ಬೆಳ್ತಂಗಡಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಬಿಜೆಪಿ ಸರಕಾರದ ಮಹಿಳಾ ವಿರೋಧಿ ಧೋರಣೆಯಿಂದ ಭಾರತಕ್ಕೆ ಅವಮಾನವಾಗಿ ನಾಚಿಕೆ ಪಡುವಂತಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ಅವರು ಸಂಯುಕ್ತ ರೈತ ಮೋರ್ಚಾದ ಕರೆಯಂತೆ ಎಲ್ಲಾ ಸಂಘಟನೆಗಳ ಜಂಟಿ ವೇದಿಕೆಯಡಿ ಮಹಿಳಾ ಕ್ರೀಡಾ ಪಟುಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಮತ್ತು ನ್ಯಾಯ ಒದಗಿಸಲು ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಜೂ.5ರಂದು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕೋಮುವಾದಿಗಳು, ಮತಾಂಧರು, ಭಯೋತ್ಪಾದಕರು ಮೂವರ ರಕ್ತ ಒಂದೇ ಅದು ಜಾತಿ, ಧರ್ಮ, ಲಿಂಗ ಹೆಸರಲ್ಲಿ ತಾರತಮ್ಯ ಮಾಡಿ ತಾವೇ ಸತ್ಯ, ತಾವೇ ಶ್ರೇಷ್ಟ್ರರೆಂದು ಉಳಿದವರ ಮೇಲೆ ದೌರ್ಜನ್ಯ ನಡೆಸುವ ರಕ್ತವಾಗಿದೆ ಎಂದ ಅವರು, ಇಂದು ದೇಶಕ್ಕೆ ಗೌರವ ತಂದು ಜಗತ್ತಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ ಮಹಿಳಾ ಕ್ರೀಡಾ ಪಟುಗಳ ಮೇಲೆ ಬಿಜೆಪಿಯ ಲೋಕಸಭಾ ಸದಸ್ಯರೂ, ಭಾರತೀಯ ಕುಸ್ತಿ ಪ್ರಾಧಿಕಾರದ ಅದ್ಯಕ್ಷರೂ ಆದ ಭೃಜ್ ಭೂಷಣ್ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ನ್ಯಾಯ ಕೊಡಬೇಕಾದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿ ತನ್ನ ಸರ್ವಾಧಿಕಾರಿ, ಮಹಿಳಾ ವಿರೋಧಿ ಧೋರಣೆಯನ್ನು ಎತ್ತಿ ತೋರಿಸಿದೆ ಎಂದು ಟೀಕಿಸಿದರು. ಪ್ರಜಾಪ್ರಭುತ್ವ ಮೌಲ್ಯಗಳ ಕೊಲ್ಲುತ್ತಾ ಭಾರತೀಯರ ಸಮಾನತೆಯಿಂದ ಕಾಣದ ಕಾರ್ಪರೇಟ್ ಕಂಪೆನಿಗಳ ಹಿತ ಮಾತ್ರ ಕಾಪಾಡಲು ಹಿಂದು ಧರ್ಮವನ್ನು ರಾಜಕೀಯಕ್ಕೆ ಸೇರಿಸಿ ಮಹಿಳೆಯರನ್ನು ಮಾತೆ ಎಂದು ಹೇಳುತ್ತಾ ಮಹಿಳೆಯರ ಸರಕನ್ನಾಗಿ ಕಾಣುವ, ಹಿಂದುಗಳ ಮೂರ್ಖರನ್ನಾಗಿಸಿ ಬಿಜೆಪಿ ಸರಕಾರದ ನಾಶವೇ ದೇಶದ ಭವಿಷ್ಯಕ್ಕೆ ಹೆಬ್ಬಾಗಿಲಾಗಿದೆ ಎಂದರು.
ಈ ಬಗ್ಗೆ ತಾಲೂಕು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ನಂತರ ಪ್ರಧಾನ ಮಂತ್ರಿಯವರಿಗೆ ತಾಲೂಕು ಕಚೇರಿ ಮೂಲಕ ಸಂಘಟನೆಗಳ ಮನವಿ ಪತ್ರ ನೀಡಲಾಯಿತು. ದ.ಕ. ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ ಬೆಳ್ತಂಗಡಿ ತಾಲೂಕು ಸಮಿತಿಯ ಕಾರ್ಯದರ್ಶಿ ಯುವರಾಜ ಸ್ವಾಗತಿಸಿ ಜಯಶ್ರೀ ವಂದಿಸಿದರು. ನೆಬಿಸಾ, ಜಯರಾಮ ಮಯ್ಯ, ಯುವರಾಜ್, ಕಿರಣಪ್ರಭಾ, ರಾಮಚಂದ್ರ, ಸುಜಾತ, ಭವ್ಯ, ಅಶ್ವಿತ ಮೊದಲಾದವರು ಇದ್ದರು.