ಉಜಿರೆ: ವಿಶ್ವಕ್ಕೆ ಸಮಾನತೆಯ ದಾರಿ ತೋರಿದ ಧರ್ಮ ವೀರಶೈವ ಲಿಂಗಾಯತ ಧರ್ಮ.ಎದೆಯ ಮೇಲೆ ಲಿಂಗ ಕಟ್ಟಿಕೊಂಡು ವಿಭೂತಿ ಹಚ್ಚಿಕೊಂಡರೆ ಮುಖದ ಲಕ್ಷಣ ಹೆಚ್ಚಿ ಚರ್ಮದ ರಕ್ಷಣೆಯಾಗುವುದು. ಲಿಂಗವಂತರ ಆಚಾರ ಪರಿಪಾಲನೆ ಮಾಡಿ ಮಕ್ಕಳಿಗೆ ಲಿಂಗವಂತರಾಗುವ ಸಂಸ್ಕಾರ ನೀಡಿ.ಸಂಸ್ಕಾರದಿಂದ ಜೀವನ ಸುಗಮವಾಗುವುದು ಎಂದು ದೊಡ್ಡಬಳ್ಳಾಪುರದ ಸೋಮೇಶ್ವರ ಶ್ರೀಮದ್ ದಾಸೋಹ ಸಂಸ್ಥಾನ ಜಗದ್ಗುರು ಬಸವೇಶ್ವರ ಮಹಾಮಠದ ಮ.ನಿ.ಪ್ರ ಸ್ವಾಮಿ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ ನುಡಿದರು.
ಅವರು ಜು.9 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಬೆಳ್ತಂಗಡಿ ತಾಲೂಕು ವೀರಶೈವ ಲಿಂಗಾಯತ ಸಂಘ(ರಿ )ದ ವಾರ್ಷಿಕೋತ್ಸವ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಮಾಜದ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಗಳಲ್ಲಿ ಶೇ.85 ಕ್ಕೂ ಅಧಿಕ ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.ಲಿಂಗ,ವಿಭೂತಿ ಮತ್ತು ರುದ್ರಾಕ್ಷಿ ಲಿಂಗಾಯತ ಧರ್ಮದ ಲಾಂಛನ.ಸಮಾಜ ಉತ್ತುಂಗಕ್ಕೆ ಬರಲು ಸಂಘಟನೆ ಮೂಲಕ ಸಂಸ್ಕಾರವಂತರಾಗಬೇಕು.ದಾಸೋಹದ ಮೂಲಕ ಹಸಿವನ್ನು ನೀಗಿಸಿ, ಸಮಾಜದ ನೋವುಗಳಿಗೆ ಹೆಗಲು ಕೊಟ್ಟ ಧರ್ಮ ವೀರಶೈವ ಲಿಂಗಾಯತ ಧರ್ಮ. ಎಲ್ಲರೂ ಲಿಂಗಧಾರಣೆಯಿಂದ ಪರಿಪೂರ್ಣ ಲಿಂಗಾಯತರಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ಸಹಕರಿಸಿ ಎಂದು ನುಡಿದರು.
ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದ ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಶ್ರೀ ರುದ್ರಮುನಿ ಸ್ವಾಮಿಯವರು ದ.ಕ., ಉಡುಪಿ ಜಿಲ್ಲಾ ಪ್ರಾಂತ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ಬೆರಳೆಣಿಕೆಯಷ್ಟಿದ್ದು ಶಿಕ್ಷಣ, ಆರೋಗ್ಯ, ವಸತಿ ವ್ಯವಸ್ಥೆಯಿದ್ದರೂ ಆಚಾರ ವಿಚಾರ ಮರೆತಿದ್ದಾರೆ.ಉದ್ಯೋಗವನ್ನರಸಿ ಉತ್ತರ ಕರ್ನಾಟಕದಿಂದ ಬಂದ ನಾವು ಎಚ್ಚೆತ್ತು ಚಿಂತನೆ ಮಾಡಿ ಬದಲಾವಣೆಯಾಗದಿದ್ದರೆ ಪರಂಪರೆ ನಶಿಸಿಹೋಗುವುದರಲ್ಲಿ ಸಂದೇಹವಿಲ್ಲ.ಸಮಾಜದ ಪ್ರತಿಯೊಬ್ಬರೂ ಗುರು ಲಿಂಗ ,ಭಸ್ಮ ಧಾರಣೆ ಮಾಡಿ ನಮ್ಮ ಆಚಾರ,ವಿಚಾರ,ಸಂಸ್ಕಾರಗಳನ್ನು ನಿಷ್ಠೆಯಿಂದ ಮಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ರಾಷ್ಟ್ರೀಯ ಉಪಾಧ್ಯಕ್ಷೆ ವಿನುತಾ ರವಿ ಗುರು ಮುಖೇನ ರುದ್ರಾಕ್ಷಿ ದೀಕ್ಷೆ ಪಡೆದು ಲಿಂಗಧಾರಣೆ ಮಾಡಬೇಕು.ಸುಸಂಸ್ಕೃತ ಮಗುವಿಗೆ ಧರ್ಮ, ಸಂಸ್ಕಾರ, ಸಂಸ್ಕೃತಿ ತಿಳಿಸಬೇಕು ಎಂದರು.ಅವಿಭಜಿತ ಜಿಲ್ಲಾ ವೀರಶೈವ ಲಿಂಗಾಯತ ಸಂಘ(ರಿ )ದ ಸತೀಶ್ ಬೆಂಗಳೂರು ನಮ್ಮ ನಡೆ, ನುಡಿಆಲೋಚನೆಗಳು ಸರಿಯಾಗಿದ್ದರೆ ಜೀವನ ಮುಂದೆ ಸಾಗುತ್ತದೆ.ನಮ್ಮ ಸಮಾಜ ಬೆಳೆಯಲು ಸರ್ವ ಧರ್ಮ ಸಮಾನತೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಕಾರಣ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಶಿವಯ್ಯ ಎಸ್.ಎಲ್. ಅವರು ಸಮಾಜದ ಸಂಘಟನೆ ಕಟ್ಟಿ, ಉಳಿಸಿ, ಬೆಳೆಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ.ತಿಂಗಳಲ್ಲಿ ಒಂದು ದಿನ ಜ್ಞಾನಿಗಳ ಪ್ರವಚನದಿಂದ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುವ ಗುರಿಯಿದೆ.ಎಲ್ಲರೂ ಚರ್ಚಿಸಿ ಇತರರಿಂದ ಮಾಹಿತಿ ಪಡೆದು ಮುಂದಿನ ಕಾರ್ಯ ಯೋಜನೆ ಹಮ್ಮಿಕೊಳ್ಳುತ್ತೇವೆ ಎಂದರು.
ಪ್ರತಿಭಾ ಪುರಸ್ಕಾರ ಕಳೆದ ಎಸ್.ಎಸ್.ಎಲ್.ಸಿ, ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ತಾಲೂಕಿನ ಸಮಾಜದ ಶೇ.85 ಕ್ಕಿಂತ ಅಧಿಕ ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಪೂರ್ತಿ, ಪ್ರಜ್ವಲ್, ನಿರೀಕ್ಷ, ದಿಲೀಪ್, ಸಾಗರ್ ಹಡಗಲಿ, ಸುಶ್ಮಿತಾ, ರಂಜನ್, ಚೈತನ್ಯ ಮತ್ತು ಚೇತನ ಅವರನ್ನು ಶ್ರೀಗಳವರು ಪುರಸ್ಕರಿಸಿ ಗೌರವಿಸಿದರು.
ನೇತ್ರಾವತಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮಾಹಿತಿ ನೀಡಿದರು.ಶಿವಪ್ರಸಾದ್, ರಮೇಶ್, ಗಾಯತ್ರಿ ಮತ್ತು ಶಿವಯ್ಯ ಎಸ್.ಎಲ್ ಅತಿಥಿಗಳನ್ನು ಪರಿಚಯಿಸಿದರು.
ಶ್ರೀಗಳವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.ಸಂಘದ ಗೌರವಾಧ್ಯಕ್ಷ ಶೇಖರ್ ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯದರ್ಶಿ ನವೀನ ಪ್ರಕಾಶ ವಾರ್ಷಿಕ ವರದಿ ಮಂಡಿಸಿದರು.ಮೋನಪ್ಪ ಟಿ. ಸ್ವಾಗತಿಸಿ, ಪಂಚಾಕ್ಷರಪ್ಪ ಮತ್ತು ಸೌಮ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಕಲ್ಲೇಶಪ್ಪ ಕೆ.ಬಿ ವಂದಿಸಿದರು.