ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ದೊರೆಯಲಿ : ಉಮಾನಾಥ ಕೋಟ್ಯಾನ್

Guru jayanthiಬೆಳ್ತಂಗಡಿ: ಜಗತ್ತಿಗೆ ವಿಶೇಷ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶಗಳನ್ನು ನಾವು ಜೀವನದಲ್ಲಿ ಪಾಲಿಸಬೇಕು, ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡುವುದರ ಜೊತೆಗೆ ಗುರು ಹಿರಿಯರನ್ನು ಗೌರವದಿಂದ ಕಾಣುವ ಮನೋಭಾವವನ್ನು ಬೆಳೆಸಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಗುರುಜಯಂತಿ ಹಾಗೂ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭ ಸೆ. 17ರಂದು ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಜರುಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಮಾನಾಥ ಕೋಟ್ಯಾನ್ ಅವರು ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಎಂದು ಜಗತ್ತಿಗೆ ಸಾರಿದ ಮಹಾನ್ ಸಂತ ಬ್ರಹ್ಮಶ್ರೀ ಬಿರುದನ್ನು ಪಡೆದವರು ನಾರಾಯಣ ಗುರುಗಳು. ಸಮಾಜದಲ್ಲಿ ಮೇಲು, ಕೀಳು ಎಂಬ ಬೇಧವನ್ನು ಹೋಗಲಾಡಿಸಿ ಸಮಾನತೆ ಗಾಗಿ ಬಾಳಲು ಶಾಂತಿಯುತ ಹೋರಾಟ ವನ್ನು ನಡೆಸಿದವರು. ಅಂತಹ ಗುರುಗಳ ತತ್ವಗಳನ್ನು ಪಾಲಿಸಬೇಕು. ತಂದೆ, ತಾಯಿಯೇ
ದೇವರು ಅವರನ್ನು ಗೌರವಿಸುವ ಮೂಲಕ ಬದುಕಲು ಕಲಿಸುವ ವಿದ್ಯೆಯನ್ನು ಮಕ್ಕಳಿಗೆ ಕಲಿಸಬೇಕು. ಮಾನಸಿಕ ನೆಮ್ಮದಿಗಾಗಿ ಸಮಾಜದ ಸಂಘಟನೆ ಜೊತೆಗೆ ಇತರ ಧರ್ಮವನ್ನು ಪ್ರೀತಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಗೀರಥ ಜಿ. ಅವರು ಮಾತನಾಡಿ, ನಾರಾಯಣ ಗುರುಗಳು ಒಂದು ಜಾತಿಗೆ ಸೀಮಿತರಾದ ಗುರುಗಳಲ್ಲ ಕೇರಳದಲ್ಲಿ ಎಲ್ಲ ಜಾತಿ, ಮತ, ಧರ್ಮದವರು ಇವರ ಜನ್ಮದಿನಾಚರಣೆಯನ್ನು ಭಕ್ತಿ, ಶ್ರದ್ಧೆಯಿಂದ ಅದ್ದೂರಿಯಾಗಿ ಆಚರಿಸುತ್ತಾರೆ. ನಾರಾಯಣ ಗುರುಗಳ ಜನ್ಮದಿನದಂದೆ ಈ ಆಚರಣೆ ನಡೆಯಬೇಕು ಎಂದರು. ಸಂಘಟನೆಗಳು ರಾಜಕೀಯ ಮುಕ್ತವಾಗಿರಬೇಕು, ಸಂಘದ ವತಿಯಿಂದ ಸ್ವಸಹಾಯ ಸಂಘಗಳ ರಚನೆ ಮಾಡಿದಾಗ ಕೆಲವರು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿರುವುದು ಮನಸ್ಸಿಗೆ ನೋವು ತಂದಿದೆ. ಇಂತಹ ಸ್ವಾರ್ಥ ನನ್ನಲ್ಲಿಲ್ಲ, ಸ್ವಸಹಾಯ ಸಂಘಗಳು ನಾವೆಲ್ಲ ಸಂಘಟಿತರಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಮಾಡಲಾಗಿದೆ ಎಂದು ತಿಳಿಸಿದರು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಮಾಜಿ ಅಧ್ಯಕ್ಷ ವಸಂತ ಸಾಲ್ಯಾನ್ ಅವರು ಮಾತನಾಡಿ ಜಾತಿ, ಧರ್ಮದ ಸಂಘಟನೆಯಲ್ಲಿ ರಾಜಕೀಯಕ್ಕೆ ಹೆಚ್ಚು ಮಹತ್ವ ನೀಡದೆ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆಯಿತ್ತರು. ಸಂಘದ ಮಾಜಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ ಶುಭ ಹಾರೈಸಿದರು. ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ತನುಜಾ ಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಪೂಜಾರಿ ಪುದುವೆಟ್ಟು ಸನ್ಮಾನಿತರನ್ನು ಪರಿಚಯಿಸಿದರು.
ಸುಕನ್ಯಾ, ಆಶಾ, ಸುಜಾತಾ ಇವರ ಪ್ರಾರ್ಥಸಿ, ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌ಕುಮಾರ್ ಕಾಪಿನಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾ ರಮಾನಂದ ಹಾಗೂ ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ ಧನ್ಯವಾದವಿತ್ತರು.
ಕಾರ್ಯಕ್ರಮದ ಮೊದಲು ರಘುನಾಥ ಶಾಂತಿಯವರ ನೇತೃತ್ವದಲ್ಲಿ ಗುರುಪೂಜೆ ನೆರವೇರಿತು. ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳು ಗ್ರಾಮ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.