ಧರ್ಮಾಧಿಕಾರಿ ಡಾ| ಹೆಗ್ಗಡೆ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸುವರ್ಣ ಮಹೋತ್ಸವ ಸಂಭ್ರಮ – ಧರ್ಮಾಧಿಕಾರಿ ಪೀಠವೇ ನನ್ನ ಅಂತಃಸತ್ವ : ಡಾ ಹೆಗ್ಗಡೆ

Pattabhisheka heggade sanmana

Pattabhisheka yadhuveer sanmanaಶಿಕ್ಷಣ-ಸೇವೆಯಿಂದ ಶ್ರೀ ಕ್ಷೇತ್ರಕ್ಕೆ ಜಗದಗಲ ಮನ್ನಣೆ: ಮಹಾರಾಜ ಯದುವೀರ ದತ್ತ ಒಡೆಯರ್ : ಉತ್ತಮ ಸೇವೆಯಿಂದ ಧರ್ಮಸ್ಥಳ ಕ್ಷೇತ್ರ ಜಗದಗಲ ಗುರುತಿಸಿಕೊಂಡಿದೆ, ಶಿಕ್ಷಣ ಮತ್ತು ಸೇವೆಯ ಮೂಲಕ ಧರ್ಮಸ್ಥಳ ಕ್ಷೇತ್ರವನ್ನು ಕಟ್ಟಿರುವ ಡಾ ಹೆಗ್ಗಡೆಯವರಿಗೆ ಇನ್ನಷ್ಟು ಸೇವೆ ನೀಡಲು ದೀರ್ಘಾಯುಸ್ಸು, ಶಕ್ತಿ ದೊರೆಯಲಿ ಎಂದು ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಚಂದ್ರನಾಥ ಸ್ವಾಮಿಯ ಬಳಿ ಪ್ರಾರ್ಥಿಸುತ್ತೇನೆ ಎಂದು ಮೈಸೂರು ಮಹಾಸಂಸ್ಥಾನದ ಮಹಾರಾಜ ಯದುವೀರ ದತ್ತ ಒಡೆಯರ್ ಪ್ರಾರ್ಥಿಸಿದರು.
ಸ್ವಚ್ಚ ಮೈಸೂರು ನಗರದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರ ಸ್ವಚ್ಚ ಧಾರ್ಮಿಕ ಕೇಂದ್ರ ಪ್ರಶಸ್ತಿ ಪಡೆದುಕೊಂಡಿದ್ದು, ಕ್ಷೇತ್ರಕ್ಕೂ ನಮ್ಮ ಸಂಸ್ಥಾನಕ್ಕೂ ಸಮೀಪದ ನಂಟಿದೆ. ಮೈಸೂರಿನಿಂದ ಶ್ರೀ ಕ್ಷೇತ್ರಕ್ಕೆ ಶ್ರೀಗಂಧ ಕೂಡ ಸರಬರಾಜು ಮಾಡಲಾಗುತ್ತಿತ್ತು, 1812ರಲ್ಲಿ ಕುಮಾರಯ್ಯ ಹೆಗ್ಗಡೆಯವರು ಧರ್ಮಾಧಿಕಾರಿಯಾಗಿದ್ದಾಗ ಧರ್ಮಸ್ಥಳ ಮೇಳದ ಯಕ್ಷಗಾನ ತಂಡ ಮೈಸೂರು ಸಂಸ್ಥಾನಕ್ಕೆ ಬಂದು ಪ್ರದರ್ಶನ ನೀಡಿದ್ದ ವೇಳೆ ಅವರನ್ನು ಸಂಸ್ಥಾನದಲ್ಲೇ ಉಳಿಸಿ ಆಗಿನ ಮಹಾರಾಜ ಮುಮ್ಮಡಿ ಕೃಷ್ಣ ರಾಜ ಒಡೆಯರ್ ಅವರು ಸಂತೋಷಪಟ್ಟು ಗೌರವ ನೀಡಿದ್ದರು. ನನ್ನ ತಂದೆ ಕೂಡ ಶಾಂತಿವನ ಆಸ್ಪತ್ರೆಯ ಸಾಧಕರಾಗಿದ್ದರು, ಅವರು ಇಲ್ಲಿಗೆ ಗ್ರಂಥವನ್ನೂ ನೀಡಿದ್ದರು ಎಂದು ಐತಿಹಾಸಿಕ ನೆನಪನ್ನು ಮೆಲುಕು ಹಾಕಿದರು. ಈ ಸಂಬಂಧ ಇನ್ನೂ ಮುಂದುವರಿಯಬೇಕು ಎಂದು ಆಶಿಸುತ್ತೇನೆ ಎಂದರು.

ಧರ್ಮಸ್ಥಳ : ಕ್ಷೇತ್ರದ ಪಟ್ಟಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕ್ಷೇತ್ರದ ಪರಂಪರೆಯ ಕಾರ್ಯಕ್ರಮಗಳನ್ನಲ್ಲದೆ ಅನೇಕ ಜನಪರ ಹೊಸ ಯೋಜನೆಗಳನ್ನು ಅನುಷ್ಠಾನಿಸುತ್ತಾ ಬಂದಿದ್ದೇನೆ, 50 ವರ್ಷದ ಆಡಳಿತದ ಬಳಿಕ ಒಮ್ಮೆ ಹಿಂದುರುಗಿ ನೋಡಿದರೆ ಇಷ್ಪೆಲ್ಲಾ ನನ್ನಿಂದ ಸಾಧ್ಯವಾಯಿತೇ ಎಂದುಕೊಳ್ಳುತ್ತೇನೆ. ಇದೆಲ್ಲಾ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹಿತ ಕೃಪೆಯಿಂದಲೇ ಆಗಿದೆ, ಕ್ಷೇತ್ರದ ಧರ್ಮಾಧಿಕಾರಿ ಎಂಬ ಅಧಿಕಾರವೇ ನನ್ನ ಮೊದಲ ವ್ಯಕ್ತಿತ್ವ, ಈ ಹುದ್ದೆಯಲ್ಲಿ 50 ವರ್ಷ ಕಳೆದಿದ್ದೇನೆ ಎನ್ನುವುದಕ್ಕಿಂತ ಪಟ್ಟಾಧಿಕಾರಿಯ ಸುವರ್ಣ ಯುಗ ಆರಂಭ ಎಂದು ಅಂದುಕೊಳ್ಳುತ್ತೇನೆ ಎಂದು ಅತ್ಯಂತ ವಿಧೇಯನಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ, ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ 50ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡಿದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸುವರ್ಣ ಮಹೋತ್ಸವ ಸಂಭ್ರಮದ ಕಾರ್ಯಕ್ರಮದ ನಿಮಿತ್ತ ಅ. 24 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿಶೇಷ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದರು.
ಧರ್ಮಸ್ಥಳ ಕ್ಷೇತ್ರ ಎಂದರೆ ಕೋಣವಿದ್ದಂತೆ ಅದರ ಬಾಲ ಹಿಡಿದುಕೊಂಡಿರುವ ನಾನು ಕೋಣನ ಜೊತೆ ಓಡುತ್ತಿದ್ದೇನೆ. ನನ್ನ ಓಟಕ್ಕೆ ಕಾರಣ ನಾನು ಅದರ ಬಾಲ ಹಿಡಿದುಕೊಂಡಿರುವುದಷ್ಟೇ, ನನ್ನನ್ನು ಅರ್ಥಮಾಡಿಕೊಂಡು ನನ್ನ ಕಲ್ಪನೆಗೆ ಶಕ್ತಿ ತುಂಬಿದ ಎಲ್ಲರೂ ನನ್ನ ಯಶಸ್ಸಿನ ಪಾಲುದಾರರು. ಸಮಾಜದಲ್ಲಿ ಯಾರೂ ಅಯೋಗ್ಯರಿಲ್ಲ, ನಿಷ್ಪ್ರಯೋಜಕರೂ ಇಲ್ಲ, ಅವರನ್ನು ಪ್ರಯೋಜನಕಾರಿಯಾಗಿ
ಬಳಸಿಕೊಳ್ಳುವುದು ಒಳ್ಳೆಯ ನಾಯಕನ ಗುಣ, ಜನರಿಗೆ ಶ್ರೀ ದೇವರ ಮೇಲಿನ ಭಯ, ನನ್ನ ಮೇಲಿನ ಪ್ರೀತಿ, ನನ್ನ ಅಭಿಪ್ರಾಯಗಳನ್ನು ಸ್ವೀಕರಿಸುವ ರೀತಿ ಇಷ್ಟೆಲ್ಲಾ ಪ್ರಗತಿ- ಸಾಧನೆಗೆ ಕಾರಣವಾಗಿದೆ, ಕ್ಷೇತ್ರದ ಮಹಾತ್ಮೆ ನನ್ನಿಂದ ಇಷ್ಟೆಲ್ಲಾ ಕಾರ್ಯಗಳನ್ನು ಮಾಡಿಸಿದೆ, ನಾನು ಮಾಡಿದ ಗ್ರಾ. ಯೋಜನೆ ಮತ್ತು ರುಡ್‌ಸೆಟ್ ಕಾರ್ಯಕ್ರಮ ಜನರ ಮಾನಸಿಕ ಪರಿವರ್ತನೆ ಮತ್ತು ಶಿಸ್ತು ರೂಪುಗೊಳ್ಳುವಲ್ಲಿ ಕಾರಣವಾಗಿದೆ. ನನ್ನೊಂದಿಗೆ ಬರುವವರಿಗೆ ಕ್ಷೇತ್ರದ ಸಂಸ್ಕಾರದ ದರ್ಶನ ಮಾಡಿಸುತ್ತೇನೆ, ಇಲ್ಲಿ ಆಗುವ ಮಾನಸಿಕ ಪರಿವರ್ತನೆಯೇ ಅವರಲ್ಲಿ ತೊಡಗಿಸಿಕೊಳ್ಳುವ ಸ್ಥಿತಿಯನ್ನು ತಂದುಕೊಡುತ್ತದೆ ಎಂದರು. ಕ್ಷೇತ್ರದಲ್ಲಿ ಧರ್ಮಾಧಿಕಾರಿ ಪೀಠವೇ ನನ್ನ ಅಂತಸತ್ವ, ನಾನು ಯಾವತ್ತೂ ಪೀಠಾಧಿಕಾರವನ್ನು ಹೊರೆಯಾಗಿ ಕಂಡಿಲ್ಲ, ಆದ್ದರಿಂದ ಕ್ಷೇತ್ರದ ಕೆಲಸ, ನನ್ನ ಜವಾಬ್ದಾರಿ ನಿರ್ವಹಣೆ ಎಲ್ಲೂ ಕಷ್ಟವೆನಿಸಲಿಲ್ಲ ಎಂದರು..
ಉಪಸ್ಥಿತಿ:
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶುಭಕೋರಿದರು. ಬಳಿಕ ಅವರು ಜಿಲ್ಲಾ ಉಸ್ತುವಾರಿ ಸಚಿವರ ಹಿನ್ನೆಲೆಯಲ್ಲಿ ಹೆಗ್ಗಡೆಯವನ್ನು ಅಭಿನಂದಿಸಿದರು. ಹೆಗ್ಗಡೆ ಕುಟುಂಬದ ಆಪ್ತರಾದ ಮಾಜಿ ಸಚಿವ ಅಭಯಚಂದ್ರ ಜೈನ್ ಭಾಗಿಯಾಗಿದ್ದರೆ, ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಉಪಸ್ಥಿತಿ ನೀಡಿದ್ದರು. ಹೆಗ್ಗಡೆ ಅವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ, ಹೆಗ್ಗಡೆ ಸಹೋದರರಾದ ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ ರಾಜೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಸಹೋದರಿ ಪದ್ಮಲತಾ, ಡಾ| ನಿರಂಜನ್, ಪುತ್ರಿ ಶ್ರದ್ದಾ ಅಮಿತ್, ಅಳಿಯ ಅಮಿತ್, ಶ್ರೇಯಸ್ ಕುಮಾರ್, ನೀತಾ ಶ್ರೇಯಸ್, ನಿಶ್ಚಲ್ ಕುಮಾರ್, ಹಾಗೂ ಕುಟುಂಬದ ಎಲ್ಲಾ ಸದಸ್ಯರುಗಳು ಹಾಗೂ ಕುಟುಂಬದವರು ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಆಚರಣಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಹರ್ಷೇಂದ್ರ ಕುಮಾರ್, ಗ್ರಾ. ಯೋಜನೆಯ ಹಣಕಾಸು ನಿರ್ದೇಶಕ ಶಾಂತಾರಾಮ ಪೈ ಸ್ವಾಗತಿಸಿದರು. ರಾಮಚಂದ್ರ ಬಂಟ್ವಾಳ್ ಮತ್ತು ಶೃತಿ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ಜೈನ್ ವಂದಿಸಿದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ, ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಸಹಕರಿಸಿದರು.
ಸುಜ್ಞಾನ ಪ್ರಭ ಪ್ರಶಸ್ತಿ ಪ್ರದಾನ, ಸನ್ಮಾನ :
ಶ್ರೀ ಕ್ಷೇತ್ರದ ಶಿಕ್ಷಣ ಸಂಸ್ಥೆಗಳನ್ನು ಉಜಿರೆಯಲ್ಲಿ ಕಟ್ಟಿ ಬೆಳೆಸಿದ ಹೆಗ್ಗಡೆಯವರ ಮಾವನೂ ಆಗಿರುವ ಪ್ರೋ. ಎಸ್. ಪ್ರಭಾಕರ್ ಅವರಿಗೆ ಸುಜ್ಞಾನಪ್ರಭ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು. ಹೆಗ್ಗಡೆಯವರೊಂದಿಗೆ ದೀರ್ಘ ವರ್ಷ ಸೇವೆ ಸಲ್ಲಿಸಿದ ಗೋಪಾಲ ಮೆನನ್, ಕೃಷ್ಣ ಶೆಟ್ಟಿ, ಸೀತಾರಾಮ ತೋಳ್ಪಡಿತ್ತಾಯ, ಅನಂತ ಪದ್ಮನಾಭ ಭಟ್, ಬಿ. ಭುಜಬಲಿ, ಕೃಷ್ಣ ಸಿಂಗ್, ಧನಕೀರ್ತಿ ಶೆಟ್ಟಿ, ದಿವಾಕರ ಪ್ರಭು ಅವರನ್ನು ಕ್ಷೇತ್ರದ ವತಿಯಿಂದ ಹೆಗ್ಗಡೆಯವರು ಸನ್ಮಾನಿಸಿದರು. ಈ ಪೈಕಿ ಸೀತಾರಾಮ ತೋಳ್ಪಡಿತ್ತಾಯ, ಅನಂತ ಪದ್ಮನಾಭ ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡುತ್ತಿದ್ದ ಹೆಗ್ಗಡೆಯವರು, ಪ್ರೊ. ಎಸ್. ಪ್ರಭಾಕರ್ ಮತ್ತು ವಜ್ರಕುಮಾರ್ ಅವರು ಶಿಕ್ಷಣ ಕ್ಷೇತ್ರದ ನನ್ನ ಸಾಧನೆಯ ಹಿಂದಿನ ಎರಡು ಕಣ್ಣುಗಳಿದ್ದಂತೆ. ಉಳಿದಂತೆ ಎಲ್ಲ ನನ್ನ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವುದೇ ನನ್ನ ಯಶಸ್ಸಿನ ಹಿಂದಿನ ಗುಟ್ಟು ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.