ಶಾಸಕ ವಸಂತ ಬಂಗೇರ ಬಿಜೆಪಿ ಸೇರ್ಪಡೆ ಪ್ರಚಾರ ಸುಳ್ಳು ವದಂತಿ: ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ವಿ ಕಿಣಿ

congress

congress1ಬೆಳ್ತಂಗಡಿ : ಜನಪರ ಅಭಿವೃದ್ಧಿ ಕಾಮಗಾರಿಗಳ ಮೂಲಕ ತಾಲೂಕಿನ ಜನರ ಮನಗೆದ್ದಿರುವ ಶಾಸಕ ವಸಂತ ಬಂಗೇರ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಬಗ್ಗೆ ಕೆಲ ದೃಷ್ಯ ಮತ್ತು ವೆಬ್‌ಸೈಟ್ ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾಗಿದ್ದು ಇದೊಂದು ಸುಳ್ಳು ಸುದ್ದಿ ಎಂದು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀನಿವಾಸ ವಿ ಕಿಣಿ ಸ್ಪಷ್ಟಪಡಿಸಿದರು. ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ಅ. 26 ರಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಟಿಯಲ್ಲಿ ಅವರು ಪಕ್ಷದ ಕಡೆಯಿಂದ ಸ್ಪಷ್ಟನೆ ನೀಡಿದರು. ಪುತ್ತೂರಿನ ಶಾಸಕಿಯ ಹೆಸರೂ ಸೇರಿಸಿಕೊಂಡು ದೃಷ್ಯ ಮಾಧ್ಯಮದಲ್ಲಿ ಬಂದಿರುವ ವರದಿಗೆ ಶಾಸಕರು ಅ. 26 ರಂದು ಅದೇ ಮಾಧ್ಯಮಕ್ಕೆ ಕರೆಮಾಡಿ ಕೇಳಿದಾಗ, ತಮಗೆ ಕಲ್ಲಡ್ಕದ ಭರತ್ ಕುಮಾರ್ ಎಂಬವರು ನೀಡಿದ ಮಾಹಿತಿಯಾಧರಿಸಿ ವರದಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಆ ವ್ಯಕ್ತಿ ಯಾರೇ ಆಗಿರಲಿ. ಬಂಗೇರರು ಬಿಜೆಪಿ ಸೇರುತ್ತಾರೆ ಎಂಬುದಾಗಿ ಮಾತುಕತೆ ಆಗಿದೆ ಎಂಬ ಬಗ್ಗೆ ಭರತ್ ಅವರಲ್ಲಿ ದಾಖಲೆ ಇದ್ದರೆ ಮಾಧ್ಯಮದ ಮುಂದೆ ಬಹಿರಂಗಪಡಿಸಲಿ, ಇಲ್ಲದಿದ್ದರೆ ಬೇಶರತ್ ಆಗಿ ಅವರು ಶಾಸಕ ಬಳಿ, ಅಥವಾ ಪತ್ರಿಕಾಗೋಷ್ಟಿ ಮೂಲಕ ಬಹಿರಂಗ ಕ್ಷಮೆ ಯಾಚಿಸಲಿ ಎಂದು ಕಿಣಿ ಆಗ್ರಹಿಸಿದರು. 2018 ರ ಚುನಾವಣೆಯಲ್ಲಿ ವಸಂತ ಬಂಗೇರರ ಬೆಳ್ತಂಗಡಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಅವರೇ ಜಯಶಾಲಿಯೂ ಆಗಲಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಅವರನ್ನು ಭೇಟಿಯಾದ ವೇಣುಗೋಪಾಲ್-ಡಾ. ಪರಮೇಶ್ವರ್ ಅವರು ನೀವೇ ಚುನಾವಣೆಗೆ ಸ್ಪರ್ಧಿಬೇಕು ಎಂದು ಕೇಳಿಕೊಂಡದ್ದಕ್ಕೆ ಅವರೂ ಸಹಮತ ಸೂಚಿಸಿದ್ದಾರೆ. ಅವರು ಸ್ಪರ್ಧಿಸಿದರೆ ಖಂಡಿತಾ ಗೆಲ್ಲುತ್ತಾರೆ ಎಂದು ಭಯದಿಂದ ವಿಪಕ್ಷಗಳು ಪದೇ ಪದೇ ಬಂಗೇರರ ಹೆಸರು ಬಳಸಿ ಈ ರೀತಿ ಅಪಪ್ರಚಾರ ನಡೆಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದೂ ತಿಳಿಸಿದರು. ಈ ಬಗ್ಗೆ ಶಾಸಕ ಕೆ. ವಸಂತ ಬಂಗೇರ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಮುಖ್ಯಮಂತ್ರಿಗಳು ಇತ್ತೀಚೆಗೆ ಬೆಳ್ತಂಗಡಿಗೆ ಬಂದಿದ್ದಾಗ ಮುಂದಿನ ಚುನಾವಣೆಯಲ್ಲಿ ವಸಂತ ಬಂಗೇರರೇ ಬೆಳ್ತಂಗಡಿಯಿಂದ ಅಭ್ಯರ್ಥಿ. ಅವರನ್ನು ಗೆಲ್ಲಿಸಿಕೊಡಬೇಕು ಎಂದು ಬಹಿರಂಗವಾಗಿಯೇ ಕೇಳಿಕೊಂಡಿದ್ದಾರೆ. ಕೆಪಿಸಿಸಿ ಕೈ ಸೇರಿರುವ ಗುಪ್ತಚರ ವರದಿಯ ಪ್ರಕಾರ ಕೂಡ ಬಂಗೇರರು ಗೆಲ್ಲಲಿದ್ದಾರೆಂಬುದು ಖಚಿತಗೊಂಡಿದೆ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕೂಡ ಬಂಗೇರರೇ ಅಭ್ಯರ್ಥಿ ಎಂದಿದ್ದಾರೆ. ಹೀಗಿರುವಾಗ ಅಪಪ್ರಚಾರ ಸರಿಯಲ್ಲ ಎಂದರು. ಕೆಪಿಸಿಸಿ ಸದಸ್ಯ ಪೀತಾಂಬರ ಹೇರಾಜೆ ಮಾತನಾಡಿ, ಬಂಗೇರರು ಪಕ್ಷಕ್ಕೆ ನಿಧಿ, ಜನತೆಗೂ ನಿಧಿ, ಯಾರೋ ದಾರಿಹೋಕರು ಹೇಳುತ್ತಾರೆ ಎಂದು ಮಾಧ್ಯಮದವರು ಜವಾಬ್ಧಾರಿರಹಿತರಾಗಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು. ಗೋಷ್ಟಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ಅಜ್ರಿ, ಹಿರಿಯ ಕಾಂಗ್ರೆಸ್ಸಿಗ ಇ ಸುಂದರ ಗೌಡ ಉಜಿರೆ, ಕೆಪಿಸಿಸಿ ಸದಸ್ಯ ರಾಮಚಂದ್ರ ಗೌಡ, ಡಿಸಿಸಿ ಸದಸ್ಯ ಡಿ ಜಗಧೀಶ್, ಪಟ್ಟಣ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಜೈನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಗ್ರಾಮೀಣ ಬ್ಲಾಕ್ ಕಾರ್ಯದರ್ಶಿ ಕರುಣಾಕರ ಮರೋಡಿ ಉಪಸ್ಥಿತರಿದ್ದು ಪೂರಕವಾಗಿ ಮಾತನಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.