ಅಳದಂಗಡಿ: ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ 2023-24 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು, ಕೊಕ್ರಾಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನೋರ್ಬಟ್ ಮಾರ್ಟಿಸ್ ಇವರು ಉದ್ಘಾಟಿಸಿ, ನಿಜವಾದ ನಾಯಕರು ತಾವು ಬೆಳೆಯುವುದಲ್ಲದೇ ಇತರರನ್ನು ಬೆಳಸುತ್ತಾರೆ.ನಾವು ನಿರಹಂಕಾರಿಗಳಾಗಿರಬೇಕು.ಬೀಗಿ ನಡೆಯುವುದಕ್ಕಿಂತ ಬಾಗಿ ನಡೆಯಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಶಿಸ್ತು ಸಂಯಮ ಬೆಳೆಸಿ ಸಮಾಜಮುಖಿಯಾಗಿ ಬೆಳೆಯಬೇಕು.ಸದ್ರಿ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆಯಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ಸನ್ನಿ ಕೆ.ಎಮ್ ರವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.ಅಧ್ಯಕ್ಷೀಯ ನುಡಿಯಲ್ಲಿ, ಸಂಸ್ಥೆಯ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ, ವಿದ್ಯಾರ್ಥಿ ಸಂಘದ ನಾಯಕರು ಉತ್ತಮ ನಾಯಕತ್ವ ಗುಣ ರೂಢಿಸಿಕೊಂಡು ಶಿಸ್ತಿನಿಂದ ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.
ವೇದಿಕೆಯಲ್ಲಿ ಹಿರಿಯ ಉಪನ್ಯಾಸಕಿ ಭಾರತಿ ಎಮ್ ಎಲ್, ವಿದ್ಯಾರ್ಥಿ ನಾಯಕ ಶ್ರವಿತ್, ಕಾರ್ಯದರ್ಶಿ ಜೀವನ್ ಉಪಸ್ಥಿತರಿದ್ದರು.ವಾಣಿಜ್ಯ ಉಪನ್ಯಾಸಕ ಜಯ ಪೂಜಾರಿ ಮಾತನಾಡಿ, ಸ್ವಾಗತಿಸಿದರು.ರಾಜ್ಯಶಾಸ್ತ್ರ ಉಪನ್ಯಾಸಕ ಸಂದೀಪ್ ಅತಿಥಿಗಳನ್ನು ಪರಿಚಯಿಸಿದರು.ಅರ್ಥಶಾಸ್ತ್ರ ಉಪನ್ಯಾಸಕ ಹರೀಶ್ ರೈ ನಿರೂಪಿಸಿ, ಭೌತಶಾಸ್ತ್ರ ಉಪನ್ಯಾಸಕಿ ಪಲ್ಲವಿ ವಂದಿಸಿದರು.