘಾತುಕ ಶಕ್ತಿಗಳನ್ನು ತಕ್ಷಣ ಮಟ್ಟ ಹಾಕುವ ಬದಲು ಅವರನ್ನು ಬ್ರದರ್ಸ್‌ ಎಂದು ಕರೆದು ಪರೋಕ್ಷ ಬೆಂಬಲ ನೀಡುತ್ತಿರುವುದು ಕಂಡು ಬರುತ್ತಿದೆ. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿನ ಆರೋಪಿಗಳ ಪ್ರಕರಣಗಳನ್ನು ಹಿಂತೆಗೆಯುವ ಮೂಲಕ ತುಷ್ಟೀಕರಣದ ನೀತಿಯನ್ನು ಮುಂದುವರಿಸಿದೆ. ದೇಶದ ಸಂಪನ್ಮೂಲವು ಬಡವನ ಮನೆ ತಲುಪಬೇಕು. ಆದರೆ ಕಾಂಗ್ರೇಸ್‌ ಸರಕಾರವು ಕೇವಲ ಅಲ್ಪಸಂಖ್ಯಾತರನ್ನೇ ಗಮನದಲ್ಲಿಟ್ಟು ಕೊಂಡು ಅದರಲ್ಲೂ ಮುಸ್ಲಿಂ ಸಮುದಾಯಕ್ಕೇ ಹೆಚ್ಚಿನ ಒಲವು ತೋರುತ್ತಾ ಕೆಟ್ಟ ಸಂಪ್ರದಾಯವನ್ನು ಮಾಡುತ್ತಾ ಬರುತ್ತಿದೆ. ಕಾಂಗ್ರೇಸ್‌ ಬಂದಿದೆ ಕೋಮು ಗಲಭೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿರುವುದನ್ನು ನೋಡಿದರೆ ಸರಕಾರದಲ್ಲಿ ಹಣ ಇಲ್ಲ ಎಂದು ಸಾಬೀತಾಗಿದೆ. ಗ್ಯಾರಂಟಿಗಳ ಹಿಂದೆ ಬಿದ್ದಿರುವ ಸರಕಾರ ಹಣ ಹೊಂದಿಸಿಕೊಳ್ಳಲು ಪರದಾಡುತ್ತಿದ್ದು ಗ್ರಾಮ ಪಂಚಾಯತಿಗೊಂದು ಮದ್ಯದಂಗಡಿ ತೆರೆಯಲು ಹೊರಟಿರುವುದು ನೋಡಿದರೆ ಈ ಸರಕಾರಕ್ಕೆ ಜನರ ಆರೋಗ್ಯದ ಬಗ್ಗೆ ಕಿಂಚಿತ್‌ ಕಾಳಜಿಯೂ ಇಲ್ಲ ಎಂಬುದು ಸ್ಪಷ್ಟವಾಗಿದೆ. ಉಪಮುಖ್ಯಮಂತ್ರಿಯವರು ಮದ್ಯದಂಗಡಿ ತೆರೆಯಲು ಉಪಕ್ರಮಿಸಿದರೆ, ಮುಖ್ಯಮಂತ್ರಿಯವರು ತೆರೆಯುವುದಿಲ್ಲ ಎಂದು ಹೇಳುತ್ತಿದ್ದಾರೆ.

ಆಮಿಷಗಳನ್ನು ನೀಡಿ ಗೆದ್ದ ಆಮ್‌ ಆದ್ಮಿ ಪಕ್ಷವು ಪಂಜಾಬ್‌ನ್ನು ದಿವಾಳಿಯತ್ತ ಕೊಂಡೊಯುತ್ತಿರುವುದು ಕಾಂಗ್ರೇಸ್‌ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕಿತ್ತು ಆದರೆ ಈ ಸರಕಾರವು ಗ್ಯಾರಂಟಿಗಳಿಗೋಸ್ಕರ ಮೂಲಭೂತ ಸೌಕರ್ಯಗಳ ಅಭಿವೃದ್ದಿಯನ್ನು ಸ್ಥಗಿತಗೊಳಿಸಿದೆ. ಶಾಸರುಗಳು ಅನುದಾನ ಸಿಗದೆ ಅಸಮಾಧಾನಗೊಂಡಿದ್ದಾರೆ. ಉಪಮುಖ್ಯಮಂತ್ರಿಗಳ ಇನ್ನಷ್ಟು ಬೇಕು ಎಂಬ ಕೂಗು ಎದ್ದಿದೆ. ಲಿಂಗಾಯತ ರಾಜಕಾರಣವೂ ಭುಸುಗುಟ್ಟಿದೆ. ಒಟ್ಟಾರೆ ಆಮಿಷದ, ಜಾತಿ ರಾಜಕಾರಣದ, ಮುಸ್ಲಿಂ ಓಲೈಕೆ ಆಟದಲ್ಲಿ ಕರ್ನಾಟಕದ ಭವಿಷ್ಯ ಡೋಲಾಯಮಾನವಾಗಲಿದೆ. ಕಾಂಗ್ರೇಸ್‌ ಸರಕಾರವು ಕರ್ನಾಟಕವನ್ನು ಇನ್ನೊಂದು ಪಂಜಾಬ್‌ ಮಾಡಲು ಹೊರಟಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

p>

LEAVE A REPLY

Please enter your comment!
Please enter your name here