ಇಬ್ಬರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯಕ್ಷಗಾನ: ಅಶೋಕ ಭಟ್ – ಪತ್ರಿಕೋದ್ಯಮ: ದೇವಿಪ್ರಸಾದ್

  Jilla rajyosthava prashasthiಬೆಳ್ತಂಗಡಿ ತಾಲೂಕಿನ ಇಬ್ಬರು ಸಾಧಕರಿಗೆ ಈ ಬಾರಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಖ್ಯಾತ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಹಾಗೂ ಅಪೂರ್ವ ಸಂಘಟಕ ಅಶೋಕ ಭಟ್ಟ ಉಜಿರೆ ಮತ್ತು ಜೈಕನ್ನಡಮ್ಮ ಪತ್ರಿಕೆ ಸಂಪಾದಕ ದೇವಿ ಪ್ರಸಾದ್ ಅವರೇ ಈ ಗೌರವಕ್ಕೆ ಪಾತ್ರರಾಗಿರುವವರು.
ಅಶೋಕ ಭಟ್ಟ ಉಜಿರೆ ಅವರ ಸಂಕ್ಷಿಪ್ತ ಪರಿಚಯ:
ಮೂಲತಃ ಕಾಸರಗೋಡಿನ ಪೆರ್ಲ ಈಶ್ವರ ಭಟ್ಟ ಎನ್ ಮತ್ತು ಕಲ್ಯಾಣಿಅಮ್ಮ ದಂಪತಿ ಪುತ್ರರಾಗಿರುವ ಅಶೋಕ ಭಟ್ಟ ಅವರು ಪ್ರಸ್ತುತ ಉಜಿರೆಯಲ್ಲಿ ನೆಲೆಸಿದ್ದಾರೆ. ಕಾಲೇಜು ಜೀವನದಿಂದಲೇ ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಸೆಳೆತ ಹೊಂದಿದ್ದ ಅವರು ಎಸ್.ಬಿ. ನರೇಂದ್ರ ಕುಮಾರ್ ಧರ್ಮಸ್ಥಳ ಇವರಿಂದ ಯಕ್ಷನೃತ್ಯ ಗುರು, ಡಾ| ಶೇಣಿ ಗೋಪಾಲಕೃಷ್ಣ ಭಟ್ ಅವರಿಂದ ಅರ್ಥಗಾರಿಕೆ ಪ್ರೇರಣೆ, ಗೋವಿಂದ ಭಟ್ಟ ಅವರಿಂದ ವೇಷಗಾರಿಕೆಗೆ ಪ್ರೇರಣೆ ಪಡೆದು ಯಕ್ಷಗಾನ ಕ್ಷೇತ್ರಕ್ಕೆ ತನ್ನನ್ನು ಅರ್ಪಿಸಿಕೊಂಡರು. ತೆಂಕು ಮತ್ತು ಬಡಗು ಉಭಯ ತಿಟ್ಟುಗಳ ಸವ್ಯಸಾಚಿ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ೩೭ ವರ್ಷ, ತಾಳಮದ್ದಳೆ ಅರ್ಥದಾರಿಯಾಗಿ ೩೦ ವರ್ಷಗಳಿಂದ ಮನೆಮಾತಾಗಿದ್ದಾರೆ. ಉತ್ತಮ ವಾಗ್ಮಿಗಳು, ಉಪನ್ಯಾಸಕರು, ಸಂಪನ್ಮೂಲ ವ್ಯಕ್ತಿಗಳು, ಪ್ರವಚನಕಾರರು ಹಾಗೂ ಅಪೂರ್ವ ಸಂಘಟಕರೂ ಆಗಿರುವ ಅವರು ಹೊಸನಗರ ಮೇಳದಲ್ಲಿ ೭ ವರ್ಷ ವ್ಯವಸ್ಥಾಪಕ ಮತ್ತು ಮುಖ್ಯ ವೇಷಧಾರಿಯಾಗಿ, ಯಕ್ಷಗಾನ ಬಯಲಾಟ ಅಕಾಡಮಿ ಮಾಜಿ ಸದಸ್ಯರಾಗಿ, ಆಕಾಶವಾಣಿ ಬಿ. ಹೈ ಗ್ರೇಡ್ ಕಲಾವಿದರಾಗಿ, ಉಜಿರೆ ಗ್ರಾ.ಪಂ. ಮಾಜಿ ಸದಸ್ಯರಾಗಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಸ್ಥಾಪಕ ಸಂಚಾಲಕರಾಗಿ, ಎಸ್‌ಡಿಎಂ ಯಕ್ಷಗಾನ ತಂಡದ ನಿರ್ದೇಶಕರಾಗಿ, ಯಕ್ಷಗಾನ ಬಯಲಾಟ ತೀರ್ಪುಗಾರರಾಗಿ, ಸೇರಿದಂತೆ ಪೂರ್ಣಪ್ರಮಾಣದಲ್ಲಿ ತನ್ನನ್ನು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
೪೮ ವಾರಗಳ ಸಂಪೂರ್ಣ ಮಹಾಭಾರತ ಹಾಗೂ ೧೮ ವಾರಗಳ ಸಂಪೂರ್ಣ ರಾಮಾಯಣ ತಾಳಮದ್ದಳೆ ಆಯೋಜನೆ, ಬಹರೈನ್ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಸೇರಿದಂತೆ ನಾಡಿನಾಧ್ಯಂತ ಕಾರ್ಯಕ್ರಮ ನೀಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಶೇಣಿ, ಸಾಮಗ, ಪೆರ್ಲ, ತೆಕ್ಕಟ್ಟೆ, ಕುಂಬ್ಲೆ, ಜೋಷಿ, ಶಾಸ್ತ್ರಿ ಮೊದಲಾದ ಹಿರಿಯರೊಂದಿಗೆ ಅರ್ಥವಿಸಿದ ಕೀರ್ತಿ ಸೇರಿದಂತೆ ನಾಡಿನಾಧ್ಯಂತ ಅವರು ಪ್ರಸಿದ್ಧಿ ಪಡೆದಿದ್ದಾರೆ. ತನ್ನ ಈ ಸಾಧನೆಯ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ವಿಜಯ ರಾಘವ ಪಡುವೆಟ್ನಾಯ ಅವರ ಸಹಕಾರ ಮಾರ್ಗದರ್ಶನವಿರುದನ್ನು ವಿಧೇಯನಾಗಿ ನೆನಪಿಸಿಕೊಳ್ಳುವ ಅವರಿಗೆ ನಾಡಿನ ಹತ್ತು ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ.
ದೇವಿಪ್ರಸಾದ್ ಅವರ ಸಂಕ್ಷಿಪ್ತ ಪರಿಚಯ:
ಬೆಳ್ತಂಗಡಿ ಶಂಕರ ನಾರಾಯಣ ರಾವ್ ಮತ್ತು ನಿವೃತ್ತ ಶಿಕ್ಷಕಿ ಮೀರಾ ಬಾಯಿ ದಂಪತಿ ಪುತ್ರ ದೇವಿ ಪ್ರಸಾದ್ ಅವರು ಕಳೆದ ೨೦ ವರ್ಷಗಳಿಂದ ಬೆಳ್ತಂಗಡಿಯಲ್ಲಿ ಜೈಕನ್ನಡಮ್ಮ ಕೂಸು ಎನ್ನುವ ಗ್ರಾಮೀಣ ಕನ್ನಡ ವಾರಪತ್ರಿಕೆ ನಡೆಸಿಕೊಂಡು ಬರುತ್ತಿದ್ದಾರೆ. ಮಂಜುಶ್ರೀ ಮುದ್ರಣಾಲಯ ಸಂಸ್ಥೆ ನಡೆಸುತ್ತಿರುವ ಅವರು ಪತ್ರಿಕೆಯ ಪ್ರಧಾನ ಸಂಪಾದಕರಾಗಿ, ಪ್ರಕಾಶಕರೂ ಆಗಿದ್ದಾರೆ. ಅವರ ಸಂಪಾದಕೀಯ ಬರಹದ ಪುಸ್ತಕಗಳು ಇತ್ತೀಚೆಗೆ ಲೋಕಾರ್ಪಣೆಯಾಗಿದೆ.
ನಾಟಕ, ಏಕಪಾತ್ರಾಭಿನಯಗಳ ಮೂಲಕವೂ ಅವರು ಕಲಾವಿದರಾಗಿ ಗುರುತಿಸಿಕೊಂಡಿದ್ದು, ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.