


ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕೃಷ್ಣಪ್ಪ ಸಫಲ್ಯ(60ವ) ಎಂಬವರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಕುರಿತು ಅವರ ಪುತ್ರ ವಿನಯ್ ಕುಮಾರ್ (33ವ) ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಕೃಷ್ಣಪ್ಪ ಸಫಲ್ಯರವರು ಧರ್ಮಸ್ಥಳ ದೇವಸ್ಥಾನದ ಬಾಬ್ತು ಶ್ರೀ ಚಂದ್ರನಾಥ ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ಅವರು ಪ್ರತಿನಿತ್ಯ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದರು. ಸೆ.3ರಂದು ಬೆಳಿಗ್ಗೆ ರೈಸ್ ಮಿಲ್ಲಿಗೆ ಹೋದವರು ಮದ್ಯಾಹ್ನ ಮನೆಗೆ ಬಂದಿಲ್ಲ. ಸಂಜೆ ದೇವಸ್ಥಾನದ ಜಮಾ ಉಗ್ರಾಣದ ಮ್ಯಾನೇಜರ್ ಶ್ರೀಧರ ಹೆಗ್ಡೆ ಎಂಬವರು ಮನೆಗೆ ಬಂದು ಕೃಷ್ಣಪ್ಪ ಸಫಲ್ಯರವರು ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿಸಿಟ್ಟಿರುವ ದೊಡ್ಡ ಗಾತ್ರದ ಸ್ಟೀಲ್ ಪಾತ್ರೆಯ ಒಳಗೆ ನೀರಿನಲ್ಲಿ ಕವುಚಿ ತೇಲಿಕೊಂಡು ಮೃತಪಟ್ಟಿರುವ ರೀತಿಯಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.ನಾವು ಹೋಗಿ ನೋಡಿದಾಗ ಸ್ಟೀಲ್ ಪಾತ್ರೆಯ ಮೇಲ್ಭಾಗವನ್ನು ಅರ್ಧದಷ್ಟು ಸಿಮೆಂಟ್ ಶೀಟ್ ಮುಚ್ಚಲಾಗಿದ್ದು ಕೃಷ್ಣಪ್ಪ ಸಫಲ್ಯರವರು ಸ್ಟೀಲಿನ ದೊಡ್ಡ ಗಾತ್ರದ ಪಾತ್ರೆಯಲ್ಲಿ ತುಂಬಿಸಿಟ್ಟಿದ್ದ ನೀರಿಗೆ ಇಳಿದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಂತೆ ಕಂಡುಬಂದಿದ್ದರು.
ಆದರೆ ಮರಣದ ಸರಿಯಾದ ಕಾರಣ ತಿಳಿದು ಬಂದಿಲ್ಲ ಎಂದು ಕೃಷ್ಣಪ್ಪ ಸಫಲ್ಯರವರ ಪುತ್ರ ವಿನಯ ಕುಮಾರ್ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ 65/2023 ಕಲಂ 174 (iii)& (iv) ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿದೆ.








