ಮಲ್‌ಜಅ ರಂಝಾನ್ ಪ್ರಾರ್ಥನಾ ಸಂಗಮ ಅಭೂತಪೂರ್ವ ಯಶಸ್ವಿ ಗ್ರ್ಯಾಂಡ್ ಇಫ್ತಾರ್ ಮೀಟ್ ನಲ್ಲಿ ಸಾವಿರಾರು ಮಂದಿ ಭಾಗಿ, ಉಜಿರೆ ತಂಙಳ್ ನೇತೃತ್ವ

Malja ramjanಉಜಿರೆ: ಆರಾಧನೆಯಿಂದ ಸಕ್ರೀಯಗೊಳ್ಳಬೇಕಾದ ರಂಜಾನ್ ತಿಂಗಳಿನ ಅತಿ ಶ್ರೇಷ್ಠ ರಾತ್ರಿಯಾದ 27ನೇ ಉಪವಾಸದ ಲೈಲತುಲ್ ಖದ್ರ್ ಸಾವಿರ ತಿಂಗಳಿಗಿಂತಲೂ ಶ್ರೇಷ್ಟ ರಾತ್ರಿಯಾಗಿರುವುದಾಗಿ ಮುಸ್ಲಿಂ ಬಾಂಧವರ ನಂಬಿಕೆಯಾಗಿದ್ದು, ಆ ಹಿನ್ನಲೆಯಲ್ಲಿ ಲಾಯಿಲ ಗ್ರಾಮದ ಕಾಶಿಬೆಟ್ಟು ಮಲ್‌ಜಅ ದಅವಾ ಮತ್ತು ರಿಲೀಫ್ ಸೆಂಟರ್ ವತಿಯಿಂದ ರಂಝಾನ್ ಪ್ರಾರ್ಥನಾ ಸಮ್ಮೇಳನ ಎಂಬ ವಿಶಿಷ್ಠ ರೀತಿಯ ಆರಾಧನ ಸಮ್ಮೇಳನವಾಗಿ ಜೂ.21 ರಂದು ಸಂಜೆ 4 ಗಂಟೆಯಿಂದ ಜೂ. 22ರ ಬೆಳಗ್ಗಿನ ಬೆಳಿಗ್ಗೆ 5ರ ವರೆಗೆ ಅತ್ಯಂತ ಶ್ರದ್ಧೆ, ಭಕ್ತಿ ಭಾವದೊಂದಿಗೆ ಜರುಗಿತು.
ಕಾರ್ಯಕ್ರಮದ ನೇತೃತ್ವದ ವಹಿಸಿದ್ದ ಉಜಿರೆ ತಂಙಳ್ ಸಯ್ಯಿದ್ ಅಲವಿ ಜಲಾಲುದ್ದೀನ್ ಅಲ್‌ಹಾದಿ ಮದನಿ ಮಾತನಾಡಿ, ಲೈಲತುಲ್ ಖದ್ರ್ ರಾತ್ರಿ ರಂಝಾನ್‌ನ 21, 23, 25, 27 ಹಾಗೂ 29ರ ರಾತ್ರಿಗಳಲ್ಲಿ ಬರುವ ಸಾಧ್ಯತೆ ಇದೆ. ಅದರಲ್ಲೂ ರಂಝಾನ್ 27 ರಂದು ಎಂಬುದಾಗಿ ಬಹುತೇಕ ಇಮಾಮರುಗಳು, ಜ್ಞಾನಿಗಳು ತಮ್ಮ ತರ್ಕಶಾಸ್ತ್ರ ಗ್ರಂಥಗಳಲ್ಲಿ ವಿಶ್ಲೇಷಿಸಿದ್ದಾರೆ. ಆದುದರಿಂದ ಕನಿಷ್ಠ ಈ ಒಂದು ರಾತ್ರಿಯಲ್ಲಾದರೂ ತಮ್ಮನ್ನು ಪೂರ್ಣವಾಗಿ ಪ್ರಾರ್ಥನೆಯಲ್ಲಿ ಸಾಮೂಹಿಕವಾಗಿ ತೊಡಗಿಸಿಕೊಳ್ಳಲು ಸರ್ವರಿಗೂ ವೇದಿಕೆಯಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವ ಸಮೂಹವನ್ನು ಕೆಡುಕಿನಿಂದ ಒಳಿತಿನೆಡೆಗೆ ತರುವ ಉದ್ದೇಶ, ಲೈಲತುಲ್ ಖದ್ರ್ ಮಹತ್ವ ತಿಳಿಹೇಳುವ ಕಾರ್ಯಕ್ಕೆ ಪ್ರಾಧಾನ್ಯತೆ ಹಾಗೂ ಆಶಯದಿಂದ ಜನತೆ ಹಿಮ್ಮುಖವಾಗಿ ಅನ್ಯ ಆಶಯಗಳ ಬೆನ್ನೇರಿ ಹೋಗುವುದನ್ನು ತಪ್ಪಿಸುವ ಬೋಧನೆ ದೊರೆಯುವಂತೆಯೂ ಮಾಡುವ ಮಹತ್ ಕಾರ್ಯ ಇದರಲ್ಲಿ ಅಡಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಚೇರ್‌ಮೆನ್ ಉಸ್ಮಾನ್ ಶಾಫಿ ಗುರುವಾಯನಕೆರೆ ವಹಿಸಿದ್ದರು. ವೇದಿಕೆಯಲ್ಲಿ ಮಲ್‌ಜಅ ಮುದರ್ರಿಸ್ ಆಸಿಫ್ ಅಹ್‌ಸನಿ ಸಹಿತ ಎಲ್ಲಾ ವಿದ್ವಾಂಸರುಗಳು, ಧಾರ್ಮಿಕ ಸಾಮಾಜಿಕ ಮುಖಂಡರುಗಳು, ನಾನಾ ಕಡೆಯಿಂದ ಆಗಮಿಸಿದ ಗಣ್ಯಾತಿಗಣ್ಯ ಅತಿಥಿಗಳು ಭಾಗಿಯಾಗಿದ್ದರು. ಸ್ವಾಗತ ಸಮಿತಿ ಕೋಶಾಧಿಕಾರಿ ಶಂಶುದ್ದೀನ್ ಜಾರಿಗೆಬೈಲು, ಫುಡ್ ಕಮಿಟಿ ವ್ಯವಸ್ಥಾಪಕ ಅಬ್ಬೋನು ಮದ್ದಡ್ಕ, ಮಲ್‌ಜಅ ಜನರಲ್ ಮೇನೇಜರ್ ಮುಹಮ್ಮದ್ ಶರೀಫ್ ಬೆರ್ಕಳ, ಜನರಲ್ ಕನ್ವೀನರ್ ಅಶ್ರಫ್ ಆಲಿಕುಂಞಿ ಮುಂಡಾಜೆ ಸಹಿತ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಮೂಹಿಕ ಇಫ್ತಾರ್‌ಕೂಟ:
ಪ್ರಾರ್ಥನಾ ಸಂಗಮ ಕಾರ್ಯಕ್ರಮ ನಿಮಿತ್ತ ಗ್ರಾಂಡ್ ಇಫ್ತಾರ್ ಮೀಟ್‌ನಲ್ಲಿ ವಿವಿಧೆಡೆಯಿಂದ ಆಗಮಿಸಿದ ಸುಮಾರು 1,700ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ ದುಆ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಯ್ಯಿದ್ ಅಬ್ದುಸ್ಸಲಾಂ ತಂಙಳ್ ಪುಂಜಾಲಕಟ್ಟೆ, ಸಯ್ಯಿದ್ ಮುರ ಇಂಬಿಚ್ಚಿಕೋಯ ತಂಙಳ್ ಅಲ್‌ಬುಖಾರಿ, ಸಯ್ಯಿದ್ ಬೆಳಾಲ್ ತಂಙಳ್, ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್, ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್‌ಶರ್, ಸುನ್ನೀ ಸಂಯುಕ್ತ ಜಮಾಅತ್ ಪ್ರ. ಕಾರ್ಯದರ್ಶಿ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಸಹಿತ ಅನೇಕ ಮಸೀದಿಗಳ ಆಡಳಿತ ಸಮಿತಿ ಅಧ್ಯಕ್ಷ- ಪದಾಧಿಕಾರಿಗಳು, ಸ್ವಾಗತ ಸಮಿತಿ ನಿಕಟಪೂರ್ವಾಧ್ಯಕ್ಷ ಬದ್ರುದ್ದೀನ್ ಎಂ.ಕೆ ಪರಪ್ಪು ಸಹಿತ ಅನೇಕ ಮಂದಿ ಗಣ್ಯರು ಭಾಗಿಯಾಗಿದ್ದರು.
ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಿದ ಸ್ವಯಂ ಸೇವಕರು:
ಕಾರ್ಯಕ್ರಮದಲ್ಲಿ ಏಕ ಕಾಲದಲ್ಲಿ ಎಲ್ಲರಿಗೂ ಇಫ್ತಾರ್ ವ್ಯವಸ್ಥೆ ಏರ್ಪಡಾಗಬೇಕಾಗಿದ್ದು ಇದರ ಸಂಯೋಜನೆಯಲ್ಲಿ ಸುಲೈಮಾನ್ ಕುಂಟಿನಿ, ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷ ಕಾಸಿಂ ಮುಸ್ಲಿಯಾರ್ ಮಾಚಾರ್, ರಶೀದ್ ವೇಣೂರು, ಸಿದ್ದೀಕ್ ಪರಪ್ಪು, ರಶೀದ್ ಮಡಂತ್ಯಾರು ಇವರ ಸಂಯೋಜನೆಯಲ್ಲಿ ಸುನ್ನೀ ಸಮೂಹ ಸಂಘಟನೆಗಳ ಸದಸ್ಯರು ಹಾಗೂ ಮಲ್‌ಜಅಅ ಬ್ರಾಂಚ್ ಸಮಿತಿಗಳ ಸದಸ್ಯರನ್ನೊಳಗೊಂಡ ಸುಮಾರು 200 ಕ್ಕೂ ಅಧಿಕ ತರಭೇತಿ ಪಡೆದ ಸ್ವಯಂ ಸೇವಕರು ವ್ಯವಸ್ಥೆ ರೂಪಿಸುವಲ್ಲಿ ಸಹಕಾರಿಯಾದರು.
ಪ್ರಚಾರ ಸಮಿತಿ ಮುಖ್ಯಸ್ಥ ಹಕೀಂ ಸರಳಿಕಟ್ಟೆ ಅವರ ನೇತೃತ್ವದಲ್ಲಿ ಆನ್‌ಲೈನ್ ಮೂಲಕ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಕೆಸಿಎಫ್ ಸಹಿತ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾದರು.
ಅಚ್ಚುಕಟ್ಟಾದ ವ್ಯವಸ್ಥೆ:
ಸಂಜೆ 5 ಗಂಟೆಗೆ ರೊಟ್ಟಿ ಸಂದಲ್ ಮೆರವಣಿಗೆಯನ್ನು ಬರಮಾಡಿಕೊಂಡು ಸಯ್ಯಿದ್ ಉಜಿರೆ ತಂಙಳ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಪ್ರಧಾನ ವೇದಿಕೆಯಲ್ಲಿ ಬದ್ರ್ ಮೌಲೀದ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಪೂರ್ವ ನಿರ್ಧರಿತ ಮಾರ್ಗಸೂಚಿಯಂತೆ ಆಧ್ಯಾತ್ಮ ಸಂಗಮ, ಅನ್ನ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಇಫ್ತಾರ್ ಬಳಿಕ ಮತ್ತು ರಾತ್ರಿಯ ವಿವಿಧ ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು, ವ್ಯವಸ್ಥೆಗಳ ಬಗ್ಗೆ ತೃಪ್ತಿಪಟ್ಟುಕೊಂಡರು.
ಬೆಳಗ್ಗಿನ ನಮಾಝ್ ಮೂಲಕ ಕಾರ್ಯಕ್ರಮಕ್ಕೆ ತೆರೆಬಿತ್ತು. ಸ್ವಾಗತ ಸಮಿತಿ ಪದಾಧಿಕಾರಿಗಳು, ಮಲ್‌ಜಅನ ಸಿಬ್ಬಂದಿಗಳು ಪೂರ್ಣವಾಗಿ ಸಹಕಾರ ನೀಡಿದರು. ಆಸನ, ಚಪ್ಪರ ಇತ್ಯಾಧಿ ವ್ಯವಸ್ಥೆಯ ನೇತೃತ್ವವನ್ನು ಲೆತೀಫ್ ಹಾಜಿ ಗುರುವಾಯನಕೆರೆ ವಹಿಸಿದ್ದರು. ಧ್ವನಿ ಬೆಳಕು ವ್ಯವಸ್ಥೆಯನ್ನು ಬದ್ರುದ್ದೀನ್ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.