ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಹುದ್ದೆಗಳಿಗೆ ಐವರ ನೇಮಕ

suddi COLORpdf BLDY.p65ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಬೆಳ್ತಂಗಡಿ ತಾಲೂಕಿನಿಂದ ಇಬ್ಬರು ಸದಸ್ಯರುಗಳು, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್‌ನ ಗ್ರಾಮೀಣ ಮತ್ತು ನಗರ ಘಟಕ ಹಾಗೂ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷರಾಗಿ ಒಬ್ಬರು ಹೀಗೆ ಪಕ್ಷದ ಪ್ರಮುಖ ಹುದ್ದೆಗಳಿಗೆ ತಾಲೂಕಿನ ಐವರನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ.
ಕೆಪಿಸಿಸಿ ಸದಸ್ಯರಾಗಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೀತಾಂಬರ ಹೇರಾಜೆ ಮತ್ತು ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾಗಿದ್ದ ನ್ಯಾಯವಾದಿ ರಾಮಚಂದ್ರ ಗೌಡ ಅವರ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ನೂತನ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಅಂತೆಯೇ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸಿಗ, ಕೆಪಿಸಿಸಿ ಮಾಜಿ ಸದಸ್ಯರಾಗಿದ್ದ ರಾಜಶೇಖರ್ ಅಜ್ರಿ ಅವರನ್ನು ಆಯ್ಕೆಗೊಳಿಸಲಾಗಿದ್ದು, ಗ್ರಾಮೀಣ
ಬ್ಲಾಕ್ ಅಧ್ಯಕ್ಷರಾಗಿ ಎಪಿಎಂಸಿ ಮಾಜಿ ಅಧ್ಯಕ್ಷ, ಕೆಪಿಸಿಸಿಯ ಮಾಜಿ ಸದಸ್ಯರಾಗಿದ್ದ ಶ್ರೀನಿವಾಸ ವಿ. ಕಿಣಿ ಅವರನ್ನು ನೇಮಿಸಲಾಗಿದೆ. ಹಾಗೂ ಪಕ್ಷದ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷರಾಗಿ ಅಳದಂಗಡಿ ಕ್ಷೇತ್ರದ ಜಿ.ಪಂ. ಸದಸ್ಯ, ಹಾಗೂ ದಲಿತ ಸಂಘರ್ಷ ಸಮಿತಿ ತಾ| ಸಂಘಟನಾ ಸಂಚಾಲಕ ಶೇಖರ್ ಕುಕ್ಕೇಡಿ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಇಬ್ಬರು ಕೆಪಿಸಿಸಿ ಸದಸ್ಯರುಗಳು:
ಕೆಪಿಸಿಸಿ ಸದಸ್ಯರಾಗಿರುವ ಪೀತಾಂಬರ ಹೇರಾಜೆ ಅವರು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು, ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ. ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷರಾಗಿಯೂ ಇವರು ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಕೋಟಿ ಚೆನ್ನಯ್ಯ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಿಲ್ ಇಲ್ಲಿನ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷರಾಗಿ, ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಬೆಳ್ತಂಗಡಿ ಸೇರಿದಂತೆ ಹತ್ತುಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಕ್ರೀಡಾಪಟು ಮತ್ತು ಸಂಘಟಕರಾಗಿ ಗುರುತಿಸಿಕೊಂಡಿರುವ ಅವರು ಸರಕಾರಿ ವೃತ್ತಿಯ ನಿವೃತ್ತಿಯ ಬಳಿಕ ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪ್ರಸ್ತುತ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೋರ್ವ ಕೆಪಿಸಿಸಿ ಸದಸ್ಯರಾಗಿ ನೇಮಕಗೊಂಡಿರುವ ಕೆ. ರಾಮಚಂದ್ರ ಗೌಡ ಅವರು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಯಶಸ್ವಿಯಾಗಿ ಒಂದು ಅವಧಿಯ ಸೇವೆ ಪೂರ್ಣಗೊಳಿಸಿದ್ದಾರೆ. ಪಕ್ಷದ ಸಂಘಟನೆಯಲ್ಲಿ ನಗರ ಘಟಕದ ಅಧ್ಯಕ್ಷರ ಜೊತೆ ಅವರೂ ಶ್ರಮವಹಿಸಿದ್ದಾರೆ. ನ್ಯಾಯವಾದಿ ಮತ್ತು ನೋಟರಿ ಪಬ್ಲಿಕ್ ಆಗಿರುವ ಅವರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ತಾಲೂಕು ಸಮಿತಿ ಮಾಜಿ ಉಪಾಧ್ಯಕ್ಷರಾಗಿ ಸೇರಿದಂತೆ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು:
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಶೇಖರ್ ಅಜ್ರಿ ಅವರು ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡರಲ್ಲೋರ್ವರಾಗಿದ್ದು ಈ ಹಿಂದೆ ಕೆಪಿಸಿಸಿ ಸದಸ್ಯರಾಗಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಬೆಳ್ತಂಗಡಿಯ ಭೂನ್ಯಾಯ ಮಂಡಳಿಯ ಸದಸ್ಯರಾಗಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿ, ಪ್ರಕೃತ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾಗಿ ಸೇರಿದಂತೆ ಪಕ್ಷಕ್ಕಾಗಿ ದೀರ್ಘ ವರ್ಷಗಳಿಂದ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ. ಉತ್ತಮ ವಾಗ್ಮಿಯೂ ಆಗಿರುವ ಅವರು ಪಕ್ಷದ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ.
ಗ್ರಾಮೀಣ ಬ್ಲಾಕ್ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀನಿವಾಸ ವಿ. ಕಿಣಿ ಅವರು ನಾರಾವಿ ಗ್ರಾ.ಪಂ. ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ನಾರಾವಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ನಾರಾವಿ ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾಗಿ, ಜಿಲ್ಲಾ ಕೆ.ಡಿ.ಪಿ. ಸದಸ್ಯರಾಗಿ ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷರು:
ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ಶೇಖರ್ ಕುಕ್ಕೇಡಿ ಅವರು ತಾ.ಪಂ. ಕೆಡಿಪಿ ಮಾಜಿ ಸದಸ್ಯರಾಗಿದ್ದು, ಅಳದಂಗಡಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಹಾಲಿ ಸದಸ್ಯರಾಗಿದ್ದಾರೆ. ಹಾಗೂ ಜಿಲ್ಲಾ ಪಂಚಾಯತ್‌ನ ಸಾಮಾಜಿಕ ನ್ಯಾಯ ಸಮಿತಿ ಸದಸ್ಯರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಅಂಬೇಡ್ಕರ್‌ವಾದ ಇದರ ವೇಣೂರು ಹೋಬಳಿ ಸಂಚಾಲಕರಾಗಿದ್ದ ಅವರು ಈಗ ಕಳೆದ 10 ವರ್ಷಗಳಿಂದ ತಾಲೂಕು ಸಮಿತಿ ಸಂಘಟನಾ ಸಂಚಾಲಕರಾಗಿದ್ದಾರೆ. ಅವರು ಪಂಚಾಯತ್ ಮಟ್ಟದ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಕುಕ್ಕೇಡಿ ಪಂಚಾಯತ್‌ನಲ್ಲಿ ೧೧ಕ್ಕೆ ೧೧ ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತರು ಜಯಗಳಿಸುವಲ್ಲಿ ಕಾರಣರಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.