ಎಂಡೋ ಸಂತ್ರಸ್ಥರಿಗೆ ಕೇರಳ ಮಾದರಿ ಪರಿಹಾರ : ಅಧಿವೇಶನದಲ್ಲಿ ಸರಕಾರ ಘೋಷಣೆ ಸಂತ್ರಸ್ಥರಲ್ಲಿ ಮೂಡಿದ ಆಶಾಕಿರಣ

  ಕೊಕ್ಕಡ: ಎಂಡೋಸಲ್ಫಾನ್ ಸಂತ್ರಸ್ಥರಿಗೆ ಕೇರಳ ಮಾದರಿಯಲ್ಲಿ ಪರಿಹಾರ ನೀಡುವುದಾಗಿ ಹಾಗೂ ಈ ದುರಂತಕ್ಕೆ ಕಾರಣರಾದವರು ಯಾರು ಎಂಬ ಮೂಲವನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿಯೇ ಸಿದ್ದ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಅಧಿವೇಶನ ಮುಗಿದ ಬಳಿಕ ಎಂಡೋ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿಯೂ ಹೇಳಿದ್ದಾರೆ. ಸಚಿವರ ಈ ಭರವಸೆ ತಾಲೂಕಿನ ಎಂಡೋಪೀಡಿತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಎಂಡೋ ಸಂತ್ರಸ್ಥರಿಗೆ ಕೇರಳ ಮಾದರಿ ಪರಿಹಾರ ನೀಡಬೇಕು ಸೇರಿದಂತೆ ಸುಮಾರು 20 ಬೇಡಿಕೆಗಳನ್ನು ಮುಂದಿಟ್ಟು ಮೇ 27 ಮತ್ತು 28 ರಂದು ಕೊಕ್ಕಡದಲ್ಲಿ ಎಂಡೋ ಸಂತ್ರಸ್ಥರ ಭಾರೀ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆದಿದ್ದು ಈ ವೇಳೆ ಚಾಲನೆ ಸಿಕ್ಕದ ಮುಂದಿನ ಪ್ರಯತ್ನದ ಭಾಗವಾಗಿ ರಮೇಶ್ ಕುಮಾರ್ ಅವರು ಸದನದಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಜೂ.7 ರಂದು ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಯ ವೇಳೆ ಬಿಜೆಪಿ ಶಾಶಕ ಸುನಿಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಎಂಡೋ ಸಂತ್ರಸ್ಥರಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈ ಹಿಂದಿನ ಸರಕಾರಗಳ ಅವಧಿಯಲ್ಲಿ ಏನಾಗಿದೆಯೊ ಅದನ್ನು ಲೆಕ್ಕ ಹಾಕುವುದು ಬೇಡ. ಕೇರಳ ಮಾದರಿಯಲ್ಲಿಯೇ ರಾಜ್ಯದಲ್ಲಿನ ಎಂಡೋಪೀಡಿತರಿಗೆ ಪರಿಹಾರ ನೀಡಲಾಗುವುದು. ಸಂತ್ರಸ್ಥರಿಗೆ ಕೇರಳದಲ್ಲಿ ಯಾವ ರೀತಿ ಪರಿಹಾರ ನೀಡಲಾಗುತ್ತಿದೆ, ಹಿಂದೆ ನೀಡಿದ್ದಾರೆ ಎಂಬ ದಾಖಲೆ ತರಿಸಿಕೊಂಡು ರಾಜ್ಯದಲ್ಲಿಯೂ ಅದನ್ನೇ ಪಾಲಿಸಲಾಗುವುದು. ಬಸ್ ಹೋಗದೆ ಇರುವ ಹಳ್ಳಿಗಳಲ್ಲಿರುವ ಸಂತ್ರಸ್ಥರು ಆಸ್ಪತ್ರೆಗೆ ತೆರಳಲು ವಿಶೇಷ ಅಂಬುಲೆನ್ಸ್
ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರದೇಶಗಳಿಗೆ ಖುದ್ದು ಭೇಟಿ:
ವಿಧಾನ ಸಭೆ ಅಧಿವೇಶನ ಮುಗಿದ ಬಳಿಕ ಎಂಡೋಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿಕೊಟ್ಟು ಪರಿಶೀಲಿಸಿ ಅವರ ಕಲ್ಯಾಣಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುತ್ತೇನೆ. ವಿರೋಧ ಪಕ್ಷದ ನಾಯಕರು, ಬಿಜೆಪಿಯ ಶಾಸಕರೂ ಬರಲಿ. ಎಲ್ಲರೂ ಒಟ್ಟಾಗಿ ಕುಳಿತು ಪರಿಹಾರ ಕ್ರಮದ ಬಗ್ಗೆ ಅಲ್ಲಿಯೇ ತೀರ್ಮಾಣ ಕೈಗೊಳ್ಳೋಣ ಎಂದು ರಮೇಶ್ ಕುಮಾರ್ ಹೇಳಿದರು. ಸಂತ್ರಸ್ಥ ಕುಟುಂಬಗಳಿಗೆ ನಿರೀಕ್ಷಿತ ಪರಿಹಾರ ದೊರಕಿಸಿಕೊಡಲು ಸಾಧ್ಯಾವಾಗದೆ ಇದ್ದಲ್ಲಿ ನಾನು ಈ ಸ್ಥಾನದಲ್ಲಿ ಕೂರಲು ಅರ್ಹನೇ ಅಲ್ಲ ಎಂದು ಬಾವುಕರಾಗಿ ಹೇಳಿದ ರಮೇಶ್ ಕುಮಾರ್, ಎಂಡೋ ಪೀಡಿತರ ಎಲ್ಲಾ ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು.
ಮೂಲಪತ್ತೆಗೆ ತನಿಖೆ :
ಇಷ್ಟಕ್ಕೇ ನನ್ನ ಪ್ರಯತ್ನ ಸೀಮಿತವಾಗಿಲ್ಲ. ಎಂಡೋಸಲ್ಫಾನ್ ವಿಷ ಪತ್ತೆ ಮಾಡಿದ ವಿಜ್ಞಾನಿಗೆ ಅದರ ಪರಿಣಾಮಗಳ ಅರಿವು ಗೊತ್ತಿರಬೇಕು.
ಇದನ್ನು ಉತ್ಪಾದನೆ ಮಾಡಿದವರು ಯಾರು? ಗೇರು ತೋಟಗಳಿಗೆ ಸಿಂಪಡಣೆ ಮಾಡಲು ಕಾರಣವೇನು? ಇದನ್ನು ಯಾರು ಮಾಡಲು ಹೇಳಿದರು ಮತ್ತು ಯಾಕೆ ಮಾಡಿದರು? ಆ ಬಗ್ಗೆ ಕೂಡ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಹೊರ ಹಾಕುತ್ತೇವೆ, ಸಾರ್ವಜನಿಕ ಬದುಕಿನಲ್ಲಿ ಇದನ್ನು ಅಗ್ನಿಪರೀಕ್ಷೆಯಾಗಿ ಸ್ವೀಕರಿಸುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್, ರಾಜ್ಯದಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸರಕಾರ ಈ ಬಗೆಗೆ ಸಮೀಕ್ಷೆ ನಡೆಸಿ ಬರೀ 6500 ಸಂತ್ರಸ್ಥರಿದ್ದಾರೆ ಎಂದು ಲೆಕ್ಕ ಹಾಕಿದೆ. ಆದರೆ 10 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ಥರು ಇದ್ದಾರೆ. ಅಂಗವಿಕಲರು ಮತ್ತು ಭೀಕರ ರೋಗಕ್ಕೆ ತುತ್ತದವರನ್ನು ಈ ಪಟ್ಟಿಯಲ್ಲಿ ಸೇರಿಸಬೇಕು. ಕೇರಳ ಸರಕಾರ ಈಗಾಗಾಲೇ ಪ್ರತೀ ಎಂಡೋ ಪೀಡಿತ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ಮತ್ತು 30 ಕೆ.ಜಿ ಪೌಷ್ಠಿಕ ಆಹಾರವನ್ನು ಪ್ರತಿ ತಿಂಗಳು ಕೊಡುವುದು ಸಹಿತ ಅವರ ಕಲ್ಯಾಣಕ್ಕೆ ಅನೇಕ ಕ್ರಮ ಕೈಗೊಂಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುಳ್ಯ ಶಾಶಕ ಎಸ್. ಅಂಗಾರ ಮಾತನಾಡಿ, ಅಂಗವಿಕಲ ಮಕ್ಕಳನ್ನು ಸಾಕಲಾಗದೆ ಸಂತ್ರಸ್ಥ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳಲು ಆರಂಭಿಸಿದೆ. ಸರ್ಕಾರ ಇವರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನಾಯಕ ಸಿ.ಟಿ.ರವಿ ಮಾತನಾಡಿ, ಎಂಡೋಸಲ್ಫಾನ್ ಅನ್ನು ಕೇಂದ್ರ ಸರಕಾರ ನಿಷೇಧಿಸಿದ ಬಳಿಕ ಕೇರಳ ಸರಕಾರ ಕರ್ನಾಟಕದ ಗಡಿಯಲ್ಲಿ ಬಾವಿ ತೊಡಿ 10 ಟನ್ ಎಂಡೋಸಲ್ಫಾನ್‌ನ್ನು ಸುರಿದಿದೆ. ಇದು ಅಂತರ್ಜಲಕ್ಕೆ ಸೇರಿ ದುಷ್ಪರಿಣಾಮ ಬೀರುವ ಮುನ್ನವೇ ಈ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.