ಮಹಿಳಾ ಸಬಲೀಕರಣ ರೈತರನ್ನು ಸ್ವಾಭಿಮಾನಿಯಾಗಿಸುವಲ್ಲಿ ಸರಕಾರ ಮತ್ತು ಗ್ರಾ. ಯೋಜನೆ ಚಿಂತನೆ ಸಮಾನಾಂತರವಾದುದು: ಸಿಎಂ ಸಿದ್ಧರಾಮಯ್ಯ

Dharmasthala labhamsha vitharaneಧರ್ಮಸ್ಥಳ : ರೈತರಿಗೆ ಅಗತ್ಯ ನೆರವು ನೀಡುವ ಮೂಲಕ ಅವರ ಬಾಳನ್ನು ಹಸನುಗೊಳಿಸಿ ಕೃಷಿ ಲಾಭದಾಯಕ ವಾಗುವಂತೆ ಮಾಡಿ ಪ್ರತಿಯೋರ್ವ ರೈತನನ್ನು ಸ್ವಾಭಿಮಾನಿಯಾಗಿಸುವುದು ಹಾಗೂ ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಿ ಸ್ವಾವಲಂಬಿಗಳಾಗಿ ಮಾಡುವಲ್ಲಿ ಹಾಕಿಕೊಳ್ಳಲಾಗಿರುವ ಯೋಜನೆಗಳಲ್ಲಿ ಸರಕಾರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಚಿಂತನೆ ಸಮಾನಾಂ ತರವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸ್ವ ಸಹಾಯ ಸಂಘಗಳಿಂದ ಸಂಗ್ರಹವಾದ ೨೦೧ ಕೋಟಿ ರೂ. ಗಳ ಲಾಭಾಂಶ ಮೊತ್ತವನ್ನು ಸದಸ್ಯರಿಗೆ ಹಂಚಿಕೆ ಮಾಡುವ ಕಾರ್ಯಕ್ರಮ ಅ. 22ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಜರುಗಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದಾಖಲೆಗಳ ಸರಕಾರ :
ರಾಜಸ್ಥಾನ ಹೊರತುಪಡಿಸಿ ಅತಿ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯವಿದ್ದರೆ ಅದು ಕರ್ನಾಟಕ ರಾಜ್ಯ. ರಾಜ್ಯದಲ್ಲಿ ಮಳೆ ಆಧರಿಸಿ ಕೃಷಿ ನಡೆಯುತ್ತಿದೆ. ಈ ವರ್ಷ ಮಂಜುನಾಥ ಸ್ವಾಮಿಯ ದಯೆಯಿಂದ ಉತ್ತಮ ಮಳೆಯಾಗಿದೆ. ಬೆಂಗಳೂರಿನಲ್ಲಂತೂ 110 ವರ್ಷಗಳ ನಂತರ ಇಷ್ಟೊಂದು ಪ್ರಮಾಣದ ಮಳೆಯಾಗಿದೆ. ಒಣಭೂಮಿ ಇರುವಲ್ಲಿ ಕೃಷಿಗೆ ಪೂರಕವಾಗಿ ಕೃಷಿ ಹೊಂಡಗಳನ್ನು ರಚಿಸಲು ಸರಕಾರ ಅನುದಾನ ನೀಡಿದ್ದು, 3 ವರ್ಷಗಳಲ್ಲಿ 1.60 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿದೆ. ಇದಕ್ಕಾಗಿ 800 ಕೋಟಿ ರೂ. ಅನುದಾನ ವಿನಿಯೋಗಿಸಿದೆ ಎಂದರು.
ಧರ್ಮಸ್ಥಳದಂತೆ ಸ್ತ್ರೀಶಕ್ತಿ ಸಂಘಗಳನ್ನು ರಚಿಸಿಕೊಂಡಿರುವ ಸರಕಾರವು ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಹಿಂದೆ 4 ಶೇ. ಬಡ್ಡಿ ದರದಲ್ಲಿ ಕೊಡಮಾಡುತ್ತಿದ್ದ ಸಾಲ ಸೌಲಭ್ಯವನ್ನು 3 ಲಕ್ಷ ಮಿತಿಯೊಳಗೆ ಬಡ್ಡಿ ರಹಿತ
ಸಾಲವಾಗಿ ಪರಿವರ್ತಿಸಿದೆ. ಹಳ್ಳಿಗಳ ದೇಶವಾದ ಭಾರತದಲ್ಲಿ ಗ್ರಾಮೀಣ ಜನರ ಬದುಕಿನಲ್ಲಿ ಬದಲಾವಣೆ ಕಾಣಬೇಕೆಂಬುದೇ ಸರಕಾರದ ಉದ್ದೇಶ ಎಂದರು.
ಮುಂದಿನ ನ. 15 ರಿಂದ ದೇಶದಲ್ಲೇ ಮೊತ್ತಮೊದಲ ಬಾರಿಗೆ ಎಪಿಎಲ್ ಕಾರ್ಡ್‌ದಾರರಿಗೆ 100 ರೂ. ಪಾವತಿ ಮಾಡಿ ಉಚಿತ ಆರೋಗ್ಯ ಸೇವೆ ಪಡೆಯುವ ಸೌಲಭ್ಯ ದೊರೆಯುತ್ತಿದ್ದು ಇದಕ್ಕಾಗಿ ಸರಕಾರ 1,400 ಕೋಟಿ ರೂ. ತೊಡಗಿಸಲಿದೆ.
ಹಸಿವು ಮುಕ್ತ ಕರ್ನಾಟಕದ ಕನಸು ಕಂಡ ರಾಜ್ಯ ಸರಕಾರದಿಂದ ಈಗಾಗಲೇ ಬಿಪಿಎಲ್ ಕಾರ್ಡ್‌ದಾರ ಪ್ರತೀ ಸದಸ್ಯರಿಗೆ ತಲಾ 7 ಕೆ.ಜಿ. ಯಂತೆ ಉಚಿತ ಅಕ್ಕಿ ನೀಡುವ ಮೂಲಕ ಯಾರೊಬ್ಬರೂ ಎರಡು ಹೊತ್ತು ಊಟವಿಲ್ಲದೆ ಕಷ್ಟಪಡಬಾರದು ಎಂದು ಸಂಕಲ್ಪಿಸಿ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಜನರು ಗುಳೆ ಹೋಗುವುದು ತಪ್ಪಿದೆ, ಇದಕ್ಕೆ 3,900 ಕೋಟಿ ರೂ. ಖರ್ಚು ಮಾಡಲಾಗಿದೆ, 1.2 ಕೋಟಿ ಮಕ್ಕಳಿಗೆ ಬಿಸಿಯೂಟದ ಪ್ರಯೋಜನ ದೊರೆಯುತ್ತಿದೆ.
ಮುಂದಿನ ಜನವರಿಯಲ್ಲಿ 500 ಕಡೆ ಇಂದಿರಾ ಕ್ಯಾಂಟೀನ್ :
ಜನಸಾಮಾನ್ಯರಿಗೆ ನೇರ ಪ್ರಯೋಜನವಾಗುವಂತೆ 5 ರೂ. ಗೆ ಉಪಹಾರ, 10 ರೂ. ಗೆ ಹೊಟ್ಟೆತುಂಬ ಊಟ ನೀಡುವ ಇಂದಿರಾ ಕ್ಯಾಂಟೀನ್ ತೆರೆಯಲಾಗಿದ್ದು ಮುಂದಿನ ಜನವರಿಯೊಳಗಾಗಿ ಬೆಳ್ತಂಗಡಿ ತಾಲೂಕು ಕೇಂದ್ರ ಸೇರಿದಂತೆ ಎಲ್ಲಾ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ 500 ಇಂದಿರಾ ಕ್ಯಾಂಟೀನ್ ತೆರೆಯಲಾಗು ವುದು ಎಂದು ಸಿಎಂ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ವಸಂತ ಬಂಗೇರ ವಹಿಸಿದ್ದರು.
ಗ್ರಾ. ಯೋ. ಅಧ್ಯಕ್ಷರು ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಾನು ಹೆಗ್ಗಡೆ ಪಟ್ಟಾಭಿಷಿಕ್ತನಾಗಿ 50 ವರ್ಷ ತುಂಬುತ್ತಿದ್ದು, ಇಷ್ಟೂ ವರ್ಷದಲ್ಲಿ ಕ್ಷೇತ್ರದ ಪಾರಂಪರಿಕ ದಾನ ನಡೆಸಿಕೊಂಡು ಬರುವುದರ ಜೊತೆಗೆ ಕಾಲಯೋಚಿತ ದಾನಗಳನ್ನು, ಯೋಜನೆಗಳನ್ನು ಮಾಡುತ್ತಾ ಸಾಮಾಜಿಕ ಉನ್ನತಿಗೆ ಮತ್ತು ಪ್ರತಿಯೊಬ್ಬರಲ್ಲೂ ಸ್ವಾಭಿಮಾನದ ಕಲ್ಪನೆ ಮೂಡುವಂತೆ ಮಾಡಿದ್ದೇನೆ, ನಮ್ಮ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರುಡ್‌ಸೆಟ್ ಯೋಜನೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ, ತಮಗೆ ತಾವೇ ಸಹಾಯ ಮಾಡಿಕೊಳ್ಳುವ ಸ್ವಸಹಾಯ ಸಂಘಗಳನ್ನು ಕಟ್ಟಿ, ಅಂದು ತೀರಾ ಬಡತನದಲ್ಲಿದ್ದ ಜನಾಂಗವನ್ನು ಇಂದು ಮಧ್ಯಮವರ್ಗಕ್ಕೆ ತಂದುನಿಲ್ಲಿಸಿದ್ದೇವೆ, ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿವಿಧ ಯೋಜನೆಗಳು ಪೂರಕವಾಗಿ ಕೆಲಸ ಮಾಡಿವೆ, ನಾವು ಅವಕಾಶಗಳ ನಿರ್ಮಾಣ ಮಾಡುತ್ತಿದ್ದೇವೆ, ಯೋಜನೆ ಕಲ್ಪನೆ ಮೂಡಿಸಿ ಗರಿಗೆದರುವಂತೆ ಮಾಡುತ್ತವೆ, 32 ವರ್ಷಗಳಿಂದ ಪರಿಸರ ಸಂರಕ್ಷಣೆ, ಸಾವಯವ ಕೃಷಿ, ಕೆರೆಗಳ ಅಭಿವೃದ್ಧಿ ಮಾಡುವ ಮೂಲಕ ಜನರ ಸಹಭಾಗಿತ್ವದಿಂದ ಯಶಸ್ಸು ಕಂಡಿದ್ದೇವೆ, ಯೋಜನೆಯಲ್ಲಿ ಸದಸ್ಯರು ಎಂಬ ಅಂಶ ಬದಲಿಸಿ ಅಭಿವೃದ್ಧಿಯ ಪಾಲುದಾರರು ಎಂಬುದಾಗಿ ಪರಿಗಣಿಸಲಾಗುತ್ತಿದೆ. ನಾವು ದಾನ ನೀಡಲು ಅವರು ದೀನರೂ ಅಲ್ಲ, ನಾವು ದಾನಿಗಳೂ ಅಲ್ಲ, ಅವರವರೇ ಉಳಿತಾಯ ಮಾಡಿದ ಹಣದಲ್ಲಿ ಯೋಜನೆ ರೂಪಿಸಿ ಅಭಿವೃದ್ಧಿ ಕಂಡುಕೊಳ್ಳುತ್ತಾರೆ ಎಂದರು.
ಅಧಿಕಾರ ಸುವರ್ಣ ವರ್ಷಕ್ಕೆ ಸರಕಾರದಿಂದ ಅಭಿನಂದನೆ :
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿ ೪೯ ವರ್ಷಗಳನ್ನು ಪೂರೈಸಿ ೫೦ನೇ ಸಂವತ್ಸರಕ್ಕೆ ಕಾಲಿಡುತ್ತಿರುವ ನಿಮಗೆ ನಾನು ವೈಯುಕ್ತಿವಾಗಿ, ಸರಕಾರದ ಪರವಾಗಿ, ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಾ | ಡಿ. ವೀರೇಂದ್ರ ಹೆಗ್ಗಡೆ ಅವರು ಧರ್ಮಾಧಿಕಾರಿಯಾಗಿ ಧಾರ್ಮಿಕ ಕಾರ್ಯ ಮಾತ್ರ ಮಾಡದೆ ನಾಡಿನ ಸೇವೆ, ಸಾಮಾಜಿಕ ಉನ್ನತಿಯ ಕಾರ್ಯ ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ಶ್ರೀಮತಿ ಹೆಗ್ಗಡೆಯವರೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇವರಿಬ್ಬರಿಗೂ ಶ್ರೀ ದೇವರು ಆಯಸ್ಸು, ಇನ್ನಷ್ಟು ಸೇವೆ ನೀಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಮಾಜಿ ಸಚಿವರು ಹಾಗೂ ಶಾಸಕ ಅಭಯಚಂದ್ರ ಜೈನ್ ಮತ್ತು ವಿನಯ ಕುಮಾರ್ ಸೊರಕೆ, ಸಿಎಂ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಮಂಗಳೂರು ಶಾಸಕರಾದ ಮೊಯಿದಿನ್ ಬಾವಾ ಮತ್ತು ಜೆ.ಆರ್. ಲೋಬೋ, ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ಅಧ್ಯಕ್ಷೆ ಹೇಮಾವತಿ ಹೆಗ್ಗಡೆ, ಗ್ರಾ.ಯೋ. ಟ್ರಸ್ಟಿ ಡಿ. ಹರ್ಷೇಂದ್ರ ಕುಮಾರ್, ದ.ಕ.ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್, ಯುಬಿಐ ಮಂಗಳೂರು ಸಹಾಯಕ ಮಹಾಪ್ರಬಂಧಕ ಅಶೋಕ್ ಕುಮಾರ್ ಡಾಶ್, ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಆರ್. ರವಿ ಕುಮಾರ್, ವಿವಿಧ ಬ್ಯಾಂಕಿನ ಅಧಿಕಾರಿಗಳಾದ ಅನಿಲ್ ಕುಮಾರ್ ಪಿ, ಎನ್ ಶ್ರೀನಿವಾಸ, ಸಿ. ಸತೀಶ್ ಬಳ್ಳಾಲ್, ಕೆ. ಸತೀಶ್ ಕಾಮತ್, ಇ. ಎಸ್ ನಾಗರಾಜ್ ಉಡುಪ ಮೊದಲಾದವರು ಉಪಸ್ಥಿತರಿ ದ್ದರು. ಗ್ರಾ. ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ ಸ್ವಾಗತಿಸಿದರು. ಗ್ರಾ. ಯೋ. ಪ್ರಾದೇಶಿಕ ನಿರ್ದೇಶಕ ಕೆ. ಬೂದಪ್ಪ ಗೌಡ, ಯೋಜನಾ ಅಧಿಕಾರಿ ಲೀಲಾವತಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸುಮಂಗಲಾ ಪ್ರಾರ್ಥನೆ ಹಾಡಿದರು. ಗಣೇಶ್ ಗಂಗೊಳ್ಳಿ ತಂಡದಿಂದ ನಾಡಗೀತೆ ಮೊಳಗಿತು. ಗ್ರಾ. ಯೋ. ಜಿಲ್ಲಾ ನಿರ್ದೇಶಕ ಚಂದ್ರಶೇಖರ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.