ತಾಲೂಕು ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕನ್ನಡ ನೆಲ-ಜಲ ರಕ್ಷಣೆಗೆ ಸಂಘಟಿತರಾಗೋಣ : ತಹಶೀಲ್ದಾರ್

Thaluku kannada rajyosthavaಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನ.1 ರಂದು ವಾಣಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರುಗಿತು.
ಧ್ವಜಾರೋಹಣವನ್ನು ನೆರವೇರಿಸಿ ಧ್ವಜವಂದನೆಯನ್ನು ಸ್ವೀಕರಿಸಿದ ಬೆಳ್ತಂಗಡಿ ಪ್ರಭಾರ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರು ಸಂದೇಶ ನೀಡಿ, ಮೈಸೂರು ರಾಜ್ಯದ ಕೆಲ ಭಾಗಗಳನ್ನು ಸೇರಿಸಿ ಕರ್ನಾಟಕ ರಾಜ್ಯ ನಿರ್ಮಾಣವಾದ ದಿನವನ್ನು ನಾವು ಕನ್ನಡ ರಾಜ್ಯೋತ್ಸವವಾಗಿ ನಾಡ ಹಬ್ಬವಾಗಿ ಆಚರಿಸುತ್ತಿದ್ದೇವೆ. ಈ ಏಕೀಕರಣಕ್ಕಾಗಿ ಹಲವಾರು ಮಂದಿ ದುಡಿದಿದ್ದಾರೆ. ಕನ್ನಡಕ್ಕೆ ೮ ಜ್ಞಾನ ಪೀಠ ಪ್ರಶಸ್ತಿ ಬಂದಿದೆ. ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾವೆಲ್ಲ ಸಂಕಲ್ಪ ಮಾಡಬೇಕು. ನಮ್ಮ ಭಾಷೆ, ನೆಲ, ಜಲಕ್ಕೆ ಯಾವುದೇ ಸಮಸ್ಯೆ ಬಂದಾಗ ನಾವೆಲ್ಲ ಸಂಘಟಿತರಾಗಿ ಹೋರಾಟ ನಡೆಸಿ ಕಾಪಾಡುವ ಕಾರ್ಯವನ್ನು ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಭಾಷಣಕಾರ ನಿಡ್ಲೆ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ವಿನಾಯಕ ಜೋಶಿ ಮಾತನಾಡಿ, ನಾವು ಭಾಷೆಯನ್ನು ಬೆಳೆಸುವಲ್ಲಿ ಎಡವಿದ್ದು, ಆಂಗ್ಲ ಭಾಷಾ ವ್ಯಾಮೋಹದಿಂದಾಗಿ ಇಂದು ನಾವು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಮಾತನಾಡದ ಸ್ಥಿತಿಯಲ್ಲಿದ್ದೇವೆ ಎಂದರು. ದೇಶಕ್ಕೆ ಸ್ವಾತಂತ್ರ್ಯಬಂದ ಬಳಿಕ ಸಾಹಿತಿಗಳು, ಕವಿಗಳು, ಬರಹಗಾರರು ಕನ್ನಡದ ಉಳಿವಿಗಾಗಿ ಜನ ಜಾಗೃತಿ ಮೂಡಿಸುವ ಕೆಲಸಗಳನ್ನು ನಡೆಸುತ್ತಾ ಬಂದಿದ್ದಾರೆ, ಅನೇಕ ಚಲನ ಚಿತ್ರಗಳಲ್ಲಿಯೂ ಜಾಗೃತಿ ಸಂದೇಶ ನೀಡಲಾಗುತ್ತಿದೆ.
ನಾವು ಇತರ ಭಾಷೆಗಳನ್ನು ಗೌರವಿಸುವುದರ ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆಯಬಾರದು, ಮಕ್ಕಳು ಮೊಬೈಲ್, ಕಂಪ್ಯೂಟರ್ ಬಳಕೆ ದೂರ ಮಾಡಿ ಕನ್ನಡ ಪುಸ್ತಕ, ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಇದರ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಬೇಕು ಎಂದು ಸಲಹೆಯಿತ್ತರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿದ್ದರು.
ವೇದಿಕೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ನಿವೃತ್ತ ಪ್ರಾಂಶುಪಾಲ ಎಂ.ಆರ್. ಜೈನ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್, ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತ ಬಂಗೇರ, ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು, ಯಶೋಧರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಮಾಧ್ಯಮದಲ್ಲಿ 125 ಅಂಕಗಳನ್ನು ಪಡೆದ 43 ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸ ಲಾಯಿತು.
ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಹಾಯಕ ಕೃಷಿ ನಿರ್ದೇಶಕ ತಿಲಕ್‌ಪ್ರಸಾದ್‌ಜೀ ಸ್ವಾಗತಿಸಿದರು. ವಾಣಿ ಕಾಲೇಜಿನ ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿ, ತಾಲೂಕು ಸಂಯೋಜಕ ಜಯಾನಂದ ಲಾಯಿಲ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.