ಮುಂಡಾಜೆ-ಕಲ್ಮಂಜ ನಾಗರಿಕರ 25 ವರ್ಷಗಳ ಕನಸು-ನನಸು ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ರೂ.7 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ : ಶಾಸಕ ಬಂಗೇರ

Mundaje kalmanja dharmasthala rastheಮುಂಡಾಜೆ : ಕೆಲ ವರ್ಷಗಳ ಹಿಂದೆ ಮುಂಡಾಜೆಯಲ್ಲಿ ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆಗೆ ಕಾರಣವಾದ, ಕಲ್ಮಂಜ ಗ್ರಾಮದ ಪರಾರಿಯಿಂದ ಮುಂಡಾಜೆ ಗ್ರಾಮ ದೇವಸ್ಥಾನಕ್ಕೆ ಪ್ರತಿಭಟನಾ ಪಾದಯಾತ್ರೆ ಸೇರಿದಂತೆ ಹಲವು ಹೋರಾಟ-ಚಳವಳಿಗಳಿಗೆ ಕಾರಣವಾಗಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದ, ಮುಂಡಾಜೆ ಹಾಗೂ ಕಲ್ಮಂಜ ಗ್ರಾಮದ ನಾಗರಿಕರ 25ಕ್ಕೂ ಹೆಚ್ಚು ವರ್ಷಗಳ ಬೇಡಿಕೆಯಾದ ಮುಂಡಾಜೆ – ಕಲ್ಮಂಜ – ಧರ್ಮಸ್ಥಳ ರಸ್ತೆಯ ಅಭಿವೃದ್ಧಿಗೆ ಕೇಂದ್ರ ಸರಕಾರದ ಸಿ.ಆರ್.ಎಫ್ ನಿಧಿಯಿಂದ ರೂ.7 ಕೋಟಿ ಮಂಜೂರಾಗಿದ್ದು, ಈ ರಸ್ತೆ ಅಭಿವೃದ್ಧಿಗೆ ನ.7ರಂದು ಶಾಸಕ ಕೆ. ವಸಂತ ಬಂಗೇರ ಶಿಲಾನ್ಯಾಸವನ್ನು ನೆರವೇರಿಸಿದರು.
ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಈ ಭಾಗದ ನಾಗರಿಕರು ಹಲವು ವರ್ಷಗಳಿಂದ ವಿವಿಧ ಸರಕಾರಗಳಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಲ್ಲಿಸಿದ ಮನವಿಗಳಿಗೆ ಲೆಕ್ಕವಿಲ್ಲ, ಮುಂಡಾಜೆ ಹಾಗೂ ಕಲ್ಮಂಜದ ಅನೇಕ ಗ್ರಾಮ ಸಭೆಗಳಲ್ಲೂ ಗ್ರಾಮಸ್ಥರು ಬೇಡಿಕೆ ಸಲ್ಲಿಸಿ ನಿರ್ಣಯಿಸಿ ಸರಕಾರಕ್ಕೆ ಕಳುಹಿಸಿದ್ದರು. ಆದರೆ ಇದರಿಂದ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ತೀವ್ರ ಅಸಮಾಧನಗೊಂಡ ಈ ಭಾಗದ ನಾಗರಿಕರು ಪಕ್ಷಬೇಧ ಮರೆತು ಕೆಲ ವರ್ಷಗಳ ಹಿಂದೆ ಕಲ್ಮಂಜ ಗ್ರಾಮದ ಪರಾರಿಯಿಂದ ಮುಂಡಾಜೆಯ ಗ್ರಾಮ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಪಾದಯಾತ್ರೆ ನಡೆಸಿದ್ದರು. ಅಲ್ಲದೆ ಕೆಲ ವರ್ಷಗಳ ಹಿಂದೆ ಮುಂಡಾಜೆಯಲ್ಲಿ ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದ್ದರು. ನಾಗರಿಕರ ಪ್ರತಿಭಟನೆ ವೇಳೆ ಆಗಮಿಸಿದ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಪಡಿಸುವ ಭರವಸೆಗಳನ್ನು ನೀಡಿದ್ದರು. ಈ ರಸ್ತೆಯ ಬಗ್ಗೆ `ಸುದ್ದಿ ಪತ್ರಿಕೆ’ ಜನರ ಧ್ವನಿಯಾಗಿ ಅನೇಕ ಬಾರಿ ಸಚಿತ್ರ ವರದಿಯನ್ನು ಪ್ರಕಟಿಸಿ, ಜನಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಸರಕಾರದ ಗಮನ ಸೆಳೆದಿತ್ತು. ಇದೀಗ ಎಲ್ಲರ ಪ್ರಯತ್ನದ ಫಲವಾಗಿ ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆಗೆ ಮುಕ್ತಿ ದೊರಕಿದ್ದು, ಇದರ ಅಭಿವೃದ್ಧಿಗೆ ರೂ.7 ಕೋಟಿ ಮಂಜೂರುಗೊಂಡಿದೆ.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಕೆ. ವಸಂತ ಬಂಗೇರ ಅವರು ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ನಾನು ರಾಜ್ಯದ ಲೋಕೋಪಯೋಗಿ ಇಲಾಖಾ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದೆ. ಸಚಿವರು ಕೇಂದ್ರ ಸರಕಾರದ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಕೇಂದ್ರ ಸರಕಾರದ ಸಿ.ಆರ್.ಎಫ್ ನಿಧಿಯಿಂದ ರೂ. 7 ಕೋಟಿ ಈ ರಸ್ತೆ ಅಭಿವೃದ್ಧಿಗಾಗಿ ಮಂಜೂರುಗೊಂಡಿದೆ. ಹಿಂದೆ ಈ ರಸ್ತೆಯ ಅಭಿವೃದ್ಧಿಗೆ ಹೋರಾಟ
ನಡೆದಾಗ ಇದನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದೆ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಭರವಸೆಯನ್ನು ಈಡೇರಿಸಿದ್ದೇನೆ ಎಂದು ತಿಳಿಸಿದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕನಾಗಿ ನನ್ನನ್ನು ಜನರು ಆಯ್ಕೆ ಮಾಡಿದ್ದಾರೆ. ತಾಲೂಕಿಗೆ ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ 81 ಗ್ರಾಮಗಳಲ್ಲಿಯೂ ವಿವಿಧ ಕಾಮಗಾರಿಯನ್ನು ಹಂತ, ಹಂತವಾಗಿ ಮಾಡಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚುನಾವಣಾ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಶೇ. 95 ಭರವಸೆಗಳನ್ನು ಈಡೇರಿಸಿದ್ದಾರೆ. ಇನ್ನೂ ಆರು ತಿಂಗಳ ಅವಧಿ ಇದ್ದು, ಉಳಿದ ಶೇ. 5 ಭರವಸೆಗಳನ್ನು ಈಡೇರಿಸಲಿದ್ದಾರೆ ಎಂದು ತಿಳಿಸಿದರು.
1983 ರಲ್ಲಿ ತಾನು ಶಾಸಕನಾಗಿದ್ದಾಗ ತಾಲೂಕಿನ ಸ್ಥಿತಿ ಹೇಗಿತ್ತು. ಈಗ 2017 ತಾಲೂಕಿನ ಸ್ಥಿತಿ ಹೇಗಿದೆ. ಎಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಜನರೇ ವಿಮರ್ಶೆ ಮಾಡಲಿ. ಬೆಳ್ತಂಗಡಿಯ ಪ್ರಥಮ ದರ್ಜೆ ಕಾಲೇಜು ಆರಂಭದಲ್ಲಿ ಅನೇಕ ಸಮಸ್ಯೆಗಳು ಎದುರಾದರೂ, ಆಗಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಸಹಕಾರದಿಂದಾಗಿ ಅದು ಮಂಜೂರುಗೊಂಡು ಇಂದು 900 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಶಾಸಕರು ವಿವರಿಸಿದರು. ಬೆಳ್ತಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಡಯಾಲಿಸಿಸ್ ಯಂತ್ರ ಕಾರ್ಯಾರಂಭಗೊಂಡಿದೆ. ಇನ್ನು ಮೂರು ಯಂತ್ರಗಳು ಇಲ್ಲಿಗೆ ಬರಲಿದ್ದು, ಇದರ ಅಗತ್ಯವಿರುವ ಬಡವರಿಗೆ ಉಚಿತವಾಗಿ ಚಿಕಿತ್ಸೆ ದೊರೆತು ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ನುಡಿದಂತೆ ನಡೆದ ಶಾಸಕ: ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆಯವರು ಮಾತನಾಡಿ ಮುಂಡಾಜೆ-ಧರ್ಮಸ್ಥಳ ರಸ್ತೆ ಅಭಿವೃದ್ಧಿಗೆ ಅನೇಕ ಹೋರಾಟ, ಪ್ರತಿಭಟನೆಗಳು ನಡೆದಿದೆ. ರಸ್ತೆ ಅಗತ್ಯತೆ ಬಗ್ಗೆ ನಾವು ಶಾಸಕರಿಗೆ ಮನವರಿಕೆ ಮಾಡಿದ್ದೇವೆ. ಶಾಸಕರು ಇದನ್ನು ಈಡೇರಿಸುವುದಾಗಿ ಅಂದು ನೀಡಿದ ಭರವಸೆ ಇಂದು ಈಡೇರಿದೆ. ಶಾಸಕರು ನುಡಿದಂತೆ ನಡೆದಿದ್ದಾರೆ, ಈ ಭಾಗದ ಜನರ 25 ವರ್ಷಗಳ ನೋವಿಗೆ ಇಂದು ಪರಿಹಾರ ದೊರಕಿದೆ ಎಂದು ತಿಳಿಸಿದರು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಾಲ್ಕು ಡಯಾಲಿಸಿಸ್ ಯಂತ್ರ ಅಳವಡಿಸುವ ಪ್ರಯತ್ನ ದೊಡ್ಡ ಸಾಧನೆಯಾಗಿದೆ. ಇಚ್ಚಾಶಕ್ತಿ ಇದ್ದರೆ ಯಾವುದೇ ಸಂಕಲ್ಪವನ್ನು ಸಾಧಿಸಬಹುದು ಎಂಬುದು ಇದರಿಂದ ಸಾಬೀತಾಗಿದೆ. ಶಾಸಕರು ಪಕ್ಷ, ಜಾತಿ, ಮತ, ಬೇಧ ಮಾಡದೆ ತಾಲೂಕಿನಲ್ಲಿ ಕೆಲಸ ಮಾಡಿದ್ದಾರೆ ಈ ಕಾಮಗಾರಿ ಆದಷ್ಟು ಶೀಘ್ರ ಪೂರ್ತಿಗೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭ ರಸ್ತೆ ಅಭಿವೃದ್ಧಿಗೆ ಶ್ರಮಿಸಿದ ಶಾಸಕರನ್ನು ಕಲ್ಮಂಜ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು, ಆದಪ್ಪ ಗೌಡ ಕುಟುಂಬದವರು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಊರಿನ ನಾಗರಿಕರು ಹೂಹಾರ ಹಾಕಿ ಅಭಿನಂದಿಸಿದರು. ಈಗ ಮಂಜೂರಾದ ರಸ್ತೆ ಸೋಮಂತ್ತಡ್ಕ ಕ್ರಾಸ್‌ನಿಂದ ಕರಿಯನೆಲದವರೆಗೆ ಸುಮಾರು ಆರೂವರೆ ಕಿ.ಮೀ ಅಭಿವೃದ್ಧಿಯಾಗಲಿದ್ದು, ಉಳಿಕೆಯಾಗುವ 1 ಕಿ.ಮೀ ರಸ್ತೆಯನ್ನು ಇತರ ಯಾವುದಾದರೂ ಯೋಜನೆಯಲ್ಲಿ ಸೇರಿಸಿ ಮಂಜೂರು ಮಾಡುವಂತೆ ನಾಗರಿಕರ ಪರವಾಗಿ ಶಾಸಕರಿಗೆ ಮೋಹನ ಗೌಡ ಕಲ್ಮಂಜ ಮನವಿ ಸಲ್ಲಿಸಿದರು. ಇದರ ಕ್ರಿಯಾಯೋಜನೆ ಮಾಡುವಂತೆ ಶಾಸಕರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ನಮಿತಾ, ತಾ.ಪಂ. ಸದಸ್ಯರಾದ ಲೀಲಾವತಿ, ಜಯರಾಮ, ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಕಲ್ಮಂಜ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಕಲ್ಮಂಜ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತುಕರಾಮ, ವೆಂಕಟ್ರಮಣ ಹೆಬ್ಬಾರ್ ಪರಾರಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಮುಂಡಾಜೆ ಗ್ರಾ.ಪಂ. ಉಪಾಧ್ಯಕ್ಷೆ ವಸಂತಿ, ಕಿಸಾನ್ ಘಟಕದ ಅಧ್ಯಕ್ಷ ನೇಮಿರಾಜ ಗೌಡ, ನಾರಾಯಣ ಗೌಡ ದೇವಸ್ಯ, ಶ್ರೀನಿವಾಸ ರಾವ್ ಕಲ್ಮಂಜ, ಆದಪ್ಪ ಗೌಡ ಕಲ್ಮಂಜ, ಗ್ರಾ.ಪಂ. ಸದಸ್ಯರಾದ ಸುಮನಾ ಗೋಖಲೆ ಮುಂಡಾಜೆ, ಶೋಭಾ ನಾರಾಯಣ ಮುಂಡಾಜೆ, ಸುರೇಶ್ ಮುಂಡಾಜೆ, ಅಶ್ವಿನಿ ಹೆಬ್ಬಾರ್ ಮುಂಡಾಜೆ, ಕಲ್ಮಂಜ ಗ್ರಾ.ಪಂ ಉಪಾಧ್ಯಕ್ಷ ದಿನೇಶ್ ಗೌಡ, ಅಕ್ರಮ-ಸಕ್ರಮ ಸಮಿತಿ ಸದಸ್ಯ ನಾಗರಾಜ ನಾಯ್ಕ ಪಡೀಲು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗ್ರೇಸಿಯನ್ ವೇಗಸ್, ಬಾಲಕೃಷ್ಣ ನಾಯ್ಕ ಪಡೀಲು, ಜಗನ್ನಾಥ ಶೆಟ್ಟಿ ಮದ್ಮಲ್‌ಕಟ್ಟೆ, ರಾಧಕೃಷ್ಣ ಗೌಡ, ರಾಘವೇಂದ್ರ ನೈಯಾಲು, ಪೂವಪ್ಪ ಪೂಜಾರಿ, ಬಾಬು ಪೂಜಾರಿ ಕುಳೂರು, ಹರಿಯಪ್ಪ ನಾಯ್ಕ, ಗುತ್ತಿಗೆದಾರ ಬಾಲರಾಜ್ ಇಂಜಿನಿಯರ್ ಕೇಶವ ಮೂರ್ತಿ, ಪಿಡಿಒಗಳಾದ ಸಂಜೀವ ನಾಯ್ಕ ಮುಂಡಾಜೆ, ತಾರಾನಾಥ ನಾಯ್ಕ ಕಲ್ಮಂಜ, ಸಿಬ್ಬಂದಿ ಪರಮೇಶ್ವರ್, ಶಾಂತಪ್ಪ ಕಲ್ಮಂಜ, ಕೃಷ್ಣಪ್ಪ, ಜಯರಾಮ, ಶ್ರೀಮತಿ ತುಳಸಿ, ಜಾನಕಿ, ಶ್ರೀಧರ ನಾಯ್ಕ, ಗುಲಾಬಿ, ಹರ್ಷೇಂದ್ರ, ವೀರಪ್ಪ ಗೌಡ, ಅಣ್ಣು ಪೂಜಾರಿ, ಉಮೇಶ್ ಗೌಡ, ಹರಿಶ್ಚಂದ್ರ ಗೌಡ, ಜಯಾನಂದ ಗೌಡ ಮೊದಲಾದವರು ಉಪಸ್ಥಿತರಿದ್ದರು. ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸ್ವಾಗತಿಸಿದರು. ಶಶಿಧರ್ ಠೋಸರ್ ಕಾರ್ಯಕ್ರಮ ನಿರೂಪಿಸಿ, ಯಂಗ್‌ಚಾಲೆಂಜರ್‍ಸ್ ಕ್ರೀಡಾ ಸಂಘ ಮುಂಡಾಜೆಯ ಸಂಚಾಲಕ ನಾಮದೇವ ರಾವ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.