ನವಂಬರ್ 21-24: ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ಸಂಭ್ರಮ : ಧರ್ಮಸ್ಥಳದಲ್ಲಿ ನಡೆದ 3ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಡಾ. ಹೆಗ್ಗಡೆ ಘೋಷಣೆ

dharmastala yoga1

dharmastala yoga4ಧರ್ಮಸ್ಥಳ: ಬಿಎನ್‌ವೈಎಸ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಭಾರತ ಸರಕಾರದ ಮೂಲಕ ಮುಂದಿನ ನವಂಬರ್ 21 ರಿಂದ 24ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ಸಂಭ್ರಮ ಆಯೋಜಿಲಾಗಿದೆ. ಈ ಮೂರು ದಿನಗಳಲ್ಲಿ ಅಂತಾರಾಷ್ಟ್ರೀಯ ಯೋಗ ಪಟುಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅವರ ಮುಂದೆ ಯೋಗ ಪ್ರದರ್ಶಿಸುವ ಮತ್ತು ಅವರ ಯೋಗವನ್ನು ನೋಡುವ ಯೋಗ ನಮ್ಮದಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಘೋಷಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ವತಿಯಿಂದ ಜೂ. 21 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ 3ನೇ ವಿಶ್ವಯೋಗ ದಿನಾಚರಣೆ-2017 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆನ್‌ಲೈನ್ ಮೂಲಕ ಆರೋಗ್ಯ ಪಡೆಯಲು ಸಾಧ್ಯವಿಲ್ಲ:
ಇಂದು ಎಲ್ಲವನ್ನೂ ಆನ್‌ಲೈನ್ ಪರ್ಚೆಸ್ ಕಾಲ. ಎಲ್ಲವನ್ನೂ ಆನ್‌ಲೈನ್ ಮೂಲಕ ಬುಕ್ಕಿಂಗ್ ಮತ್ತು ಪೇಮೆಂಟ್ ಮಾಡಿ ವಸ್ತುಗಳನ್ನು ಮನೆಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಆರೋಗ್ಯವನ್ನು ಆನ್‌ಲೈನ್ ಮೂಲಕ ಪಡೆಯಲು ಸಾಧ್ಯವಿಲ್ಲ.
ನಿರಂತರ ಯೋಗಾಭ್ಯಾಸದಿಂದ ದೇಹ, ಮನಸ್ಸು, ಇಂದ್ರಿಯಗಳನ್ನು ನಿಯಂತ್ರಣಕ್ಕೆ ತರಬಹುದು. ಹಿಂದಿನ ಕಾಲದಲ್ಲಿ ಭಾರತ ಹಾವಾಡಿಗರ ದೇಶ ಎಂಬುದಾಗಿ ಕರೆಸಿಕೊಂಡಿತ್ತು. ನಾವೆಲ್ಲಾ ಸಣ್ಣವರಿರುವಾಗ ಬಡ ದೇಶ ಎನ್ನುತ್ತಿದ್ದರು. ಅದೇ ಭಾರತ ಜಗತ್ತಿಗೆ ದೀರ್ಘಾಯುಸ್ಸು ಕೊಡುವ ಯೋಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಕೊಡುಗೆಯಾಗಿ ನೀಡಿದರು. ಬಡ ಎನ್ನುತ್ತಿದ್ದ ಭಾರತವನ್ನು ಹಿಂದಿಯಲ್ಲಿನ ಬಡಾ (ದೊಡ್ಡ) ದೇಶ ಎಂಬುದಾಗಿ ಮಾಡಿದರು ಎಂದು ಹೆಗ್ಗಡೆಯವರು ವಿಶ್ಲೇಶಿಸಿದರು.
ಆರೋಗ್ಯವಂತ ದೇಹ ಮತ್ತು ಮನಸ್ಸು ಬೇಕು :
ಆಧುನಿಕ ಜೀವನ ಶೈಲಿ, ಅತಿಯಾದ ತಾಂತ್ರಿಕತೆ ಬಳಕೆಯಿಂದ ಮನುಷ್ಯ ಶಕ್ತಿ
ಕಳೆದುಕೊಂಡಿದ್ದಾನೆ. ಎಲ್ಲವನ್ನೂ ರೋಬೋಟ್‌ಗಳು ಮಾಡಿಕೊಡುತ್ತಿದೆ. ಎಲ್ಲರೂ ಹೆಪ್ಪಿ ಮ್ಯಾನ್‌ಗಳಾಗಿದ್ದಾರೆ. ದೇಹವನ್ನು ದಂಡಿಸುವ ಪ್ರವೃತ್ತಿ ಕಡಿಮೆಯಾಗಿದೆ. ದೇಹ, ಮನಸ್ಸು, ಇಂದ್ರಿಯಗಳು ನನ್ನದು ಎಂಬ ಭಾವನೆ ಮೂಡಬೇಕು. ಪ್ರಧಾನಿಯವರ ಸಂದೇಶದಂತೆ ಭಾರತವನ್ನು ಮಧುಮೇಹ ಮುಕ್ತ (ಶುಗರ್ ಕಾಯಿಲೆ), ರೋಗ ಮುಕ್ತ ದೇಶವಾಗಿ ಮಾರ್ಪಾಟು ಮಾಡಬೇಕು ಎಂದರು.
27 ವರ್ಷಗಳ ಹಿಂದೆಯೇ ಆಲೋಚಿಸಲಾಗಿತ್ತು:
ಪಂತಂಜಲಿ ಋಷಿ ಮುನಿಗಳ ಮೂಲಕ ಯೋಗಕ್ಕೆ ಸೂತ್ರ ಬಂತು. ಸುಮಾರು 5 ಸಾವಿರ ವರ್ಷಗಳ ಹಳೆಯದಾದ ಬದುಕಿನ ಅಂತಸತ್ವದ ಯೋಗವನ್ನು ಮೂರು ವರ್ಷಗಳಿಂದ ವಿಶ್ವಮಟ್ಟಕ್ಕೆ ಏರಿಸಿ ದೇಶದ ಕೊಡುಗೆ ನೀಡಲಾಗಿದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸುಮಾರು 27 ವರ್ಷಗಳ ಹಿಂದೆಯೇ ಯೋಗ ಪ್ರಚಾರಕ್ಕಾಗಿ ಸಂಸ್ಥೆಯೊಂದನ್ನು ಕಟ್ಟಿ, ಪ್ರಾರಂಭದಲ್ಲಿ 2500 ಮಂದಿ ಶಿಕ್ಷಕರಿಗೆ ಯೋಗ ತರಬೇತಿ ನೀಡಿ, ಅವರ ಮೂಲಕ ಒಬ್ಬೊಬ್ಬರು 10 ಮಂದಿಗೆ ತರಬೇತಿಯಂತೆ ಲಕ್ಷಾಂತರ ಮಂದಿಗೆ ಯೋಗದ ಸಂದೇಶ ಪ್ರಸಾರವಾಗುವಂತೆ ಮಾಡಲಾಗಿದೆ ಎಂಬುದು ಗಮನಾರ್ಹ ಎಂದರು.
ಯೋಗ ಮಾನಸಿನ ಉದ್ವೇಗ ನಿಯಂತ್ರಣಕ್ಕಿರುವ ಮಾರ್ಗ: ಶ್ಯಾಮ್ ಭಟ್
ಉದ್ಘಾಟನೆ ನೆರವೇರಿಸಿದ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಮಾತನಾಡಿ, ಭಜನೆ, ವಿಶ್ರಾಂತಿ, ನಿದ್ರೆ, ವ್ಯಾಯಾಮ, ಸತ್ಸಂಗ ಇತ್ಯಾಧಿಗಳಿಗೆ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದ್ದು, ದುಷ್ಟ ಚಿಂತನೆಗಳನ್ನು ನಿಗ್ರಹಿಸಬಹುದು. ಶೀಘ್ರ ವೃದ್ಧಾಪ್ಯ ಮತ್ತು ಅನಾರೋಗ್ಯ ಇಂದಿನ ಪೀಳಿಗೆಯ ಸಮಸ್ಯೆ. ಯೋಗ ಮಾನಸಿಕ ಉದ್ವೇಗ ನಿಯಂತ್ರಣಕ್ಕಿರುವ ಏಕೈಕ ಮಾರ್ಗ ಎಂದರು.
ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್ ಮಹಾಪ್ರಬಂಧಕ ರವೀಂದ್ರ ಭಂಡಾರಿ ಮಾತನಾಡಿ, ನಮ್ಮ ಬ್ಯಾಂಕ್‌ನಲ್ಲಿ 1.50 ಸಾವಿರ ಕೋಟಿ ವ್ಯವಹಾರ ನೋಡಿಕೊಳ್ಳುವ ಹೊಣೆಗಾರಿಕೆ ನನ್ನ ಮೇಲಿದ್ದು ಎಷ್ಟು ಒತ್ತಡದ ಕೆಲಸವಾಗಿರಬಹುದೆಂದು ನೀವೇ ಊಹಿಸಿಕೊಳ್ಳಬಹುದು. ಆದರೆ ಪ್ರತಿ ದಿನ ಯೋಗ ಮಾಡುವುದರಿಂದ ಈ ಎಲ್ಲಾ ಒತ್ತಡಗಳನ್ನು ನಾನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವಲ್ಲಿ ಯಶಸ್ಸು ಕಂಡಿದ್ದೇನೆ. ಕೆನರಾ ಬ್ಯಾಂಕ್ ಈ ಕಾರ್ಯಕ್ರಮವನ್ನು ಮೆಚ್ಚಿ ನಿಮ್ಮ ಜೊತೆ ಕೈ ಜೋಡಿಸಿದೆ. ಮುಂದೆಯೂ ಅಗತ್ಯ ನೆರವು ನೀಡಲಾಗುವುದು ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ| ಬಿ. ವಸಂತ ಶೆಟ್ಟಿ ಮಾತನಾಡಿ, ಯೋಗ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಒಂದುಮಾಡುವ ಸಾಧನವಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ನಿರ್ದೇಶಕ ಅರುಣ್ ಪೂಜಾರ್ ಶುಭ ಕೋರಿದರು.
ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ| ಬಿ ಯಶೋವರ್ಮ, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್ ಉಪಸ್ಥಿತರಿದ್ದರು.
ಎಸ್‌ಡಿಎಂ ಬಿಎನ್‌ವೈಎಸ್ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಾಲ್ಕು ವಿ.ವಿ ಗಳ ಸುಮಾರು 500 ರಷ್ಟು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಆಸಕ್ತರು ಯೋಗ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.