ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಗ್ರಹಣ, ಸೇವಾ ಚಟುವಟಿಕೆಗಳ ಅನಾವರಣ

  Belthangady lions clubಸೇವೆಯೇ ಧ್ಯೇಯ, ದೇಶದ ಉನ್ನತಿಯೇ ಪ್ರಮೇಯ: ಉಪರಾಜ್ಯಪಾಲ ಲ| ರೊನಾಲ್ಡ್ ಗೋಮ್ಸ್

ಬೆಳ್ತಂಗಡಿ: ಸೇವೆಯೇ ಧ್ಯೇಯ, ದೇಶದ ಉನ್ನತಿಯೇ ಪ್ರಮೇಯ ಎಂಬಂತೆ ಲಯನ್ಸ್ ಸದಸ್ಯರುಗಳು ಕಾರ್ಯನಿರ್ವಹಿಸಬೇಕಾಗಿದ್ದು 101 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಈ ಅಂತಾರಾಷ್ಟ್ರೀಯ ಸಂಸ್ಥೆ ನಮಸ್ತೇ ಎಂಬ ಧ್ಯೇಯದೊಂದಿಗೆ ಭಾರತದ ಈ ಸುಂದರ ಸಂಪ್ರದಾಯವನ್ನು ವಿಶ್ವಕ್ಕೆ ಪರಿಚಯಿಸುತ್ತಿದೆ. ಬೆಳ್ತಂಗಡಿ ಲಯನ್ಸ್ 43ನೇ ವರ್ಷವನ್ನು ಪೂರೈಸುತ್ತಿದ್ದು, ಹಿಂದೊಮ್ಮೆ ಉತ್ತಮ ಘಟಕಪ್ರಶಸ್ತಿ ಪಡೆದುದಲ್ಲದೆ ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಬಾಚಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ಗೋಚರಿಸುತ್ತಿದೆ ಎಂದು ಲಯನ್ಸ್ ಜಿಲ್ಲೆ 317 ಡಿ ಇದರ ಉಪರಾಜ್ಯಪಾಲ ಲ| ರೊನಾಲ್ಡ್ ಗೋಮ್ಸ್ ಹೇಳಿದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು. 1 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಜರುಗಿ, ನೂತನ ತಂಡಕ್ಕೆ ಪ್ರಮಾಣವಚನ ಬೋಧಿಸಿ ಅವರು ಸಂದೇಶ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷೆ ಲ| ಸುಶೀಲಾ ಎಸ್.ಹೆಗ್ಡೆ ನಿರ್ಗಮನ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಎಚ್. ಡಿಮೆಲ್ಲೋ ಅವರು ಸ್ಮರಣ ಸಂಚಿಕೆಯ ಲಾಂಚನ ಬಿಡುಗಡೆ ಮಾಡಿ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್, ಜೇಸಿ, ರೋಟರಿ ಮೊದಲಾದ ಸಂಸ್ಥೆಗಳು ನಮ್ಮ ನಾಡಿನ ಅನೇಕ ಮಂದಿಯ ಊರುಗೋಲಾಗಿದ್ದು, ಇಂತಹ ಸಮಾಜ ಸೇವಾ ಕ್ಷೇತ್ರದಲ್ಲಿ ನಮ್ಮ ಶಿಕ್ಷಕವೃಂದದವರು ತೊಡಗಿಸಿಕೊಂಡಿರುವುದು ಸಂತಸದ ವಿಚಾರ ಎಂದರು. ಪ್ರಾಂತ್ಯಾಧ್ಯಕ್ಷ ಲ| ನಿತ್ಯಾನಂದ ನಾವರ ಮತ್ತು ವಾಸು ಮೂಡಬಿದ್ರೆ, ಜಿಲ್ಲಾ ಸಂಪುಟ ಸದಸ್ಯ ಕುಡ್ಪಿ ಅರವಿಂದ ಶೆಣೈ, ಉಜಿರೆ ಜೇಸಿ ಅಧ್ಯಕ್ಷ ಜೇಸಿ ದೇವುದಾಸ್, ಬೆಳ್ತಂಗಡಿ ಜೇಸಿ ಅಧ್ಯಕ್ಷ ಜೇಸಿ ಸಂತೋಷ್ ಪಿ. ಕೋಟ್ಯಾನ್, ರೋಟರಿ ಕ್ಲಬ್ ಕಾರ್ಯದರ್ಶಿ ಡಾ| ಪ್ರದೀಪ್ ನಾವೂರು, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಮಾಜಿ ಸೈನಿಕರ ಸಂಘದ ನಿಕಟಪೂರ್ವಾಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಭಟ್ ಶುಭ ಕೋರಿದರು.
ವೇದಿಕೆಯಲ್ಲಿ ನಾರಾವಿ ಕ್ಲಬ್‌ನ ಅಧ್ಯಕ್ಷ ಮುರಳೀಧರ, ಶಿರ್ತಾಡಿ ಕ್ಲಬ್‌ನ ಅಧ್ಯಕ್ಷ ನಾರಾಯಣ ಸಾಲಿಯಾನ್, ಆಲಂಗಾರು ಕ್ಲಬ್‌ನ ಅಧ್ಯಕ್ಷೆ ರೂಪಾ, ಕಡಬ ಕ್ಲಬ್‌ನ ಅಧ್ಯಕ್ಷ ಗಣೇಶ್ ಪೈ ಉಪಸ್ಥಿತರಿದ್ದರು. ಜೇಸಿಐ ಮಡಂತ್ಯಾರು, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರು, ಬಿಆರ್‌ಪಿ ಮತ್ತು ಸಿಆರ್‌ಪಿಗಳು, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭ ಕೋರಿದರು. ಲಯನ್ ಕಾರ್ಯದರ್ಶಿ ಮೇದಿನಿ ಡಿ. ಗೌಡ ವಾರ್ಷಿಕ ವರದಿ ವಾಚಿಸಿದರು. ವಿ.ಆರ್. ನಾಯಕ್ ಧ್ವಜವಂಧನೆ ನಡೆಸಿದರು. ಸುಗುಣ ಎಂ.ಕೆ. ಆಚಾರ್ಯ ಉಜಿರೆ ಪ್ರಾರ್ಥನೆ ಹಾಡಿದರು. ಲ| ಪಾಲಾಕ್ಷ ಸುವರ್ಣ ಸಂದೇಶ ವಾಚಿಸಿದರು. ಹೊಸ ಸದಸ್ಯರ ಪರಿಚಯವನ್ನು ಸದಸ್ಯತನ ಅಭಿವೃದ್ಧಿ ಅಧಿಕಾರಿ ನಾಮದೇವ ರಾವ್ ಮಂಡಿಸಿದರು. ಕೃಷ್ಣ ಆಚಾರ್ ಅತಿಥಿ ಪರಿಚಯ ಮಾಡಿದರು. ನೂತನ ಅಧ್ಯಕ್ಷ ಧರಣೇಂದ್ರ ಕುಮಾರ್ ಅವರ ಪರಿಚಯವನ್ನು ಪ್ರಕಾಶ್ ಶೆಟ್ಟಿ ನೊಚ್ಚ ಮಾಡಿದರು. ಪ್ರಮಾಣ ವಚನ ಬೋಧಕರ ಪರಿಚಯವನ್ನು ಲ| ದತ್ತಾತ್ರೇಯ ಗೊಲ್ಲ ಮಾಡಿದರು. ಲಾಂಗೂಲ ಚಾಲಕ ದೇವಿ ಪ್ರಸಾದ್ ಕರ್ತವ್ಯ ನಿರ್ವಹಿಸಿದರು. ಸಮಾರಂಭಕ್ಕೂ ಮುನ್ನ ಆಯ್ದ ಪ್ರತಿಭಾನ್ವಿತರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಹೊಸ ಯೋಜನೆಗಳನ್ನು ಅಧ್ಯಕ್ಷರು ಪ್ರಕಟಿಸಿದರು.
ನೂತನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಧನ್ಯವಾದವಿತ್ತರು. ನೂತನ ಕೋಶಾಧಿಕಾರಿ ವಿನ್ಸೆಂಟ್ ಟಿ. ಡಿಸೋಜಾ ಸಹಿತ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.