ಗುರುವಾಯನಕೆರೆ-ಉಜಿರೆ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ರಸ್ತೆಯಲ್ಲೆ ವಾಹನ ನಿಲ್ಲಿಸುವವರ ಮೇಲೆ ಸೂಕ್ತ ಕ್ರಮಕ್ಕೆ ನಿರ್ಧಾರ

Advt_NewsUnder_1
Advt_NewsUnder_1
Advt_NewsUnder_1
  • KDP sabhe   ಸರಕಾರಿ ಜಾಗದಲ್ಲಿ ನೆಡುತೋಪು
  •  ಪಡಿತರ ಸಮಸ್ಯೆ ನಿವಾರಣೆ
  •  ವೇಣೂರಿನಲ್ಲಿ ಅಂಬೇಡ್ಕರ್ ಭವನ
  •  ಕೊಕ್ಕಡ ಪಶು ವೈದ್ಯ ಆಸ್ಪತ್ರೆಯ ಸಮಸ್ಯೆ 

ಬೆಳ್ತಂಗಡಿ : ಗುರುವಾಯನಕೆರೆಯಿಂದ ಬೆಳ್ತಂಗಡಿ ಮೂಲಕ ಉಜಿರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಸಂಚಾರಕ್ಕೆ ಬಹಳಷ್ಟು ಅಡ್ಡಿಯಾಗುತ್ತಿದೆ. ಸರಕಾರಿ ಹಾಗೂ ಖಾಸಗಿ ಬಸ್ಸುಗಳು, ರಿಕ್ಷಾ ಹಾಗೂ ಇತರ ವಾಹನಗಳು ರಸ್ತೆಯಲ್ಲೆ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದಾರೆ. ಇದರ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಸೂಚನೆ ನೀಡಿದರು.
ಅವರು ಜು.18ರಂದು ಬೆಳ್ತಂಗಡಿ ತಾಲೂಕು ಪಂಚಾಯತು ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ತಾ.ಪಂ. ಉಪಾಧ್ಯಕ್ಷ ವೇದಾವತಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಹಶೀಲ್ದಾರ್ ತಿಪ್ಪೇಸ್ವಾಮಿ, ಕಾರ್ಯನಿರ್ವಹಣಾಧಿಕಾರಿ ಎ.ಎನ್. ಗುರುಪ್ರಸಾದ್, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಸೌಮ್ಯಲತಾ, ಮಮತಾ ಎಂ. ಶೆಟ್ಟಿ, ನಮೀತಾ, ನಾಮನಿರ್ದೇಶನ ಸದಸ್ಯರಾದ ಸುಕುಮಾರನ್, ತನುಜಾ ಶೇಖರ್, ಅಭಿನಂದನ್, ಹರೀಶ್ ಗೌಡ, ರಮೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಳೆದ ಸಭೆಯಲ್ಲಿ ಗುರುವಾಯನಕೆರೆಯಿಂದ ಉಜಿರೆ ತನಕ ಟ್ರಾಪಿಕ್ ವ್ಯವಸ್ಥೆ ಸಮರ್ಪಕವಾಗಿ ಮಾಡುವಂತೆ ಮತ್ತು ಕಾನೂನು ಉಲ್ಲಂಘನೆ ಮಾಡಿದ ಎಲ್ಲಾ ವಾಹನಗಳ ಮೇಲೆ ಕೇಸು ದಾಖಲಿಸಿ ವರದಿ ನೀಡುವಂತೆ ನಿರ್ಣಯಿಸಲಾಗಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಇದುವರೆಗೆ ಯಾವುದೇ ಕ್ರಮ ಜರಗದಿರುವುದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಎ.ಎಸ್.ಐ. ಹೆಗ್ಡೆಯವರು ಮಾತನಾಡಿ ಬಂಟ್ವಾಳ ಪ್ರಕರಣದಲ್ಲಿ ಎಸ್.ಐ. ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಂಟ್ವಾಳಕ್ಕೆ ಬಂದೋಬಸ್ತ್‌ಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದರು. ಗುರುವಾಯನಕೆರೆಯಿಂದ ಉಜಿರೆಗೆ ಹೋಗಬೇಕಾದರೆ ಈಗ ಒಂದು ಗಂಟೆ ಬೇಕು, ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಬ್ಲಾಕ್ ಆಗುತ್ತಿದೆ. ಇದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು, ರಸ್ತೆಯಲ್ಲಿ ನಿಲ್ಲಿಸುವ ವಾಹನಗಳ ಮೇಲೆ ಕೇಸು, ದಂಡ ಹಾಕಿ ಸಂಚಾರವನ್ನು ಸುಗಮ ಗೊಳಿಸಿ ಎಂದು ಶಾಸಕರು ಸೂಚನೆ ನೀಡಿದರು.
ಅರಣ್ಯ ಇಲಾಖೆಯಲ್ಲಿ ಕಡತ: 94ಸಿಯಲ್ಲಿ ಅನೇಕ ಮಂದಿಯ ಕಡತಗಳನ್ನು ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಆ ಕಡತಗಳು ಇನ್ನೂ ಬಂದಿಲ್ಲ ಇದನ್ನು ತರಿಸುವ ಕೆಲಸಗಳಾಗಬೇಕು ಎಂದು ಜಿ.ಪಂ.ಸ.
ಕೊರಗಪ್ಪ ನಾಯ್ಕ ಶಾಸಕರ ಗಮನಕ್ಕೆ ತಂದರು. ಈ ಸಮಯ ಬೆಳ್ತಂಗಡಿ ವಲಯಾರಣ್ಯಾಧಿಕಾರಿ ಮಾತನಾಡಿ ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಬಂದ ಕಡತಗಳನ್ನು ಡಿ.ಎಫ್.ಓಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಕಡತಗಳು ಬರಬೇಕು ಎಂದು ವಿವರಿಸಿದರು. 94ಸಿಯ ಯಾವುದೇ ಕಡತವನ್ನು ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸುವುದು ಬೇಡ ಎಂದು ಶಾಸಕರು ತಹಶೀಲ್ದಾರರಿಗೆ ತಾಕೀತು ಮಾಡಿದರು.
ನೆಡುತೋಪು ಸರಕಾರಿ ಜಾಗ: ಪಾರೆಂಕಿಯಲ್ಲಿ ಮನೆ ನಿವೇಶನಕ್ಕೆ ಕಾದಿರಿಸಿದ 8 ಎಕ್ರೆ ಜಾಗದಲ್ಲಿ ಅರಣ್ಯ ಇಲಾಖೆ ನೆಡುತೋಪು ಇರುವ ಬಗ್ಗೆ ಮಮತಾ ಶೆಟ್ಟಿ ಪ್ರಸ್ತಾಪಿಸಿ ಮರಗಳ ತೆರವಿಗೆ ಒತ್ತಾಯಿಸಿದರು. ಈ ಸಂದರ್ಭ ಮಾಹಿತಿ ನೀಡಿದ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಗಣೇಶ್ ತಂತ್ರಿಯವರು ಮರಗಳ ತೆರವಿಗೆ ವರದಿ ತಯಾರಿಸಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ಸರಕಾರಿ ಜಾಗದಲ್ಲಿ ನೆಡುತೋಪು ಮಾಡಿದ ಸಾಮಾಜಿಕ ಅರಣ್ಯ ಇಲಾಖೆ ಆರ್‌ಟಿಸಿಯಲ್ಲಿ ಅರಣ್ಯ ಎಂದು ದಾಖಲು ಮಾಡಿರುವ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರ ಬಗ್ಗೆ ಚರ್ಚೆ ನಡೆದು ಈ ಜಾಗವನ್ನು ಮರಳಿ ಕಂದಾಯ ಇಲಾಖೆಯ ವಶ ಪಡೆದುಕೊಳ್ಳಲು ನಿರ್ಣಯಿಸಲಾಯಿತು.
ಗುರುವಾಯನಕೆರೆಯ ರತ್ನಗಿರಿಯಿಂದ
ಅಮರ್ಜಾಲುವರೆಗೆ ಸಾಮಾಜಿಕ ಅರಣ್ಯ ಜಾಗದಲ್ಲಿ ರಸ್ತೆ ಮಾಡುವಂತೆ ಮಮತಾ ಶೆಟ್ಟಿಯವರ ಮನವಿಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸುವಂತೆ ಶಾಸಕರು ಅರಣ್ಯಾಧಿಕಾರಿಗೆ ಸೂಚನೆಯಿತ್ತರು.
ಪಡಿತರ ಸಮಸ್ಯೆ: ಪಡಿತರ ಪೂರೈಕೆಯಲ್ಲಿ ತೂಕದಲ್ಲಿ ವ್ಯತ್ಯಾಸ ಮತ್ತು ಲೋಡ್-ಆನ್‌ಲೋಡುಗೆ ಹಣ ಪಡೆದುಕೊಳ್ಳುವ ಕುರಿತು ಏನು? ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕರು ಪ್ರಶ್ನಿಸಿದಾಗ ಉತ್ತರಿಸಿದ ಆಹಾರ ನಿರೀಕ್ಷಕ ವಿಶ್ವ ಅವರು ತಾಲೂಕಿನ 12 ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಲಾಗಿದೆ, ಯಾವುದೇ ನ್ಯೂನತೆ ಕಂಡುಬಂದಿಲ್ಲ ಎಂದರು. ಪಡಿತರ ಪೂರೈಕೆದಾರರನ್ನು ಬದಲಾಯಿಸಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಪಡಿತರ ಅಂಗಡಿಗೆ ಪೂರೈಕೆ ಮಾಡುವ ಅಕ್ಕಿ ಗೋಣಿಯಲ್ಲಿ ತೂಕದಲ್ಲಿ ಕಡಿಮೆ ಬರುತ್ತಿದೆ ಎಂದು ಕೊರಗಪ್ಪ ನಾಯ್ಕ ತಿಳಿಸಿದರೆ, ಹೊಸಂಗಡಿಯಲ್ಲಿ ಸುಮಾರು 100 ಮಂದಿಯ ಪಡಿತರ ಕಾರ್ಡ್ ರದ್ದುಗೊಂಡಿದ್ದು, ಅವರಿಗೆ ಪಡಿತರ ದೊರೆಯುತ್ತಿಲ್ಲ ಎಂದು ಧರಣೇಂದ್ರ ಕುಮಾರ್ ಮಾಹಿತಿ ನೀಡಿದರು. ಪರಿಶೀಲನೆಗೆ ಶಾಸಕರು ಸೂಚನೆ ನೀಡಿದರು.
ಕೊಕ್ಕಡ ಪಶು ವೈದ್ಯ ಆಸ್ಪತ್ರೆಯ ವೈದ್ಯರ ಕರ್ತವ್ಯ ಲೋಪದ ಬಗ್ಗೆ ಕೊರಗಪ್ಪ ನಾಯ್ಕ ಸಭೆಯಲ್ಲಿ ವಿವರಿಸಿ, ಅವರ ಬದಲಾವಣೆಗೆ ಒತ್ತಾಯಿಸಿದರು. ತಾಲೂಕಿನಲ್ಲಿ ಇಂತಹ ಇನ್ನೊಬ್ಬರು ವೈದ್ಯರಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ತಿಳಿಸಿದರು. ಬಂದಾರು ಅಂಗನವಾಡಿ ಶಾಲೆಯ ಜಾಗವನ್ನು ಅಳತೆ ಮಾಡಲು ಈ ಹಿಂದೆ ನಿರ್ಣಯಿಸಿದ್ದರೂ ಸರ್ವೆ ನಡೆದಿಲ್ಲ ಎಂದು ಹರೀಶ್ ಗೌಡ ಶಾಸಕರ ಗಮನಕ್ಕೆ ತಂದರು. ಇದರ ಬಗ್ಗೆ ಜಂಟಿ ಸರ್ವೆಗೆ ಅರಣ್ಯ ಇಲಾಖೆಗೆ ಇನ್ನೊಮ್ಮೆ ಪತ್ರ ಬರೆಯುವುದಾಗಿ ತಹಶೀಲ್ದಾರ್ ಉತ್ತರಿಸಿದರು.
ಸರಳಿಕಟ್ಟೆ ಶಾಲಾ ಬಳಿ ವಿದ್ಯುತ್ ತಂತಿ ಕೆಳಗಡೆ ಬಂದಿದ್ದು ಒಂದು ಬದಿಗೆ ವಾಲಿದ್ದು, ಅಪಾಯದಲ್ಲಿದೆ ಇದನ್ನು ಬದಲಾಯಿಸಲು ಶಾಹುಲ್ ಹಮೀದ್ ಸೂಚಿಸಿದಾಗ ಮಾಹಿತಿ ನೀಡಿದ ಮೆಸ್ಕಾಂನ ಶಿವಶಂಕರ್ ಅವರು ಶಾಲಾ ಆವರಣದೊಳಗೆ ಇದ್ದರೆ ಶಾಲಾ ಮುಖ್ಯಸ್ಥರು ಪತ್ರ ನೀಡಿದರೆ ಇಲಾಖೆಯಿಂದ ಉಚಿತವಾಗಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಹೊರಗೆ ಆದರೆ ಇದರ ತೆರವಿಗೆ ಬರುವ ಖರ್ಚನ್ನು ಯಾರಾದರೂ ಭರಿಸಬೇಕು ಎಂದು ತಿಳಿಸಿ, ಪರಿಶೀಲನೆ ಮಾಡುವುದಾಗಿ ಹೇಳಿದರು. ಪೆರಾಡಿ ಮಾವಿನಕಟ್ಟೆ ಶಾಲಾ ಬಳಿಯಲ್ಲೂ ಇದೇ ಸ್ಥಿತಿಯಾಗಿದೆ ಎಂದು ಧರಣೇಂದ್ರ ಕುಮಾರ್ ಮಾಹಿತಿ ನೀಡಿದರು. ಮೆಸ್ಕಾಂ ವತಿಯಿಂದ ರೂ.೫೫ ಲಕ್ಷ ವೆಚ್ಚದಲ್ಲಿ 1250 ಬಿಪಿಎಲ್ ಕಾರ್ಡ್‌ದಾರರ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಇದೆ. ಈಗಾಗಲೇ 35 ಪಂಚಾಯತುಗಳಲ್ಲಿ ಸರ್ವೆ ಮಾಡಲಾಗಿದೆ ಈ ತಿಂಗಳ ಒಳಗೆ ಎಲ್ಲಾ ಪಂಚಾಯತುಗಳನ್ನು ಪೂರ್ತಿಗೊಳಿಸಲಾಗುವುದು ಎಂದು ತಿಳಿಸಿದರು. ತಾಲೂಕಿಗೆ ಮಂಜೂರಾದ ವಿದ್ಯುತ್ ಪರಿವರ್ತಕಗಳ ಜಾಗವನ್ನು ಯಾವುದೇ ರೀತಿಯಲ್ಲಿ ಬದಲಾವಣೆ ಮಾಡದೆ ಮಂಜೂರಾದ ಜಾಗದಲ್ಲೇ ನಿರ್ಮಿಸುವಂತೆ ಧರಣೇಂದ್ರ ಕುಮಾರ್ ಅವರ ಪ್ರಶ್ನೆಗೆ ಶಾಸಕರು ಸೂಚಿಸಿದರು.
ಅಂಬೇಡ್ಕರ್ ಭವನ: ವೇಣೂರಿನಲ್ಲಿ ಸರಕಾರಿ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಅಂಬೇಡ್ಕರ್ ಭವನಕ್ಕೆ ಖಾಸಗಿ ವ್ಯಕ್ತಿಗಳು ಎ.ಸಿ. ನ್ಯಾಯಾಲಯದಿಂದ ತಡೆ ತಂದಿರುವ ವಿಷಯ ಸಭೆಯಲ್ಲಿ ಚರ್ಚೆಗೊಳಗಾಯಿತು. ಇದನ್ನು ಹಳೆ ಪಂಚಾಯತು ಇದ್ದ ಜಾಗದಲ್ಲಿ ನಿರ್ಮಿಸಿ ಎಂದು ಶೇಖರ ಕುಕ್ಕೇಡಿ ಮತ್ತು ಧರಣೇಂದ್ರ ಕುಮಾರ್ ಸಲಹೆಯಿತ್ತರು. ಈಗ ಗುರುತಿಸಲಾದ ಜಾಗವೇ ಸೂಕ್ತವಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಸ್ಟೇ ತೆರವಿಗೆ ಕ್ರಮ ಕೈಗೊಳ್ಳಿ ಎಂದು ಶಾಸಕರು ಅಧಿಕಾರಿಗಳಿಗೆ ಹೇಳಿದರು. ನಿಟ್ಟಡೆ ಶಾಲಾ ಮುಖ್ಯೋಪಾಧ್ಯಾಯರ ಕಾರ್ಯಶೈಲಿಯನ್ನು ಸಭೆಯಲ್ಲಿ ವಿವರಿಸಿದ ಶೇಖರ ಕುಕ್ಕೇಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಾಲೆ ಕುಸಿಯುವ ಸ್ಥಿತಿಯಲ್ಲಿದೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮುಖ್ಯೋಪಾಧ್ಯಾಯರು ಡಿ.ಸಿ, ಎ.ಸಿ, ತಹಶೀಲ್ದಾರ್ ಲೇವಲ್‌ನ ಅಧಿಕಾರಿಗಳಲ್ಲಿ ಸಮಸ್ಯೆಯನ್ನು ತಿಳಿಸುತ್ತಾರೆ ಆದರೆ ಸ್ಥಳೀಯರಿಗೆ ಮಾಹಿತಿ ನೀಡುವುದಿಲ್ಲ, ಮೇಲಿಂದ ಬಂದಾಗಲಷ್ಟೆ ನಮಗೆ ವಿಷಯ ತಿಳಿಯುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೊಯ್ಯೂರು ಗ್ರಾಮದಲ್ಲಿ 1.43 ಎಕ್ರೆ ಪಂಚಾಯತು ಮನೆ ನಿವೇಶಕ್ಕೆ ಕಾದಿರಿಸಿದ್ದು, ಅದರಲ್ಲಿ ಗೇರು ನಿಗಮದ ಗೇರು ಮರಗಳಿದೆ. ಇದರಿಂದ ಮನೆ ನಿವೇಶ ನೀಡಲು ಸಮಸ್ಯೆಯಾಗಿದೆ ಎಂದು ಮಮತಾ ಶೆಟ್ಟಿ ಸಭೆಗೆ ಮಾಹಿತಿ ನೀಡಿದರು. ಇದು ನಿಗಮದ ಜಾಗ ಎಂದು ಅವರು ಹೇಳುತ್ತಿರುವುದರಿಂದ ಜಂಟೀ ಸಮೀಕ್ಷೆ ನಡೆಸಲು ನಿರ್ಣಯಿಸಲಾಯಿತು. ಅಭಯಾರಣ್ಯಾದೊಳಗೆ ವಾಸವಾಗಿರುವವರಿಗೆ ವಿದ್ಯುತ್ ಇಲ್ಲದಿರುವುದರಿಂದ 1 ಲೀಟರ್‌ಗಿಂತ ಹೆಚ್ಚು ಸೀಮೆ ಎಣ್ಣೆ ನೀಡಬೇಕು ಎಂದು ಸುಧೀರ್ ಸುವರ್ಣ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಳೆಂಜದ ಶ್ರೀಧರ ಹೆಗ್ಡೆಯವರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ರೂ.೫೦ ಸಾವಿರವನ್ನು ಶಾಸಕರು ವಿತರಿಸಿದರು. ಕಾರ್ಯನಿರ್ವಾಹಣಾಧಿಕಾರಿ ಗುರುಪ್ರಸಾದ್ ಸ್ವಾಗತಿಸಿ, ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.