ಧರ್ಮಸ್ಥಳ ಲಕ್ಷದೀಪೋತ್ಸವ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಾಲೋಚನಾ ಸಭೆ ಸಮರ್ಪಣಾ ಭಾವದ ಕಾರ್ಯಕ್ರಮ ಯಶಸ್ವಿ: ಡಾ| ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1

Lakshadeepa press meetಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನ.13 ರಿಂದ ನ.18ರ ವರೆಗೆ ನಡೆಯಲಿರುವ ಲಕ್ಷ ದೀಪೋತ್ಸವದ ಅಂಗವಾಗಿ ಸೂಕ್ತ ಸುವ್ಯವಸ್ಥೆಗೆ ದ.ಕ. ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳ ಸಮಾಲೋಚನಾ ಸಭೆಯು ಅ.31ರಂದು ಇಲ್ಲಿಯ ಸನ್ನಿಧಿ ಅತಿಥಿ ಗೃಹ ಸಭಾಭವನದಲ್ಲಿ ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಲಕ್ಷ ದೀಪೋತ್ಸವದ ಮೊದಲ ಆಮಂತ್ರಣ ಪತ್ರಿಕೆಯನ್ನು ಸಚಿವ ರಮಾನಾಥ ರೈಯವರಿಗೆ ನೀಡಿ, ಮಾತನಾಡಿ ಧರ್ಮಸ್ಥಳ ಕ್ಷೇತ್ರ ವಿವಿಧ ಯೋಜನೆಗಳ ಮೂಲಕ ಸರಕಾರದ ಕಾರ್ಯಕ್ರಮ ಅನುಷ್ಠಾನಕ್ಕೆ ವಿಶೇಷ ಸಹಕಾರ ನೀಡುತ್ತಿದೆ. ಧರ್ಮಸ್ಥಳ ಕ್ಷೇತ್ರದಿಂದಾಗಿ ತಾಲೂಕಿಗೆ ಹಾಗೂ ಜಿಲ್ಲೆಗೆ ವಿಶೇಷ ಗೌರವ ಬಂದಿದೆ ಎಂದು ತಿಳಿಸಿದರು. ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಎಲ್ಲಾ ಜಾತಿ, ಮತ, ಧರ್ಮದವರು ಬರುತ್ತಾರೆ. ಇದರಿಂದಾಗಿ ದೀಪೋತ್ಸವಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಯಶಸ್ವಿಯಾಗಿ ನಿರ್ವಹಿಸಬೇಕಾಗಿದೆ. ಈ ಹಿಂದೆಯೂ ಎಲ್ಲಾ ಇಲಾಖೆಗಳು ಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲರೂ ಸಮರ್ಪಣಾಭಾವದಿಂದ ತಮ್ಮ ಕರ್ತವ್ಯ ಎಂದು ತಿಳಿದು ಸೇವೆ ನೀಡಿದಾಗ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ನುಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ ಲಕ್ಷದೀಪೋತ್ಸವ ಈ ಜಿಲ್ಲೆಯ ಅತೀ ದೊಡ್ಡ ಉತ್ಸವವಾಗಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದರ ಯಶಸ್ವಿಗೆ ಸಹಕಾರ ನೀಡಬೇಕು, ಯಾವುದೇ ಗೊಂದಲಗಳು, ಸಮಸ್ಯೆಗಳು ಉಂಟಾಗದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು, ಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯೂ ಹೆಚ್ಚಿನ ನಿಗಾ ವಹಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಬರುವ ಬಿಸಿರೋಡು-ಉಜಿರೆ, ಉಪ್ಪಿನಂಗಡಿ-ಗುರುವಾಯನಕೆರೆ-ಉಜಿರೆ, ಪೆರಿಯಶಾಂತಿ-ಕೊಕ್ಕಡ, ಗೋಳಿತೊಟ್ಟು- ಪಟ್ರಮೆ, ಚಾರ್ಮಾಡಿ-ಉಜಿರೆ, ಕಾರ್ಕಳ- ಗುರುವಾಯನಕೆರೆ, ಮೂಡಬಿದ್ರೆ-ಗುರುವಾಯನಕೆರೆ, ಬೆಳಾಲು-ಧರ್ಮಸ್ಥಳ, ಮುಂಡ್ರುಪ್ಪಾಡಿ-ಧರ್ಮಸ್ಥಳ, ನೆರಿಯ-ಪುದುವೆಟ್ಟು, ಶಿಶಿಲ-ಅರಸಿನಮಕ್ಕಿ-ಕಳೆಂಜ, ಧರ್ಮಸ್ಥಳ ಬಸ್‌ನಿಲ್ದಾಣ-ಪೆಟ್ರೋಲ್ ಪಂಪು, ಧರ್ಮಸ್ಥಳ ಡಿಪ್ಪೋ ರಸ್ತೆ ಅಭಿವೃದ್ಧಿ ಬಗ್ಗೆ ಸಚಿವರು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಎಲ್ಲಾ ರಸ್ತೆಗಳನ್ನು ಲಕ್ಷದೀಪೋತ್ಸವ ಮೊದಲು ಅಭಿವೃದ್ಧಿಗೆ ಸೂಚನೆ ನೀಡಿದರು. ಲೋಕೋಪಯೋಗಿ ಇಲಾಖೆ ಸ.ಕಾ ಇಂಜಿನಿಯರ್ ಶಿವಪ್ರಸಾದ ಅಜಿಲ, ಮತ್ತು ತೌಸೀಫ್ ಅಹಮ್ಮದ್, ಜಿ.ಪಂ. ಇಂಜಿನಿಯರ್ ಸುಜಿತ್‌ಕುಮಾರ್ ಇಲಾಖಾ ಕೆಲಸಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ, ವಾಹನ ಟ್ರಾಫಿಕ್ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು. ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ತರಿಸಿಕೊಳ್ಳುವುದಾಗಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ
ತಿಳಿಸಿದರು. ಈ ಬಾರಿ 200 ಹೋಮ್‌ಗಾರ್ಡ್‌ಗಳನ್ನು ನೀಡುವುದಾಗಿ ಜಿಲ್ಲಾ ಕಮಾಂಡರ್ ಡಾ| ಮುರಳಿ ಮೋಹನ್ ಚಿಂತೂರು ಹೇಳಿದರು.
ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ ಹೆಚ್ಚುವರಿ ಬಸ್ಸುಗಳನ್ನು ಓಡಿಸುವುದು, ವಿದ್ಯುತ್ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿಗಳ ತಂಡದ ನಿಯೋಜನೆ, ಅಗ್ನಿಶಾಮಕ ದಳದಿಂದ ಎರಡು ಹೆಚ್ಚುವರಿ ಅಗ್ನಿಶಾಮಕ ವಾಹನದ ನಿಯೋಜನೆ, ಜಿ.ಪಂ. ರಸ್ತೆಗಳ ಅಭಿವೃದ್ಧಿ, ಗ್ರಾ.ಪಂ. ದಿಂದ ಕುಡಿಯುವ ನೀರು ಮತ್ತು ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳುವುದು ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ಹಿಂದೆ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಇಲಾಖೆಗಳು ಈ ವರ್ಷವೂ ಮಳಿಗೆ ತೆರೆಯಲು ಸಚಿವರು ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಮತ್ತು ಜಿ.ಪಂ. ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮಾತನಾಡಿಸುವುದಾಗಿ ಸಚಿವರು ಭರವಸೆಯಿತ್ತರು.
ಸಭೆಯಲ್ಲಿ ಡಿ. ಹರ್ಷೇಂದ್ರ ಕುಮಾರ್, ದ.ಕ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಪುತ್ತೂರು ಎ.ಸಿ. ರಘುನಂದನ್‌ಮೂರ್ತಿ, ಧಾರ್ಮಿಕ ದತ್ತಿ ಆಯುಕ್ತೆ ಪ್ರಮೀಳಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್. ಮಂಜುನಾಥ್, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಕೆಎಸ್‌ಆರ್‌ಟಿಸಿ ಡಿ.ಸಿ. ದೀಪಕ್ ಕುಮಾರ್, ಪುತ್ತೂರು ಆರ್.ಟಿ.ಒ ಪೆಲಿಕ್ಸ್ ಡಿ’ಸೋಜಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಬಸವರಾಜ್ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್, ಮೆಸ್ಕಾಂ ಸ.ಕ. ಇಂಜಿನಿಯರ್ ಶಿವಶಂಕರ್, ಅಕ್ಷರದಾಸೋಹ ಯೋಜನೆ ಸ.ಕಾ. ನಿರ್ದೇಶಕ ಲಕ್ಷ್ಮಣ ಶೆಟ್ಟಿ, ತೋಟಗಾರಿಕಾ ಇಲಾಖೆಯ ಶಿವಪ್ರಸಾದ್ ಮತ್ತು ಸಂಜೀವ, ಸಹಾಯಕ ಕೃಷಿ ನಿರ್ದೇಶಕ ತಿಲಕ್‌ಪ್ರಸಾದ್, ರೇಷ್ಮೆ ಇಲಾಖಾಧಿಕಾರಿ ಬಿ.ಕೆ. ನಾಯ್ಕ್, ಹೋಮ್‌ಗಾರ್ಡ್ ತಾಲೂಕು ಘಟಕಾಧಿಕಾರಿ ಜಯಾನಂದ, ಸಿಡಿಪಿಒ ಪ್ರಿಯಾ ಅಗ್ನೇಶ್, ಆರ್‌ಎಫ್‌ಒ ಬೆಳ್ತಂಗಡಿಯ ಸುಬ್ಬಯ್ಯ ನಾಯ್ಕ್, ಆರೋಗ್ಯಾಧಿಕಾರಿ ಡಾ| ಕಲಾಮಧು, ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಧರ್ಮಸ್ಥಳ ಗ್ರಾ.ಪಂ ಪಿಡಿಒ ಉಮೇಶ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಮೊದಲಾದವರು ಭಾಗವಹಿಸಿದ್ದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ ಸ್ವಾಗತಿಸಿದರು. ಸುಭಾಶ್ಚಂದ್ರ ಜೈನ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.