ಜು.1 ರಿಂದ ಹೆದ್ದಾರಿ ಬದಿಯ ಮದ್ಯದಂಗಡಿಗಳು ಬಂದ್ 14 ಮದ್ಯದಂಗಡಿ- 5 ಬಾರ್ ದೂರದ ಪ್ರದೇಶಕ್ಕೆ ಸ್ಥಳಾಂತರ

Liquor buyersಕೋರ್ಟು ತೀರ್ಪಿನಂತೆ ಸ್ಥಳಾಂತರ
ಸುಪ್ರೀಂ ಕೋರ್ಟಿನ ತೀರ್ಪಿನ ತೀರ್ಪಿನ ಪ್ರಕಾರ ಹೆದ್ದಾರಿ ಬದಿಯಲ್ಲಿರುವ 20 ಸಾವಿರಕ್ಕಿಂತ ಹೆಚ್ಚು ಜನ ಸಂಖ್ಯೆಯ ನಗರ ವ್ಯಾಪ್ತಿಯ ಮದ್ಯದಂಗಡಿಗಳು 500 ಮೀಟರ್ ಹಾಗೂ ಕಡಿಮೆ ಜನಸಂಖ್ಯೆಯ ಗ್ರಾಮ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳು 220 ಮೀಟರ್ ದೂರಕ್ಕೆ ಸ್ಥಳಾಂತರ ಗೊಳ್ಳಬೇಕು. ಈಗ ಇರುವ ಮದ್ಯ ದಂಗಡಿಗಳ ಲೈಸನ್ಸ್ ಜೂ.30ಕ್ಕೆ ಕೊನೆಗೊಳ್ಳಲಿದೆ. ಮದ್ಯದಂಗಡಿಗಳನ್ನು ನಿಯಮದಂತೆ ಸ್ಥಳಾಂತರಿಸಿ ಇಲಾಖೆಯ ಲೈಸನ್ಸ್ ಪಡೆದುಕೊಳ್ಳಬೇಕು. -ಸೌಮ್ಯಲತಾ, ಅಬಕಾರಿ ನಿರೀಕ್ಷಕರು ಬೆಳ್ತಂಗಡಿ

ಸ್ಥಳಾಂತರಕ್ಕೂ ಲೈಸನ್ಸ್ ಬೇಕು
ಮದ್ಯ ಮತ್ತು ಬಾರ್‌ಗಳು ಸ್ಥಳಾಂತರಗೊಂಡಾಗ ಸ್ಥಳಾಂತರ ಪ್ರದೇಶದಲ್ಲಿ ಪ್ರಾರಂಭ ಮಾಡುವ ಮೊದಲು ಸ್ಥಳೀಯ ಪಂಚಾಯತುಗಳಿಂದ ಪರವಾನಿಗೆಯನ್ನು ಪಡೆದುಕೊಳ್ಳುವುದು ಖಡ್ಡಾಯವಾಗಿದೆ.
ಮದ್ಯದಂಗಡಿ ತೆರೆಯುವ ಕಟ್ಟಡ ಶಾಲಾ ಕಾಲೇಜುಗಳಿಂದ, ದೇವಸ್ಥಾನ, ಚರ್ಚ್, ಮಸೀದಿ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಂದ, ಪರಿಶಿಷ್ಟ ಜಾತಿ ಕಾಲನಿಯಿಂದ 100 ಮೀಟರ್ ದೂರವಿರಬೇಕು. ಅಬಕಾರಿ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಅಬಕಾರಿ ಡಿ.ಸಿ. ಯವರಿಗೆ ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿಯವರಿಂದ ಅನುಮತಿ ದೊರಕಿದ ಬಳಿಕ ಮದ್ಯದಂಗಡಿ ವ್ಯವಹಾರವನ್ನು ಆರಂಭಿಸಬೇಕು.

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಬದಿಯಲ್ಲಿರುವ ವೈನ್‌ಶಾಪ್‌ಗಳನ್ನು 500 ಮೀಟರ್ ಅಥವಾ 220 ಮೀಟರ್ ಒಳಗೆ ಸ್ಥಳಾಂತರಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಹೆದ್ದಾರಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಬಾರ್‌ಗಳು ಮತ್ತು ವೈನ್ ಶಾಪ್‌ಗಳು ಜು.1 ರಿಂದ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಲಿದೆ.
ಬೆಳ್ತಂಗಡಿ ತಾಲೂಕಿನ 14 ವೈನ್ ಶಾಪ್‌ಗಳು ಹಾಗೂ 5 ಬಾರ್‌ಗಳು ತಮ್ಮ ವ್ಯಾಪಾರವನ್ನು ಬಂದ್ ಮಾಡಿ ದೂರದ ಪ್ರದೇಶಗಳಿಗೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಳ್ತಂಗಡಿಯ 3ಸ್ಟಾರ್ ವೈನ್ಸ್, ಲಾವಣ್ಯ ವೈನ್ಸ್, ಅನಿಲ್ ವೈನ್ಸ್, ಶ್ವೇತಾ ವೈನ್ಸ್, ಲಾಯಿಲ ಶೀತಲ್ ವೈನ್ಸ್, ಗುರುವಾಯನಕೆರೆಯ ಸ್ವಸ್ತಿಕ್ ವೈನ್ಸ್, ಮಡಂತ್ಯಾರಿನ ಅಶ್ವಿನಿ ವೈನ್ಸ್, ಉಜಿರೆಯ 7ಸ್ಟಾರ್ ವೈನ್ಸ್, ಜುಗಲ್ ವೈನ್ಸ್, ಪ್ರಿಯಾ ವೈನ್ಸ್, ಸೋಮಂತಡ್ಕದ ವರಣ್ ವೈನ್ಸ್, ಕಕ್ಕಿಂಜೆಯ ಸಾಲಿಯಾನ್ ವೈನ್ಸ್, ಕೊಕ್ಕಡ ಸಾಲಿಯಾನ್ ವೈನ್ಸ್, ಅಳದಂಗಡಿ ರೀಜೆಂಟ್ ವೈನ್ಸ್ ಸ್ಥಳಾಂತರಗೊಳ್ಳಲಿದೆ. ಬಾರ್‌ಗಳಲ್ಲಿ ಬೆಳ್ತಂಗಡಿಯ ಗಾರ್ಡನ್, ಡಿ.ಕೆ, ಮಡಂತ್ಯಾರಿನ ಟೋನಿ, ಅಳದಂಗಡಿ ಮತ್ತು ನಾರಾವಿಯ ಬಾರ್‌ಗಳು ಸ್ಥಳಾಂತರಗೊಳ್ಳಲಿದೆ. ಇದರಲ್ಲಿ ಅಳದಂಗಡಿ ಮತ್ತು ನಾರಾವಿ ಬಾರ್‌ಗಳು ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ಬೆಳ್ತಂಗಡಿ ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿಗಳ ಬದಿಯಲ್ಲಿ ಮದ್ಯ ಅಂಗಡಿಗಳು ಇರುವುದು ಅಪಘಾತಗಳಿಗೆ ಕಾರಣವಾಗಿದ್ದು, ಅವುಗಳನ್ನು ತೆರವುಗೊಳಿಸಬೇಕೆಂದು ಕೆಲ ನಾಗರಿಕರು, ಸಾರ್ವಜನಿಕ ಹಿತಾಶಕ್ತಿ ದಾವೆ ಹೂಡಿದ ಹಿನ್ನಲೆಯಲ್ಲಿ ಇದರ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು 20 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ಹೆದ್ದಾರಿಯಿಂದ 500 ಮೀಟರ್ ದೂರ, ಅದಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಊರುಗಳಲ್ಲಿ ಹಾದು ಹೋಗುವ ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆಂದು ಆದೇಶ ನೀಡಿದೆ.
ಜೂನ್ 30ಕ್ಕೆ ತಾಲೂಕಿನ ವೈನ್ಸ್ ಶಾಪ್ ಹಾಗೂ ಮದ್ಯದಂಗಡಿಗಳ ಲೈಸನ್ಸ್ ಅವಧಿ ಮುಗಿಯುವುದರಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳ ಲೈಸನ್ಸ್ ರಿನಿವಲ್ ಮಾಡದಿರಲು ಅಬಕಾರಿ ಇಲಾಖೆ ನಿರ್ಧರಿಸಿದೆ. ಸುಪ್ರೀಂ ಕೋರ್ಟು ಆದೇಶದ ಹಿನ್ನಲೆಯಲ್ಲಿ ಬಾರ್ ಮತ್ತು ವೈನ್‌ಶಾಪ್‌ಗಳನ್ನು ಹೊಂದಿರುವ ಮಾಲಕರು ಆದೇಶದಲ್ಲಿ ನೀಡಿರುವಂತೆ ದೂರದ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬೇಕಾದ ಜಾಗ, ಬಾಡಿಗೆ ಕಟ್ಟಡಗಳನ್ನು ನಿಗದಿ ಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ ಅಲ್ಲಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡುವ ಕೆಲಸಗಳು ನಡೆಯುತ್ತಿದೆ.
ಈಗಾಗಲೇ ಬೆಳ್ತಂಗಡಿ ಮೂರು ಮಾರ್ಗದ ಬಳಿ ಇದ್ದ ಲಾವಣ್ಯ ವೈನ್ಸ್ ಕಿಲ್ಲೂರಿಗೆ ಸ್ಥಳಾಂತರಗೊಂಡಿದೆ. ಈ ನಡುವೆ ಮದ್ಯದಂಗಡಿಗಳನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸಲು ಮಾಲಕರು ನಡೆಸುತ್ತಿರುವ ಪ್ರಯತ್ನಕ್ಕೆ ಅಲ್ಲಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗತೊಡಗಿದ್ದು, ಮಾಲಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಡಂತ್ಯಾರಿನ ವೈನ್ಸ್ ಶಾಪ್‌ನ್ನು ಮಾಲಾಡಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಶಾಲೆ, ದೈವಸ್ಥಾನ, ಗ್ರಾ.ಪಂ. ಹತ್ತಿರ ಇರುವುದರಿಂದ ಇದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ತಾಲೂಕು ಜನಜಾಗೃತಿ ವೇದಿಕೆಗೆ ದೂರು ನೀಡಿದ್ದಾರೆ. ಇದರ ವಿರುದ್ಧ ಜನಜಾಗೃತಿ ವೇದಿಕೆಯೂ ವಿರೋಧ ವ್ಯಕ್ತಪಡಿಸಿ ಅಬಕಾರಿ ಇಲಾಖೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.