ಪೌಷ್ಠಿಕಾಂಶವಿರುವ ಸಿರಿ ಧಾನ್ಯಗಳ ಬಳಕೆ ಹೆಚ್ಚಬೇಕು : ಹೇಮಾವತಿ ಹೆಗ್ಗಡೆ

Siri dhanyaಬೆಳ್ತಂಗಡಿ: ನಮ್ಮ ದೇಶದ ಜನರಲ್ಲಿ ಉಡುಗೆ, ಆಹಾರ ಪದ್ಧತಿಯಲ್ಲಿ ಅನೇಕ ಹೊಸತನ ಬಂದರೂ ನಾವು ಹಳೆಯ ಪರಂಪರೆಯನ್ನು ಮರೆಯುವುದಿಲ್ಲ, ಅದರಂತೆ ನಮ್ಮ ತಿಂಡಿ, ತಿನಸು, ಆಹಾರ ಪದ್ಧತಿಯಲ್ಲಿ ಅನೇಕ ಆಧುನಿಕತೆ ಬಂದು, ಸಿರಿಧಾನ್ಯವನ್ನು ಮರೆತರೂ ಮತ್ತೆ ಅದನ್ನು ತರುವ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತರ್ಹವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಹೇಳಿದರು.
ಅವರು ಮೇ 27ರಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಹಾಗೂ ಶ್ರೀ ಕ್ಷೇ. ಧ.ಗ್ರಾ. ಯೋಜನೆ ಕೃಷಿ ವಿಭಾಗ ಮತ್ತು ಆರ್ಯಾಸ್ ಸ್ಲೋ ಫುಡ್ಸ್ ಭದ್ರಾವತಿ ಇವರ ಆಶ್ರಯಲದಲ್ಲಿ ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ನಡೆದ ಸಿರಿ ಧಾನ್ಯಗಳ ಬಳಕೆ ಹಾಗೂ ಆರೋಗ್ಯ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಇರುವಷ್ಟು ಆಹಾರ ಪದ್ಧತಿ ಬೇರೆ ಯಾವುದೇ ದೇಶದಲ್ಲಿ ಇಲ್ಲ, ರುಚಿ ಮತ್ತು ಪೌಷ್ಠಿಕತೆಗೆ ನಾವು ಹೆಚ್ಚಿನ ಮಹತ್ವ ಕೊಡುತ್ತೇವೆ. ಉತ್ತಮ ಖನಿಜಾಂಶ ಹಾಗೂ ನಮ್ಮ ದೇಹದ ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳನ್ನು ಹೊಂದಿರುವ ವಿನಾಶದಂಚಿನಲ್ಲಿರುವ ಸಿರಿ ಧಾನ್ಯವನ್ನು ಮೌನ ಕ್ರಾಂತಿಯ ಮೂಲಕ ಸಂಘ-ಸಂಸ್ಥೆಗಳು ಮತ್ತೆ ಬಳಕೆಗೆ ತರುತ್ತಿವೆ. ಇಂದಿನ ಫಾಸ್ಟ್ ಪುಡ್ ಯುಗದಲ್ಲಿ ನಾವು ವಿದೇಶಿ ಆಹಾರ ಪದ್ಧತಿಗೆ ಮಾರು ಹೋಗಿದ್ದೇವೆ. ಆದರೆ ಸಿರಿ ಧಾನ್ಯದಿಂದಲೂ ತ್ವರಿತವಾಗಿ ಆಹಾರವನ್ನು ತಯಾರಿಸಬಹುದು ಇದು ನಮ್ಮ ದೇಹಕ್ಕೂ ಒಳ್ಳೆಯದು ಎಂಬ ಉದ್ದೇಶದಿಂದ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ನಿರ್ದೇಶಕ ಮನೋಜ್ ಮಿನೇಜಸ್ ಮಾತನಾಡಿ ಪ್ರಸ್ತುತ ಸಾಲಿನಲ್ಲಿ ಇಪ್ಪತ್ತು ಸಾವಿರ ರೈತರಿಂದ ಸುಮಾರು ಎಂಭತ್ತು ಸಾವಿರ ಎಕ್ರೆಯಲ್ಲಿ ವಿವಿಧ ಸಿರಿ ಧಾನ್ಯಗಳನ್ನು ಬೆಳೆಯುವ ಹಾಗೂ ಅವುಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಆರ್ಯಾಸ್ ಸ್ಲೋ ಫುಡ್ಸ್ ಭದ್ರಾವತಿಯ ಈಶ್ವರನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಿರಿ ಧಾನ್ಯಗಳ ಬಳಕೆ ಮತ್ತು ತಯಾರಿ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಸಿರಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಸುರೇಶ್ ಸಾಲ್ಯಾನ್ ಇವರ ಪ್ರಾರ್ಥನೆ ಬಳಿಕ ನಿರ್ದೇಶಕಿ ಮನೋರಮಾ ಭಟ್ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ ಕಾಲ ಸಿರಿ ಧಾನ್ಯಗಳ ಮಾಹಿತಿ, ಆಹಾರ ತಯಾರಿ ಪ್ರಾತ್ಯಕ್ಷಿಕೆ, ಪ್ರದರ್ಶನ ಮಾರಾಟ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.