ಆದಿವಾಸಿಗಳ ಪ್ರಶ್ನೆಗಳಿಗೆ ಸರಕಾರದ ಸ್ಪಂದನೆ- ಬಜೆಟ್ ನ ಕೆಲವು ಅಂಶಗಳಿಗೆ ತಾಲೂಕು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ಸ್ವಾಗತ

0

ಬೆಳ್ತಂಗಡಿ: ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ 2023- 24 ನೇ ಸಾಲಿನ ಆಯವ್ಯಯವನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ವಿಮರ್ಶಾತ್ಮಕವಾಗಿ ಸ್ವಾಗತಿಸಿದೆ.

ಈ ಆಯವ್ಯವನ್ನು ಮಂಡಿಸುವ ಸಂದರ್ಭದಲ್ಲಿಯೂ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ, ಶಾಂತಿ ಮತ್ತು ಸೌಹಾರ್ದತೆಯ ನೆಲೆಬೀಡಾಗಿ ಕಾಪಾಡಿಕೊಳ್ಳುವ ಬದ್ಧತೆಯನ್ನು ಪುನರುಚ್ಚರಿಸಿರುವುದು ಕೂಡ ಸ್ವಾಗತಾರ್ಹ.

ಈ ಬಜೆಟ್ ನಲ್ಲಿ ಆದಿವಾಸಿ ಸಮುದಾಯಗಳ ಬಹು ದಿನಗಳ ಮುಖ್ಯ ಬೇಡಿಕೆಯಾದ ಎಸ್.ಸಿ.ಪಿ ಮತ್ತು ಟಿ.ಎಸ್. ಪಿ.ಉಪಯೋಜನೆಯ ಹಣವನ್ನು ಇತರೆ ಉದ್ದೇಶಗಳಿಗೆ ಮತ್ತು ಇತರೆ ಇಲಾಖೆಗಳ ಬಳಕೆಗೆ ಅವಕಾಶ ಮಾಡಿಕೊಡುತ್ತಿದ್ದ ಕಾಯ್ದೆಯ 7-ಡಿ ಪರಿಚ್ಛೇದವನ್ನು ಕೈ ಬಿಟ್ಟಿರುವುದು ಅತ್ಯಂತ ಸ್ವಾಗತಾರ್ಹವಾದದ್ದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿಸಿರುವ ದಲಿತ-ಬುಡಕಟ್ಟು ಉಪ ಯೋಜನೆ-ಎಸ್. ಸಿ.ಪಿ ಮತ್ತು ಟಿ.ಎಸ್. ಪಿ. ಗೆ ಈ ಬಜೆಟ್ ನಲ್ಲಿ 34,294 ಕೋಟಿ ರೂ.ಗಳನ್ನು ಒದಗಿಸಿರುವುದು ಅಂದರೆ ಹಿಂದಿನ ಬಜೆಟ್ ಗಿಂತ 4000 ಕೋಟಿ ರೂ.ಗಳನ್ನು ಹೆಚ್ಚಿಗೆ ನೀಡಿದ್ದಾರೆ.ಇದನ್ನು ಸ್ವಾಗತಿಸಿರುವ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಪೂರ್ಣ ಹಣವನ್ನು ಈ ಸಮುದಾಯಗಳ ಅಭಿವೃದ್ದಿಗೆ, ಅವರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ವಿನಿಯೋಗಿಸಬೇಕು, ಅದಕ್ಕೆ ತಕ್ಕುದಾದ ಪ್ರಾಯೋಗಿಕ ಕಾರ್ಯ ಯೋಜನೆಯನ್ನು ಸಮುದಾಯಗಳ ಪ್ರತಿನಿಧಿಗಳು, ಸಂಘಟನೆಗಳೊಂದಿಗೆ ಸಮಾಲೋಚಿಸಿ ರೂಪಿಸಬೇಕು ಎಂದು ಆಗ್ರಹಿಸಿದೆ.

ಹಾಗೆಯೇ ಈ ಬಜೆಟ್ ನಲ್ಲಿ ಆದಿವಾಸಿ ಸಮುದಾಯಗಳಿಗೆ ನೀಡಲಾಗುತ್ತಿದ್ದ ಪೌಷ್ಠಿಕ ಆಹಾರವನ್ನು 6 ತಿಂಗಳಿನಿಂದ 12 ತಿಂಗಳಿಗೆ ವಿಸ್ತರಿಸಿರುವುದು ಸ್ವಾಗತಾರ್ಹ.ನಮ್ಮ ಬಹುದಿನಗಳ ಈ ಅಗತ್ಯ ಬೇಡಿಕೆಯನ್ನು ಒಪ್ಪಿದ್ದಾರೆ. ಹಾಗೇ ಮರಾಠಿ ನಾಯ್ಕ ಮುಂತಾದ ಮೂಲ ಆದಿವಾಸಿ ಸಮುದಾಯಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದೆ.

ಇದೇ ಹೊತ್ತಿನಲ್ಲಿ ಆದಿವಾಸಿಗಳ ಬದುಕಿನಲ್ಲಿ ಪರಿವರ್ತನೆ ತರುವಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ 2006 ರಂತೆ ಭೂಮಿ, ಅರಣ್ಯ, ಸಮುದಾಯ ಹಕ್ಕುಗಳು , ಜನರ ಮೂಲಭೂತ ಸೌಕರ್ಯಗಳು ದಕ್ಕುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭೂಮಿ ಖರೀದಿ, ನಿವೇಶನ, ಮನೆ ನಿರ್ಮಾಣಕ್ಕೆ ಅನುದಾನವನ್ನು ಹೆಚ್ಚಿಸಬೇಕು. ಇವಕ್ಕೆ ಅತೀ ಪ್ರಾಮುಖ್ಯತೆಯನ್ನು ನೀಡಬೇಕಿದೆ.

ಈ ದೆಸೆಯಲ್ಲಿ ಸರಕಾರವು ಸಮುದಾಯಗಳು, ಸಂಘಟನೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಮುಖ್ಯಮಂತ್ರಿಗಳ ಅದ್ಯಕ್ಷತೆಯಲ್ಲಿ ಕೂಡಲೇ ಕರೆಯ ಬೇಕೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.

p>

LEAVE A REPLY

Please enter your comment!
Please enter your name here