ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರವರು ಪತ್ರಿಕಾಗೋಷ್ಠಿಯಲ್ಲಿ ಪೊಟ್ಟು ವಕೀಲ ಎಂದು ಹೇಳಿಕೆ ನೀಡಿ ವಕೀಲ ವೃತ್ತಿಯನ್ನು ನಿಂದಿಸಿರುವ ಬಗ್ಗೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನ್ಯಾಯವಾದಿಗಳಾದ ಬಿ.ಎಂ.ಭಟ್ ಮತ್ತು ಶ್ರೀಕಾಂತ್ ಭಟ್‌ರವರು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.
ಆ.30ರಂದು ಬೆಳ್ತಂಗಡಿಯ ಶಾಸಕರು ಹಾಗೂ ನಮ್ಮ ಸಂಘದ ಸದಸ್ಯರೂ ಆಗಿರುವ ಹರೀಶ್ ಪೂಂಜರವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ನಾಲ್ಕು ಬಾರಿ `ಪೊಟ್ಟು ವಕೀಲ’ ಎನ್ನುವ ಮೂಲಕ ವಕೀಲ ವೃತ್ತಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ.ಇದು ನಮಗೆ ತೀರ ಬೇಸರವನ್ನುಂಟು ಮಾಡಿದೆ.ಓರ್ವ ವಕೀಲರಾಗಿದ್ದುಕೊಂಡು ವಕೀಲ ಸಮುದಾಯವನ್ನು ಈ ರೀತಿ ಕೀಳಾಗಿ ಕಂಡಿರುವ ಶಾಸಕರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ತಮ್ಮ ರಾಜಕೀಯ ತೆವಲಿಗಾಗಿ ವಕೀಲ ವೃತ್ತಿಯನ್ನು ಅವಮಾನಿಸಿರುವ ನಮ್ಮ ಸಂಘದ ಸದಸ್ಯರಾದ ಹರೀಶ್ ಪೂಂಜರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.