HomePage_Banner_
HomePage_Banner_

ಮೇ 27 : ಕೊಕ್ಕಡದಲ್ಲಿ ಎಂಡೋ ಸಂತ್ರಸ್ಥರ ಪ್ರತಿಭಟನಾ ಸಭೆ – ಆಮರಣಾಂತ ಉಪವಾಸ

yendo vhithraಕೊಕ್ಕಡ : ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿ ಮೇ 27 ರಂದು ಕೊಕ್ಕಡದ ಜೋಡುಮಾರ್ಗ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನಾ ಸಭೆ ಮತ್ತು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆಂಗುಡೇಲು ಬೆಂಗಳೂರು ಮತ್ತು ಮಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರ ಪೂರ್ವಭಾವಿ ಸಭೆಯು ಕೊಕ್ಕಡದ ಅಂಬೇಡ್ಕರ್ ಭವನದಲ್ಲಿ ಮೇ 24 ರಂದು ನಡೆಯಿತು. ಶ್ರೀಧರ ಗೌಡ ಕೆಂಗುಡೇಲು ಅಧ್ಯಕ್ಷತೆ ವಹಿಸಿ
ಮಾತನಾಡಿ,
ಮೇ.27 ರಂದು ಬೆಳಗ್ಗಿನಿಂದಲೇ ಕೊಕ್ಕಡ ಜೋಡುಮಾರ್ಗದಲ್ಲಿ ಬೃಹತ್ ಪ್ರತಿಭಟನೆಯನ್ನು ಆರಂಭಿಸಲಿದ್ದು ನಮ್ಮ ರಾಜ್ಯದ ಎಂಡೋ ಸಂತ್ರಸ್ಥರಿಗೆ ಯಾವುದೇ ರೀತಿಯ ನ್ಯಾಯ ಈವರೆಗೂ
ದೊರಕದಿರುವ ಬಗ್ಗೆ ಸರಕಾರದ ಗಮನ ಸೆಳೆಯುವುದು ನಮ್ಮ ಮೂಲ ಉದ್ದೇಶವಾಗಿದೆ. ರಾಜಧಾನಿಯ ಫ್ರೀಡಂ ಪಾರ್ಕಿಗೆ ಎಂಡೋ ಸಂತ್ರಸ್ಥರನ್ನು ಕರೆದೊಯ್ದು ನಮ್ಮ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಿದ್ದರೂ ಪ್ರಸ್ತುತ ಬಜೆಟ್ ನಲ್ಲಿ ಎಂಡೋ ಸಮಸ್ಯೆ ನಿವಾರಣೆ ಬಗ್ಗೆ ಕಿಂಚಿತ್ ಅನುದಾನ ನೀಡದೇ ಇರುವುದು ಇಂದು ಮತ್ತೊಮ್ಮೆ ಎಂಡೋ ಸಂತ್ರಸ್ಥರು ಬೀದಿಗಿಳಿದು ಹೋರಾಟ ನಡೆಸುವ ಹಂತಕ್ಕೆ ತಲುಪಲು ಮುಖ್ಯ ಕಾರಣವಾಗಿರುತ್ತದೆ ಎಂದರು. ರಾಜ್ಯದ ಜನತೆ ಎಂಡೋ ಸಂತ್ರಸ್ಥರ ಜತೆಗಿದ್ದಾರೆ. ಈ ಸಂದರ್ಭ ಸಂತ್ರಸ್ಥರು ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ನಮ್ಮನ್ನಾಳುವ ಜನಪ್ರತಿನಿಧಿಗಳು ನಮ್ಮ ಕಟ್ಟಕಡೆಯ ಈ ನಿರ್ಣಾಯಕ ಹೋರಾಟಕ್ಕೆ ಬೆಲೆ ತೆತ್ತು ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ಮನವಿಯನ್ನು ಪುರಸ್ಕರಿಸುತ್ತಾರೆ ಅನ್ನುವ ಭರವಸೆಯನ್ನು ಎಂಡೋ ಸಂತ್ರಸ್ಥರು ಹೊಂದಿದ್ದಾರೆ ಎಂದು ನುಡಿದರು.
ಹೈಕೋರ್ಟ್ ನ್ಯಾಯವಾದಿ ಹರೀಶ ಪೂಂಜ ಮಾತನಾಡಿ, ಈಗಾಗಲೇ ಜಿಲ್ಲೆಯ 45 ಕಡೆಗಳಲ್ಲಿ ಹಲವಾರು ಸಂಘ ಸಂಸ್ಥೆಗಳ ಮುಖಂಡರುಗಳ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗಿದ್ದು ರಾಜ್ಯದ ಎಲ್ಲಾ ಕಡೆಗಳ ನೂರಾರು ಸಂಘ ಸಂಸ್ಥೆಗಳಿಂದ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ತುಳು ಮತ್ತು ಕನ್ನಡ ಚಿತ್ರ ರಂಗದ ಕಲಾವಿದರುಗಳು ಮತ್ತು ನಿರ್ಮಾಪಕರುಗಳು, ಎಲ್ಲಾ ಧಾರ್ಮಿಕ ಮುಖಂಡರುಗಳು, ದ.ಕ., ಉಡುಪಿ ಜಿಲ್ಲಾ ಅಂಗವಿಕಲರ ಸಂಘ, ಮಂಗಳೂರು ಅಂಗವಿಕಲರ ಫೆಡರೇಷನ್, ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಬೆಂಗಳೂರು, ನವಚೇತನ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು, ಬಿಜೆಪಿ ಮಂಡಲ, ಜಮಾಅತೆ ಇಸ್ಲಾಮಿ ಹಿಂದ್, ಕುಲಾಲ-ಕುಂಬಾರರ ಸಂಘ ಮುಂತಾದ ನೂರಾರು ಸಂಘ ಸಂಸ್ಥೆಗಳು ಈ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿರುತ್ತಾರೆ ಎಂದರು.
ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಸದಸ್ಯರಾದ ರೇವತಿ ತಾಮಣಕರ್, ಎಂಡೋ ಪಾಲನಾ ಕೇಂದ್ರದ ಸಂಯೋಜಕ ಶಿವರಾಮ ಭಟ್ ಹಿತ್ತಿಲು, ಪಿ.ಕೆ. ನಾರಾಯಣ ಗೌಡ, ಕೊಕ್ಕಡ ಎಂಡೋ ಹೋರಾಟ ಸಮಿತಿಯ ಕುಶಾಲಪ್ಪ ಗೌಡ ಪೂವಾಜೆ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ಧರ್ಮಸ್ಥಳ ವೀರ ಕೇಸರಿ ಸಂಘಟನೆ ಯ ಪವನ್ ಕುಮಾರ್, ಕೊಕ್ಕಡ ಗ್ರಾ.ಪಂ. ಸದಸ್ಯರಾದ ಶೀನ ನಾಯ್ಕ್, ಭಾಗೀರಥಿ, ಎಂಡೋ ಸಂತ್ರಸ್ಥರ ಸಂಘಟನೆಯ ಪೋಷಕರಾದ ಆಲ್ಬರ್ಟ್ ಮಿನೇಜಸ್ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನಾ ಪೂರ್ವ ತಯಾರಿ ; ಮೇ 27 ರಂದು ಬೆಳಗ್ಗೆ ಜೋಡುಮಾರ್ಗ ಜಂಕ್ಷನ್ ನಲ್ಲಿ ಆರಂಭಿಸುವ ಎಂಡೋ ಪ್ರತಿಭಟನಾ ಸಭೆಗೆ 10 ಸಾವಿರ ಜನರ ನಿರೀಕ್ಷೆಯನ್ನು ಹೊಂದಲಾಗಿದೆ. ಎಂಡೋ ಸಂತ್ರಸ್ತರೇ ಸ್ವತಃ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ 4 ಆಂಬುಲೆನ್ಸ್ ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗುತ್ತದೆ. 5 ಜನ ವೈದ್ಯರುಗಳ ತಂಡ ಪ್ರತಿಭಟನಾ ಸ್ಥಳದಲ್ಲಿ ತುರ್ತು ಚಿಕಿತ್ಸೆಗೆ ಲಭ್ಯವಿರುತ್ತಾರೆ. ಮಧ್ಯಾಹ್ನ ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮಲಗಿದಲ್ಲೇ ಇರುವ ಸಂತ್ರಸ್ಥರಿಗೆ ಕುಡಿಯುವ ನೀರು ಮತ್ತು ಪ್ಯಾಂಪರ್‍ಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮೇ.28 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ :
ಮೇ.27 ರಂದು ನಡೆಯುವ ಈ ಹೋರಾಟ ಸ್ಥಳಕ್ಕೆ ಮುಖ್ಯಮಂತ್ರಿಗಳು ಆಗಮಿಸಿ ನಮ್ಮ ಮನವಿ ಸ್ವೀಕರಿಸಿ ಸೂಕ್ತವಾಗಿ ಸ್ಪಂದನೆ ನೀಡದೇ ಇದ್ದಲ್ಲಿ ಮೇ.28 ರಿಂದ ಈ ಹೋರಾಟ ಆಮರಣಾಂತ ಉಪವಾಸ ಸತ್ಯಾಗ್ರಹವಾಗಿ ಪರಿವರ್ತನೆಯಾಗಲಿದೆ ಎಂದು ಶ್ರೀಧರ ಗೌಡ ಕೆಂಗುಡೇಲು, ಪುರಂದರ ಕಡೀರ ಎಚ್ಚರಿಕೆ ನೀಡಿದ್ದಾರೆ. ಇದು ನಿರ್ಣಾಯಕ ಹೋರಾಟವಾಗಿದ್ದು ಇದರ ಕೊನೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯೂ ಇದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.