ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಂಗೇರರನ್ನು ಬಹುಮತದಿಂದ ಆಯ್ಕೆ ಮಾಡಿ ಕಳುಹಿಸಿ : ಮುಖ್ಯಮಂತ್ರಿ ಸಿದ್ಧರಾಮಯ್ಯ

Advt_NewsUnder_1
Advt_NewsUnder_1
Advt_NewsUnder_1

CM belthangady betiಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಅವರು 2018ರಲ್ಲಿ ನಡೆಯುವ ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು, ಅವರನ್ನು ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿ ಕೊಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆ ನೀಡಿದರು.
ಅವರು ಅ.22ರಂದು ಧರ್ಮಸ್ಥಳದ ಕಾರ್ಯಕ್ರಮಕ್ಕೆ ತೆರಳುವ ಹಾದಿಯಲ್ಲಿ ಬೆಳ್ತಂಗಡಿ ಬಸ್‌ನಿಲ್ದಾಣದ ಬಳಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ವಸಂತ ಬಂಗೇರ ಅವರು ರಾಜ್ಯದ ಹಿರಿಯ ಶಾಸಕರಾಗಿದ್ದಾರೆ. ನಾನು ಮತ್ತು ಬಂಗೇರ ಒಮ್ಮೆಲೆ ಶಾಸಕರಾಗಿ ವಿಧಾನ ಸಭೆ ಪ್ರವೇಶಿಸಿದವರು. ಎಲ್ಲಾ ಶಾಸಕರುಗಳಿಗಿಂತ ಬಂಗೇರರಲ್ಲಿ ನನಗೆ ಅತೀ ಹೆಚ್ಚು ಪ್ರೀತಿ. ಕಳೆದ ಬಾರಿ ಚುನಾವಣೆ ಸಮಯ ಆರೋಗ್ಯ ಸರಿ ಇಲ್ಲ, ನಿಲ್ಲುವುದಿಲ್ಲ ಎಂದು ಹೇಳಿದಾಗ ನಾನು ಒತ್ತಾಯ ಮಾಡಿದ್ದರಿಂದ ನಿಂತು ಶಾಸಕರಾಗಿದ್ದಾರೆ. 2018ರಲ್ಲಿ ನಡೆಯುವ ಚುನಾವಣೆಗೂ ಬಂಗೇರರು ಸ್ಪರ್ಧಿಸಲಿದ್ದಾರೆ. ಅವರನ್ನು ಬಹುಮತದಿಂದ ಆರಿಸಿ ಕಳುಹಿಸಬೇಕು. ಅವರು ನೀಡಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತೇನೆ. ಮುಂದಿನ ತಿಂಗಳಲ್ಲಿ ಬೆಳ್ತಂಗಡಿ ವಿಧಾನ ಸೌಧ ಉದ್ಘಾಟನೆಗೆ ಬೆಳ್ತಂಗಡಿಗೆ ಮತ್ತೆ ಆಗಮಿಸಲಿದ್ದೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಶಾಸಕ ಕೆ. ವಸಂತ ಬಂಗೇರ ಅವರು ಸ್ವಾಗತಿಸಿ, ಜನಜಾಗೃತಿ ವೇದಿಕೆಯವರ ಬೇಡಿಕೆಯಂತೆ ರಾಜ್ಯದಲ್ಲಿ ಪಾನ ನಿಷೇಧವನ್ನು ಜಾರಿ ಮಾಡಬೇಕು, ಕೃಷಿಕರಿಗೆ ಕಿರುಕುಳ ಕೊಡುತ್ತಿರುವ ಮತ್ತು ಕೃಷಿ ನಾಶ ಮಾಡಿದ ಇಬ್ಬರು ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಗಳನ್ನು ಅಮಾನತುಗೊಳಿಸಬೇಕು, ಮಾತೃಪೂರ್ಣ ಯೋಜನೆ ಮತ್ತು ಪಡಿತರಕ್ಕೆ ಕುಚ್ಚಿಲಕ್ಕಿ ನೀಡಬೇಕು, ಮಾತೃಪೂರ್ಣ ಯೋಜನೆ ಇರುವುದರಿಂದ ಅಂಗನವಾಡಿಗೆ ಪ್ರತ್ಯೇಕ ಸಹಾಯಕರು ಮತ್ತು ಮನೆ, ಮನೆಗೆ ಆಹಾರ ತಲುಪಿಸಲು ಒಬ್ಬರು ಸಹಾಯಕರನ್ನು ನೇಮಿಸಬೇಕು, ಅಂಗನವಾಡಿ ನೌಕರರ ವೇತನ ಇನ್ನೂ ಹೆಚ್ಚಿಸಬೇಕು, ಬೆಳ್ತಂಗಡಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ರೂ.12 ಕೋಟಿಯಲ್ಲಿ 8 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಉಳಿದ ರೂ.4 ಕೋಟಿಯನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಎಂಬ ಬೇಡಿಕೆಯನ್ನು ಮುಖ್ಯ ಮಂತ್ರಿಗಳ ಮುಂದಿಟ್ಟರು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಪೌರಾಡಳಿತ ಸಚಿವ ಈಶ್ವರ ಬಿ. ಖಂಡ್ರೆ, ವಿಧಾನ ಪರಿಷತ್ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಮೊದಿನ್ ಬಾವ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಗ್ರಾಮೀಣ ಸಮಿತಿ ಅಧ್ಯಕ್ಷ ಶ್ರೀನಿವಾಸ ಕಿಣಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಕೆಪಿಸಿಸಿ ಸದಸ್ಯರಾದ ಪೀತಾಂಬರ ಹೆರಾಜೆ, ರಾಮಚಂದ್ರ ಗೌಡ, ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್, ಬೆಳ್ತಂಗಡಿ ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಡಿಸಿಸಿ ಸದಸ್ಯರಾದ ಜಗದೀಶ್ ಡಿ., ಲೋಕೇಶ್ವರಿ ವಿನಯಚಂದ್ರ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಕಿಸಾನ್ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ರೆಖ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಎಸ್‌ಸಿ ಘಟಕದ ಅಧ್ಯಕ್ಷ ಬಿ.ಕೆ. ವಸಂತ ಹಾಗೂ ಸುಜೀತಾ ವಿ. ಬಂಗೇರ, ಯೋಗೀಶ್ ಕುಮಾರ್ ನಡಕ್ಕರ, ಚಂದು ಎಲ್, ಗ್ರೇಸಿಯನ್ ವೇಗಸ್ ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.