ಶಿಶಿಲ-ಭೈರಾಪುರ ರಸ್ತೆ ನಿರ್ಮಾಣಕ್ಕೆ ಚಾಲನೆ ಸರ್ವೇ ಕಾರ್ಯಕ್ಕೆ ರೂ.16 ಲಕ್ಷ ಮಂಜೂರು

 

 • ಚಾರ್ಮಾಡಿ, ಶಿರಾಡಿ ಘಾಟಿಗೆ ಪರ್ಯಾಯ ರಸ್ತೆ
 • ಸರ್ವೇ ಕಾರ್ಯಕ್ಕೆ ರೂ.16ಲಕ್ಷ ಮಂಜೂರು
 • ಮೂಡಿಗೆರೆ, ನಾಯಿಹಳ್ಳ, ಪೇರಿಕೆ ಮೂಲಕ ಶಿಶಿಲಕ್ಕೆ
 • ನಾಯಿಹಳ್ಳಕ್ಕೆ 120 ಮೀಟರ್ ಉದ್ದದ ಸೇತುವೆ
 • ಅಂತರ್‌ಜಿಲ್ಲಾ ಸುಮಾರು 22 ಕಿ.ಮೀ ಲಿಂಕ್ ರಸ್ತೆ
 • ಹೇರಿಕೆ-ಶಿಶಿಲ ಸುಮಾರು 18.50 ಕಿ.ಮೀ ಕಚ್ಚಾ ರಸ್ತೆ
 • ಹೆಚ್ಚಿನ ಮರಗಳಿಲ್ಲ, ಹಿಮ್ಮುರಿ ತಿರುವುಗಳಿಲ್ಲ                                                                                                   ಬೆಳ್ತಂಗಡಿ : ಮಂಗಳೂರು-ಬೆಂಗಳೂರು ನಡುವಿನ ಸಂಪರ್ಕ ರಸ್ತೆಯಾಗಿರುವ ಶಿರಾಡಿ ಮತ್ತು ಚಾರ್ಮಾಡಿ ಘಾಟಿಗೆ ಪರ್ಯಾಯ ವಾಗಿ ನಿರ್ಮಾಣ ವಾಗಲಿರುವ ಶಿಶಿಲ-ಬೈರಾಪುರ ನೂತನ ಘಾಟ್ ರಸ್ತೆ ರಚನೆಗೆ ಚಾಲನೆ ದೊರಕಿದ್ದು, ಪ್ರಥಮ ಹಂತವಾಗಿ ಇದರ ಸರ್ವೆ ಕಾರ್ಯಕ್ಕೆ ಸರಕಾರ ರೂ.16 ಲಕ್ಷ ಅನುದಾನ ಮಂಜೂರುಗೊಳಿಸಿದೆ.
  ಮೂಡಿಗೆರೆ-ಬೈರಾಪುರ ಉಳಿಯಮನೆ ಎಸ್ಟೇಟ್-ನಾಯಿಹಳ್ಳ ಪೇರಿಕೆ ಮೂಲಕ ಶಿಶಿಲ ತಲುಪುವ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದ್ದು, ಎಲ್ಲಾ ದೃಷ್ಟಿಯಿಂದಲೂ ಈ ರಸ್ತೆ ನಿರ್ಮಾಣವಾದರೆ ಸಂಚಾರಕ್ಕೆ ಉತ್ತಮವಾಗಲಿದೆ ಎಂಬ ವರದಿಗಳ ಆಧಾರದ ಮೇಲೆ ಇದೀಗ ಸರಕಾರ ರಸ್ತೆ ನಿರ್ಮಾಣಕ್ಕೆ ಮುಂದಾಗಿ ಇದಕ್ಕೆ ಬೇಕಾದ ಎಲ್ಲಾ ಪೂರಕ ತಯಾರಿ ಬಗ್ಗೆ ಯೋಜನೆ ರೂಪಿಸಲು ಅನುದಾನ ಮಂಜೂರು ಗೊಳಿಸಿ ತಯಾರಿ ನಡೆಸಿದೆ.
  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಭೈರಾಪುರ ಹಾಗೂ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕು ಶಿಶಿಲ ಸಂಪರ್ಕಿಸುವ ಅಂತರ ಜಿಲ್ಲಾ ರಸ್ತೆ ಅಭಿವೃದ್ಧಿ ಪಡಿಸಲು ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಬೆಂಗಳೂರು ಇವರ ಆದೇಶದಂತೆ ಶಿಶಿಲ-ಭೈರಾಪುರ ಲಿಂಕ್ ರಸ್ತೆ ಅಭಿವೃದ್ಧಿ ಪಡಿಸಲು ಡಿ.ಪಿ.ಆರ್. ತಯಾರಿಕೆಗಾಗಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಸನ ವೃತ್ತ ಇವರಿಗೆ ರಸ್ತೆಯ ಪರಿವೀಕ್ಷಣೆ ನಡೆಸಿ ವರದಿ ನೀಡುವಂತೆ 2016 ಡಿಸೆಂಬರ್‌ನಲ್ಲಿ ಆದೇಶಿಸಿತ್ತು.
  ಅದರಂತೆ ಪಿ.ಎಂ.ಜೆ.ಎಸ್.ವೈ ಯೋಜನಾ ವಿಭಾಗ ಚಿಕ್ಕಮಗಳೂರಿನ ತಾಂತ್ರಿಕ ಸಹಾಯಕರು, ಲೋಕೋಪ ಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮೂಡಿಗೆರೆ ಉಪವಿಭಾಗದ ಸಹಾಯಕ ಇಂಜಿನಿಯರ್, ಬೆಳ್ತಂಗಡಿ ಲೋಕೋಪ ಯೋಗಿ ಇಲಾಖೆಯ ಇಂಜಿನಿಯರ್ ಇವರು ಸ್ಥಳೀಯರಾದ ಜಿ.ಹೆಚ್. ಹಾಲಪ್ಪ ಗೌಡ ಮಾಜಿ ಅಧ್ಯಕ್ಷರು ಗೃಹ ಮಂಡಳಿ, ಪದ್ಮನಾಭ್ ಸದಸ್ಯರು ಗ್ರಾ.ಪಂ. ಶಿಶಿಲ, ಸುಮಿತ್ರೇ ಗೌಡ ಕಾರ್ಯದರ್ಶಿಗಳು ಶ್ರೀ ನಾಣ್ಯದ ಭೈರವೇಶ್ವರ
  ದೇವಸ್ಥಾನ, ದಯಾಸಾಗರ್ ಅಚ್ಚನಹಳ್ಳಿ ಎಸ್ಟೇಟ್, ಬಿ.ಕೆ. ಲಕ್ಷ್ಮಣ್ ಕುಮಾರ್ ಸಮಾಜ ಸೇವಕರು ಮೂಡಿಗೆರೆ ಹಾಗೂ ಭೈರಾಪುರ ಮತ್ತು ಶಿಶಿಲ ಗ್ರಾಮಸ್ಥರ ಉಪಸ್ಥಿತಿಯಲ್ಲಿ 2016 ಡಿ.26ರಂದು ಪ್ರಸ್ತಾವಿತ ರಸ್ತೆ ಹಾದು ಹೋಗುವ ಜಾಗದ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು.
  ಈ ವರದಿಯಲ್ಲಿ ಗೌಡಳ್ಳಿ ಹೊಸಕೆರೆ ಜಿಲ್ಲಾ ಮುಖ್ಯ ರಸ್ತೆಯಿಂದ ಶ್ರೀ ನಾಣ್ಯದ ಭೈರವೇಶ್ವರ ಸ್ವಾಮಿ ದೇವಸ್ಥಾನದ ಮೂಲಕ ಶಿಶಿಲದ ಶಿಶಿಲೇಶ್ವರ ದೇವಸ್ಥಾನದ ಬದಿಯಿಂದ ಕೊಕ್ಕಡ ಜಿಲ್ಲಾ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಶಿಶಿಲ-ಭೈರಾಪುರ ಲಿಂಕ್ ರಸ್ತೆ ಕಚ್ಚಾ ಗ್ರಾಮೀಣ ರಸ್ತೆಯಾಗಿದ್ದು, ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಅಲ್ಲಲ್ಲಿ ಹಾದು ಹೋಗಿದೆ. ಶಿಶಿಲ ಹತ್ತಿರ ಕಪಿಲಾ ನದಿಗೆ ಅಡ್ಡವಾಗಿ ನಿರ್ಮಿಸಿರುವ ಬೃಹತ್ ಸೇತುವೆ ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಸೇತುವೆಗಳು ಹಾಲಿ ಇದೆ ಎಂದು ತಿಳಿಸಲಾಗಿದೆ.
  ಹಾಲಿ ಪ್ರಸ್ತಾವಿತ ರಸ್ತೆಯಲ್ಲಿ ಯಾವುದೇ ಹೆಚ್ಚಿನ ಹಿಮ್ಮರಿ ತಿರುವುಗಳಿಲ್ಲ, ಮರಗಳಿಲ್ಲ, ಮೂಡಿಗೆರೆ ಬಾರ್ಡರ್ ಮತ್ತು ಬೆಳ್ತಂಗಡಿ ಬಾರ್ಡರ್‌ನಲ್ಲಿರುವ ನಾಯಿಹಳ್ಳಕ್ಕೆ ಸುಮಾರು 120 ಮೀಟರ್ ಉದ್ದ ಒಂದು ಸೇತುವೆ ನಿರ್ಮಿಸಿ ಈ ಅಂತರ್‌ಜಿಲ್ಲಾ ಸುಮಾರು 22ಕಿ.ಮೀ ಲಿಂಕ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮಿತವ್ಯಯ ಅಂದಾಜು ತಯಾರಿಸಿ ಸಲ್ಲಿಸಬಹುದಾಗಿದೆ. ವಾಸ್ತವವಾಗಿ ಹೇರಿಕೆ ಕ್ರಾಸ್‌ನಿಂದ ಶಿಶಿಲದವರೆಗೂ ಸುಮಾರು 18.50 ಕಿ.ಮೀ ಕಾಲು ದಾರಿಯನ್ನು ಕಚ್ಚಾ ರಸ್ತೆಯನ್ನಾಗಿ ಈ ಹಿಂದೆ ಮಾಡಲಾಗಿರುತ್ತದೆ ಎಂದು ವಿವರಿಸಲಾಗಿದೆ.
  ಈ ಹಾಲಿ ಕಚ್ಚಾ ರಸ್ತೆಯನ್ನು ಗುರುತಿಸಿ, ನಕ್ಷೆಯನ್ನು ತಾಂತ್ರಿಕ ಸಹಾಯಕರು ಯೋಜನಾ ವಿಭಾಗ ಚಿಕ್ಕಮಗಳೂರು ಇವರು ಭೈರಾಪುರ ಹಾಗೂ ಶಿಶಿಲ ಗ್ರಾಮಸ್ಥರ ನೆರವಿನೊಂದಿಗೆ ತಯಾರಿಸಿ ನೀಡಿದ್ದು, ಜಿ.ಹೆಚ್. ಹಾಲಪ್ಪ ಗೌಡರು ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ಸದರಿ ಕಚ್ಚಾ ರಸ್ತೆಯನ್ನು ತಮ್ಮ ಹಿಟಾಚಿ ಮತ್ತು ಜೆಸಿಬಿ ಯಂತ್ರಗಳನ್ನು ಬಳಸಿ ಸ್ವಂತ ಖರ್ಚಿನಿಂದ ಸಾರ್ವಜನಿಕರಿಗೆ ಲಘುವಾಹನಗಳ ಮುಖಾಂತರ ಸಾಗಲು ಅನುವು ಮಾಡಿಕೊಟ್ಟಿರುತ್ತಾರೆ. ಖಾಸಗಿ ಜಮೀನು ಮಾಲಕರಾದ ಸ್ವಾಮಿ ಶಾಕೋಡೆಯವರು ಯಾವುದೇ ಹೊರೆ ಇಲ್ಲದೆ ಜಮೀನು ಬಿಟ್ಟುಕೊಡುವ ಬಗ್ಗೆ ಅವರ ಮನವೊಲಿಸುವುದಾಗಿ ಹಾಲಪ್ಪ ಗೌಡರು ತಿಳಿಸಿರುತ್ತಾರೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.
  ಮೂಡಿಗೆರೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಹಾಲಿ ಕಚ್ಚಾ ರಸ್ತೆ ಮತ್ತು ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಹಾಲಿ ಕಚ್ಚಾ ರಸ್ತೆಯಲ್ಲಿ ಈ ಹಿಂದೆ ಇಲಾಖೆಯ ಅನುಮತಿ ಪಡೆದು ಮರಗಳನ್ನು ಕಡಿದಿರುವುದರಿಂದ ಈಗ ಯಾವುದೇ ಹೆಚ್ಚಿನ ಮರ ಕಡಿದು ಪರಿಸರಕ್ಕೆ ಹಾನಿ ಮಾಡುವ ಪ್ರಸಂಗ ಉದ್ಭವಿಸುವುದಿಲ್ಲ ಹಾಗೂ ಹೆಚ್ಚಿನ ಹಿಮ್ಮರಿ ತಿರುವುಗಳಿಲ್ಲದಿರುವ ಪ್ರಯುಕ್ತ ಸುಗಮ ವಾಹನ ಸಂಚಾರಕ್ಕೆ ಉತ್ತಮ ರಸ್ತೆಯನ್ನಾಗಿ ನಿರ್ಮಿಸಬಹುದಾಗಿದೆ ಎಂದು ವರದಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
  ಹೊಸ ರಸ್ತೆಯ ಡಿಆರ್‌ಡಿಪಿ ಸಿದ್ಧ: ಸರಕಾರಕ್ಕೆ ಸಲ್ಲಿಕೆಯಾದ ವರದಿಯ ಹಿನ್ನಲೆಯಲ್ಲಿ ಇದೀಗ ಮೂಡಿಗೆರೆ-ಬೈರಾಪುರ-ನಾಯಿಹಳ್ಳ -ಪೇರಿಕೆ ಮೂಲಕ ಶಿಶಿಲಕ್ಕೆ ತಲುಪುವ ರಸ್ತೆಯನ್ನು ರಾಜ್ಯ ಸರಕಾರ ಈಗಾಗಲೇ ಅಂತಿಮಗೊಳಿಸಿ, ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿದೆ. ಇದರ ಸರ್ವೆ ಕಾರ್ಯನಡೆಯ ಬೇಕಾಗಿರುವುದರಿಂದ ಈಗ ಅನುದಾನ ಮಂಜೂರುಗೊಳಿಸಿ, ಸರ್ವೆ ಕಾರ್ಯ ಮುಗಿದ ಬಳಿಕ ರಸ್ತೆ ನಿರ್ಮಾಣಕ್ಕೆ ಎಷ್ಟು ವೆಚ್ಚ ಬೇಕಾಗಬಹುದು ಎಂಬುದಕ್ಕೆ ಕ್ರಿಯಾ ಯೋಜನೆ ತಯಾರಾಗಲಿದೆ.
  32 ಕಿ.ಮೀ ದೂರ ಕಡಿತ: ಮೂಡಿಗೆರೆ-ಬೈರಾಪುರ-ನಾಯಿಹಳ್ಳ -ಪೇರಿಕೆ ಮೂಲಕ ಶಿಶಿಲ ತಲುಪುವ ರಸ್ತೆ ಕಾಮಗಾರಿ ಪೂರ್ಣಗೊಂಡಾಗ ಹಾಸನದಿಂದ ಶಿಶಿಲಕ್ಕೆ ಸುಮಾರು 54ಕಿ.ಮೀ ದೂರ ಕಡಿಮೆಯಾಗಲಿದೆ. ಸದ್ಯ ಹಾಸನದಿಂದ ಶಿಶಿಲಕ್ಕೆ ತೆರಳಬೇಕಾದರೆ ಶಿರಾಡಿ ಘಾಟ್ (143ಕಿ.ಮೀ) ಅಥವಾ ಚಾರ್ಮಾಡಿ ಘಾಟ್ (139ಕಿ.ಮೀ) ಮೂಲಕ ಬರಬೇಕು. ಆದರೆ ನಿಯೋಜಿತ ರಸ್ತೆಯಲ್ಲ್ಲಿ ಹಾಸನದಿಂದ ಶಿಶಿಲಕ್ಕೆ 110 ಕಿ.ಮೀ ಅಂತರದಲ್ಲಿ ತಲುಪಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.