ರಾಜ್ಯ ಸರಕಾರದಿಂದ ಬಡಜನರಿಗೆ ವಿದ್ಯುತ್ ಶಾಕ್ ಸೋರಿಕೆ ತಡೆಗಟ್ಟಲು ವೈಜ್ಞಾನಿಕ ಚಿಂತನೆ ನಡೆಯಲಿ

Jagadeesh shetter copyಪ್ರಕೃತಿ ಚಿಕಿತ್ಸೆಯಿಂದ  ದೀರ್ಘಾವಧಿ ಆರೋಗ್ಯ

ಅಲೋಪತಿ ಜೌಷಧಿ ರೋಗಕ್ಕೆ ತಕ್ಷಣದ ಪರಿಹಾರ ಮಾತ್ರ ದೀರ್ಘಾವಧಿಗಲ್ಲ, ಆದರೆ ಪ್ರಕೃತಿ ಚಿಕಿತ್ಸಾ ಪದ್ಧತಿಯಿಂದ ದೀರ್ಘವಾದ ಆರೋಗ್ಯವನ್ನು ಪಡೆಯಬಹುದು. ತಾನು ನಾಲ್ಕೈದು ವರ್ಷಗಳ ಹಿಂದೆ ಇಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪಡೆದು ನಿತ್ಯವೂ ಯೋಗಾಭ್ಯಾಸ ಮಾಡುತ್ತಿದ್ದು ಪ್ರಕೃತಿ ಚಿಕಿತ್ಸಾ ವಿಧಾನದಿಂದ ತನ್ನ ಆರೋಗ್ಯ ಸುಧಾರಿಸಿದೆ ಹೊಸ ಚೈತನ್ಯ ಬಂದಿದೆ. ನನಗೆ ಈಗ 62 ವರ್ಷ ಈ ಚಿಕಿತ್ಸಾ ಪದ್ಧತಿ ಅನುಸರಿಸಿರುವುದರಿಂದ ಈಗಲೂ ನನಗೆ ಬಿ.ಪಿ. ಸುಗರ್ ಇಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಕಳೆದ ಒಂದು ವಾರದಿಂದ ಧರ್ಮಸ್ಥಳದಲ್ಲಿರುವ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇಲ್ಲಿನ ಪ್ರಶಾಂತ ಪರಿಸರ ಹಾಗೂ ಚಿಕಿತ್ಸಾ ವಿಧಾನ ಉತ್ತಮವಾಗಿದೆ. ಪ್ರಧಾನಿ ಮೋದಿಯವರು ಜೂ.21ರಂದು ವಿಶ್ವ ಯೋಗಾ ದಿನಾಚರಣೆ ಘೋಷಿಸಿದರು. ವಿಶ್ವದ ನೂರಾರು ದೇಶಗಳಲ್ಲಿ ಆ ದಿನ ಯೋಗಾಚರಣೆ ನಡೆಯುತ್ತದೆ. ಆದರೆ ಡಾ. ಹೆಗ್ಗಡಯವರು ಮುಂದಾಲೋಚನೆಯಿಂದ 1987ರಲ್ಲಿ ಈ ಕೇಂದ್ರವನ್ನು ಆರಂಭಿಸಿದ್ದಾರೆ. ಇಂದು ಯೋಗ ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಲು ಹೆಗ್ಗಡೆಯವರೂ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳ: ರಾಜ್ಯದಲ್ಲಿ ಕುಡಿಯುವ ನೀರಿಲ್ಲದೆ, ಬರದ ಬೇಗೆಗೆ ನಲುಗಿ ಹೋಗಿರುವ ಜನರಿಗೆ ರಾಜ್ಯ ಸರಕಾರ ಮೂರನೇ ಬಾರಿಗೆ ವಿದ್ಯುತ್ ದರ ಏರಿಸಿ ಶಾಕ್ ನೀಡಿದೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ, ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಅವರು ಎ.12ರಂದು ಧರ್ಮಸ್ಥಳದ ಶಾಂತಿವನದಲ್ಲಿ ನಡೆದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಎರಡನೇ ಬಾರಿ ಯೂನಿಟ್‌ಗೆ ರೂ. 48 ಪೈಸೆಯಂತೆ ದರ ಏರಿಕೆ ಮಾಡಿದ ಸರಕಾರದ ನೀತಿಯನ್ನು ಖಂಡಿಸುವುದಾಗಿ ತಿಳಿಸಿದರು. ದರ ಏರಿಕೆಯಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ದೊಡ್ಡ ಹೊರೆಯಾಗಿದೆ. ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆಯಲ್ಲಿ ಆಗುವ ಸೋರಿಕೆ ತಡೆಗಟ್ಟಿದರೆ
ದರ ಏರಿಸುವ ಅವಶ್ಯಕತೆ ಇಲ್ಲ. ಇದರ ಬಗ್ಗೆ ವೈಜ್ಞಾನಿಕ ಚಿಂತನೆ ಮಾಡಬೇಕು. ಸರಕಾರ ಕೂಡಲೇ ದರ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಸೌರ ವಿದ್ಯುತ್ ಬಳಕೆ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಆಂಧ್ರ, ತಮಿಳುನಾಡು, ತೆಲಂಗಾನ ರಾಜ್ಯಗಳಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ. ಇತರ ರಾಜ್ಯಗಳಂತೆ ಸೌರ ವಿದ್ಯುತ್ ಬಳಕೆ ಮಾಡಿದಲ್ಲಿ ಸ್ವಾವಲಂಬನೆ ಸಾಧಿಸಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಿದರೂ ರಾಜ್ಯ ಸರಕಾರ ಇದನ್ನು ಸದುಪಯೋಗ ಮಾಡುವಲ್ಲಿ
ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಚುನಾವಣೆ ಸಮಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸುವುದಾಗಿ
ಹೇಳಿದ್ದಾರೆ. ಆದರೆ ಇದಾವುದನ್ನೂ ಮಾಡದೇ ನಿರಂತರ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ. ವಿದ್ಯುತ್ ದರ ಕಡಿಮೆ ಇದ್ದರೂ ದರ ಏರಿಕೆ ಮಾಡಿರುವುದು ಸರಕಾರದ ದೊಡ್ಡ ಪ್ರಮಾದ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯ ಮಂತ್ರಿ ಅಧಿಕಾರ ಸ್ವೀಕರಿಸಿದ ತಕ್ಷಣ ರೈತರ ಸಾಲ ಮನ್ನಾ, ಗ್ರಾಮೀಣ ಪ್ರದೇಶದಲ್ಲಿ 18 ತಾಸು, ನಗರ ಪ್ರದೇಶದಲ್ಲಿ 24 ತಾಸು ವಿದ್ಯುತ್ ಕೊಡುವುದಾಗಿ ಘೋಷಿಸಿ ಜಾರಿ ಮಾಡಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿಗಳು 24 ತಾಸು ವಿದ್ಯುತ್ ಕೊಡುವುದಾಗಿ ಘೋಷಿಸಿದ್ದರು. ಆದರೆ ಹಳ್ಳಿ ಪ್ರದೇಶಗಳಲ್ಲಿ 3-4 ತಾಸು ವಿದ್ಯುತ್ ಇಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಇಂಧನ ಸಚಿವ ಶಿವಕುಮಾರ್ ಉತ್ತರ ಪ್ರದೇಶದ ಈ ಮಾದರಿಯನ್ನು ಅನುಸರಿಸಲಿ ಎಂದು ಆಗ್ರಹಿಸಿದರು.
ಮೇವು ಬ್ಯಾಂಕ್ ಹಗರಣ: ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳಲ್ಲಿ ಯಾವುದೇ ಯೋಜನೆ ಮಾಡಿಲ್ಲ, ರೈತರಿಗೆ ಸಹಾಯವನ್ನು ಮಾಡಿಲ್ಲ, ಅಲ್ಲಲ್ಲಿ ಮೇವು ಬ್ಯಾಂಕ್ ತೆರೆಯುವುದಾಗಿ ಹೇಳಿದ್ದರೂ ಎಲ್ಲ ಕಡೆ ತೆರೆದಿಲ್ಲ, ಇದರಲ್ಲಿ ಕೂಡಾ ವ್ಯಾಪಕ ಹಗರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಹಿತಾಸಕ್ತಿ ಬಗ್ಗೆ ಕಾಳಜಿ ಇಲ್ಲ. ರೈತರ ಸಾಲ ಮನ್ನಾ ಮಾಡಿ ಎಂದು ಅಧೀವೇಶನದಲ್ಲಿ ಒತ್ತಾಯಿಸಿದ್ದರೂ ಮಾಡಿಲ್ಲ, ಕೇಂದ್ರ ಸರಕಾರ ಮಾಡಿದರೆ ನಾವು ಮಾಡುತ್ತೇವೆ ಎಂದು ಮುಖ್ಯ ಮಂತ್ರಿಗಳು ನೆಪ ಹೇಳುತ್ತಾರೆ. ಇದು ಸರಿಯಲ್ಲ, ಸರಕಾರ ರೈತರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಭ್ರಷ್ಟರಿಗೆ ರಕ್ಷಣೆ : ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟದ ವಿಷಯದಲ್ಲಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಇಲ್ಲಿಯ ಪೊಲೀಸ್ ಪ್ರಕಾಶ್ ಎಂಬರ ಪತ್ನಿಗೆ ಕಿರುಕುಳ ನೀಡಿದ ವಿಷಯವನ್ನು ಪ್ರಸ್ತಾಪಿಸಿದ ಅವರು ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟರಿಗೆ ರಕ್ಷಣೆ ನೀಡಲಾಗುತ್ತಿದೆ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಜ್ಯ ಒಂದನೇ ಸ್ಥಾನದಲ್ಲಿದೆ ಎಂದು ಆರೋಪಿಸಿದರು.
ಉಪ ಚುನಾವಣೆ: ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳಾದ ಶ್ರೀನಿವಾಸ ಪ್ರಸಾದ್ ಮತ್ತು ನಿರಂಜನ ಕುಮಾರ್ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮತದಾನದ ಪ್ರಮಾಣ ಹೆಚ್ಚಾದಾಗ ಬಿ.ಜೆ.ಪಿ.ಗೆ ಪ್ರಯೋಜನವಾಗುತ್ತದೆ. ತಾನು ಮತದಾನ ಕ್ಷೇತ್ರಕ್ಕೆ ಹೋದಾಗ ಅಲ್ಲಿ ತಮ್ಮ ಪಕ್ಷಕ್ಕೆ ಪೂರಕ ವಾತಾವರಣ ಹಾಗೂ ಜನರ ಬೆಂಬಲ ವ್ಯಕ್ತವಾಗಿತ್ತು ಎಂದರು.
ಎತ್ತಿನಹೊಳೆ ಯೋಜನೆ: ಸ್ಥಳೀಯ ಜನರಿಗೆ ಸಮರ್ಪಕ ಮಾಹಿತಿ ನೀಡದೆ ಸರ್ಕಾರ ತಪ್ಪು ಮಾಡಿದೆ. ಮೊದಲು ಜನರ ವಿಶ್ವಾಸ ಪಡೆಯಬೇಕು. ಯಾವುದೇ ಸಂಶಯಕ್ಕೆ ಎಡೆ ಕೊಡಬಾರದು ಎಂದು ಅವರು ಸ್ಪಷ್ಟ ಪಡಿಸಿದರು. ಈ ಸಂದರ್ಭ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಪ್ರಶಾಂತ ಶೆಟ್ಟಿ, ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.