ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪದಗ್ರಹಣ ಸಮಾರಂಭ ಸಂಘದಿಂದ ವಿದ್ಯಾರ್ಥಿಗಳಿಗೆ ಗರಿಷ್ಠಮಟ್ಟದ ಆರ್ಥಿಕ ಸಹಾಯ: ಬಂಗೇರ

Gurunarayana padagrahanaಬೆಳ್ತಂಗಡಿ: ಶ್ರೀ ಗುರುನಾರಾಯಣ ಸಂಘವನ್ನು ಆರ್ಥಿಕವಾಗಿ ಸಧೃಢಗೊಳಿಸುವ ಮೂಲಕ ಸಮಾಜದ ಬಡ ವಿದ್ಯಾರ್ಥಿಗಳಿಗೆ ಪರಿಪೂರ್ಣ ಶಿಕ್ಷಣ ದೊರೆಯಲು ಸಂಘದಿಂದ ಗರಿಷ್ಠಮಟ್ಟದ ಆರ್ಥಿಕ ಸಹಾಯ ನೀಡಬೇಕು ಹಾಗೂ ಸಮಾಜದ ಬಡ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು. ಅವರು ಅ.22ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ
ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನೂತನ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋದನೆ ನೆರವೇರಿಸಿ ಮಾತನಾಡಿದರು.
56 ವರ್ಷಗಳ ಹಿಂದೆ ಈ ಸಂಘ ಸ್ಥಾಪನೆಯಾಗಿದ್ದು, ಈ ಸಮಾಜದ ಮೂರು ಮಂದಿ ತಾಲೂಕಿನ ಶಾಸಕರಾಗಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಸಮಾಜದ ಗೌರವ ಕಾಪಾಡಿದ್ದೇವೆ. ನಾವು ಕೋಟಿ ಚೆನ್ನಯರ ವಂಶದಲ್ಲಿ ಹುಟ್ಟಿದವರು. ಸಮಾಜದಲ್ಲಿ ಏನಾದರೂ ಸಾಧನೆ ಮಾಡಬೇಕು. ಸಂಘವನ್ನು ಬಲಿಷ್ಠವಾಗಿ ಬೆಳೆಸುವುದರ ಜೊತೆಗೆ ಉತ್ತಮ ಕಾರ್ಯಕ್ರಮ ಹಾಕಿಕೊಳ್ಳಬೇಕು, ಸಂಘದ ಆರ್ಥಿಕತೆಯನ್ನು ಹೆಚ್ಚಿಸಿ ಆದಾಯದ ಶೇ 50 ರಿಂದ ಶೇ65 ರಷ್ಟು ಭಾಗವನ್ನು ವಿದ್ಯಾರ್ಥಿಗಳಿಗೆ ನೀಡಬೇಕು, ಬಡಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಇದು ನಮ್ಮ ಸಂಘದ ಸಾಧನೆಯಾಗಬೇಕು ಎಲ್ಲಾ ಸಮಾಜದವರು ಇದೇ ರೀತಿ ಮಾಡಿದರೆ ದೇಶದ ಬಡತನ ನಿರ್ಮೂಲವಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಗೀರಥ ಜಿ. ಅವರು ಮಾತನಾಡಿ, ನಮ್ಮ ಸೇವಾ ಅವಧಿಯಲ್ಲಿ ಸಂಘ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ಹಾಗೂ ಪ್ರೋತ್ಸಾಹ ನೀಡಿ ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಘದ ನೂತನ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ಮಾತನಾಡಿ ಸಂಘ ಈ ವರ್ಷದಿಂದ ಸಂಘಟನೆ, ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಕಾರ್ಯ ನಿರ್ವಹಿಸಲಿದೆ. ಸಂಘಟನೆಯ ಹಿತದೃಷ್ಟಿಯಿಂದ ಉಪ ಸಮಿತಿಯವರು ಸೇರಿದಂತೆ ಎಲ್ಲರೂ ಪೂರ್ಣ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಪ್ರಾಧ್ಯಾಪಕರು ಮತ್ತು ತರಬೇತುದಾರರಾದ ಪುತ್ತೂರಿನ ಡಾ. ರಾಜೇಶ್ ಬೆಜ್ಜಂಗಳ ದಿಕ್ಸೂಚಿ ಭಾಷಣ ಮಾಡಿ ಶ್ರೀ ನಾರಾಯಣ ಗುರುಗಳ ತತ್ವ-ಸಿದ್ಧಾಂತವನ್ನು ಅನುಸರಿಸುತ್ತಿರುವ ನಾವು ಶಿಕ್ಷಣದಲ್ಲಿ ಹಿಂದುಳಿದಿರುವ ಬಗ್ಗೆ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಪ್ರತಿಯೊಬ್ಬ ಷೋಷಕರು ತಮ್ಮ ಮಕ್ಕಳ ಮೇಲೆ ಗಮನವನ್ನು ಇಟ್ಟುಕೊಳ್ಳಬೇಕು, ನಮ್ಮ ಸಂಬಂಧ, ಆಚಾರ, ಸಂಸ್ಕೃತಿಯ ಬಗ್ಗೆ ನಮ್ಮೊಳಗೆ ಜಾಗೃತಿ ಮೂಡಿಸಬೇಕು, ಸಾಧನೆ ಮಾಡುವರಿಗೆ ಪ್ರೋತ್ಸಾಹ ನೀಡಬೇಕು, ಯುವ ವಾಹಿನಿ ಘಟಕವನ್ನು ಪ್ರತಿ ಗ್ರಾಮದಲ್ಲಿ ರಚಿಸಿ ಸಕ್ರೀಯಗೊಳಿಸಬೇಕು ಎಂದು ಕರೆನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಅಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ, ಮಾಜಿ ಅಧ್ಯಕ್ಷ ನಿವೃತ್ತ ಎಸ್.ಪಿ. ಪೀತಾಂಬರ ಹೆರಾಜೆ, ಮಾಜಿ ಅಧ್ಯಕ್ಷ ಪಿ.ಕೆ. ರಾಜುಪೂಜಾರಿ ಅವರು ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿ, ಸಲಹೆಗಳನ್ನು ನೀಡಿದರು. ಮಾಜಿ ಅಧ್ಯಕ್ಷ ಗಂಗಾಧರ ಮಿತ್ತಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿನೋದಿನಿರಾಮಪ್ಪ ಮತ್ತು ಬಳಗದವರ ಪ್ರಾರ್ಥನೆ ಬಳಿಕ ಸಂಘದ ಉಪಾಧ್ಯಕ್ಷೆ ಸುಜೀತಾ ವಿ. ಬಂಗೇರ ಸ್ವಾಗತಿಸಿ, ಪದ್ಮನಾಭ ಸಾಲ್ಯಾನ್ ಮತ್ತು ಸದಾನಂದ ಸಾಲ್ಯಾನ್ ಬಳೆಂಜ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರಾಕೇಶ್ ಕುಮಾರ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.