ಉಜಿರೆ: ರೈತ ಮತ್ತು ನೇಕಾರ ಮಾನವನ ಎರಡು ಕಣ್ಣುಗಳು ಇದ್ದಂತೆ. ಈ ನಿಟ್ಟಿನಲ್ಲಿ ದೇವಾಂಗ ಸಮಾಜದ ಅಭಿವೃದ್ಧಿಗೆ ಶಾಸಕನಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಬದ್ದನಾಗಿದ್ದೇನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಶಾರದಾ ಮಂಟಪ ಉಜಿರೆಯಲ್ಲಿ ಇತ್ತೀಚೆಗೆ ದೇವಾಂಗ ಸಮಾಜ ಉಜಿರೆ ವಲಯ ಮತ್ತು ದೇವಾಂಗ ಸಮಾಜದ ನಾಲ್ಕು ಘಟಕಗಳ ಪದಾಧಿಕಾರಿಗಳ ಪದಗ್ರಹಣ ಮತ್ತು ವಲಯದ ಮಹಾಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.
ದೇವಾಂಗ ಜಗದ್ಗುರು ಹಂಪಿ ಹೇಮಕೂಟ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳನ್ನ ಪೂರ್ಣ ಕುಂಭ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಂಡು ಬಳಿಕ ಆಶೀರ್ವಚನ ಮಾಡಿ ರಾಜ್ಯದಲ್ಲಿ ನಲವತ್ತು ಲಕ್ಷ ಜನಸಂಖ್ಯೆ ಹೊಂದಿರುವ ದೇವಾಂಗ ಸಮಾಜವು ಇತ್ತೀಚಿನ ದಿನಗಳಲ್ಲಿ ಸಂಘಟನೆ ಆಗುತ್ತಿದೆ. ಸಮಾಜದ ಪ್ರಗತಿಗೆ ಪ್ರತಿಯೊಬ್ಬ ಸಮಾಜದ ಭಾಂದವರು ಒಟ್ಟುಗೂಡಿ ಕೈಜೋಡಿಸಿದರೆ ಯಶಸ್ಸು ಸುಲಭ ಸಾಧ್ಯ. ಈ ಬಗ್ಗೆ ಇಲ್ಲಿನ ಪದಾಧಿಕಾರಿಗಳು ಶ್ರಮವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷರು ರವೀಂದ್ರ ಕಲಬುರ್ಗಿ ನೇರವೇರಿಸಿ ರಾಜ್ಯ ಸಂಘದಿಂದ ಸಮಾಜದ ಬಾಂದವರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ದೇವಾಂಗ ಸಮಾಜದ ಉಜಿರೆ ವಲಯದ ಅಧ್ಯಕ್ಷರು ಪರಮೇಶ್ವರ್ ದೊಂಪದಪಲ್ಕೆ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ನೂತನ ಅಧ್ಯಕ್ಷರು ರವಿಚಂದ್ರ ನೇಕಾರ ಮುಂಡಾಜೆ ಇವರಿಗೆ ಜವಾಬ್ದಾರಿ ಹಸ್ತಾಂತರಿಸಿದರು.
ಮಂಗಳೂರು-ಕುಕ್ಕೇಡಿ ಶ್ರೀ ಭಗವತಿ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಕ್ಷೀತಿ ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ನಾಲ್ಕು ಘಟಕಗಳ ಅಧ್ಯಕ್ಷರಾದ ರಾಜಗೋಪಾಲ್ ಮುಂಡಾಜೆ, ಕೃಷ್ಣಪ್ಪ ನೇಕಾರ ಕೆಮ್ಮಾರ, ರಾಜಪ್ಪ ನೇಕಾರ ವಿನಾಯಕನಗರ, ಲೋಕಯ್ಯ ನೇಕಾರ ವಿನಾಯಕನಗರ , ನಿಕಟಪೂರ್ವ ಅಧ್ಯಕ್ಷರು ಭಾಸ್ಕರ್ ಎಂ.ಡಿ, ಮತ್ತುನಿರ್ಗಮಿತ ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೇಶವ ದೇವಾಂಗ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಪ್ರಮೋದ್ ವಿನಾಯಕನಗರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಪಟ್ಟಿಯನ್ನು ವಾಚಿಸಿದರು ವಲಯದ ನೂತನ ಕಾರ್ಯದರ್ಶಿ ಸಂತೋಷ್ ಕುಮಾರ್ ವಿನಾಯಕನಗರ ಸ್ವಾಗತಿಸಿದರು. ಪ್ರೇಮಾನಂದ ಬಿ ಕೆಮ್ಮಾರ ವಂದಿಸಿದರು. ವಲಯದ ಸಂಘಟನಾ ಕಾರ್ಯದರ್ಶಿಗಳಾದ ರೋಹಿತ್ ಕಾಶಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.