ಚಾರ್ಮಾಡಿ-ಶಿರಾಡಿ ಘಾಟಿ ಪರ್ಯಾಯ ರಸ್ತೆಗೆ ಸರ್ವೆ ಮೂಡಿಗೆರೆ-ಬೈರಾಪುರ-ನಾಯಿಹಳ್ಳ-ಪೇರಿಕೆ ರಸ್ತೆ ನಿರ್ಮಾಣ

ಬೆಳ್ತಂಗಡಿ : ಚಾರ್ಮಾಡಿ ಮತ್ತು ಶಿರಾಡಿ ಘಾಟಿ ರಸ್ತೆಗಳಿಗೆ ಪರ್ಯಾಯವಾಗಿ ಮೂಡಿಗೆರೆ-ಬೈರಾಪುರ-ನಾಯಿಹಳ್ಳ-ಪೇರಿಕೆ ಮೂಲಕ ಶಿಶಿಲ ತಲುಪುವ ರಸ್ತೆ ನಿರ್ಮಾಣ ಸಂಬಂಧ ಸರ್ವೆ ನಡೆಸಿ ಸಮಗ್ರ ಯೋಜನಾ ವರದಿ(ಡಿಸಿಆರ್) ಸಿದ್ದಪಡಿಸಲು ಸರಕಾರ ಸೂಚಿಸಿದ್ದು, ವರದಿ ಪಡೆದ ಬಳಿಕ ರಸ್ತೆ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಮೇಲ್ಮನೆಯಲ್ಲಿ ಬಿಜೆಪಿಯ ಲೇಹರ್‌ಸಿಂಗ್ ಪ್ರಶ್ನೆಗೆ ಲೋಕೋಪಯೋಗಿ ಸಚಿವರ ಪರವಾಗಿ ಉತ್ತರ ನೀಡಿದ ಸಚಿವ ಬಸವರಾಜ ರಾಯರೆಡ್ಡಿ ಶಿರಾಡಿ ಮತ್ತು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ತೀವ್ರವಾಗಿದ್ದು, ಒತ್ತಡ ಹೆಚ್ಚಾಗಿರುವ ಹಿನ್ನಲೆಯಲ್ಲಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅದರಂತೆ ಚಿಕ್ಕಮಗಳೂರು ಮತ್ತು ಬೆಳ್ತಂಗಡಿ ತಾಲೂಕು ಭಾಗದಲ್ಲಿ ಎರಡು ಪರ್ಯಾಯ ರಸ್ತೆ ಮಾರ್ಗಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಮೂಡಿಗೆರೆ-ಬೈರಾಪುರ-ನಾಯಿಹಳ್ಳ-ಪೇರಿಕೆ ಮೂಲಕ ಶಿಶಿಲ ತಲುಪುವ ಮಾರ್ಗ ನಿರ್ಮಾಣ ಸೂಕ್ತವೆಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಿದರು.
ಈ ಮಾರ್ಗದಲ್ಲಿ ಅರಣ್ಯ ಪ್ರದೇಶ ಕಡಿಮೆ ಬರುವುದರಿಂದ ಸೂಕ್ತವೆನಿಸಿದ್ದು, ಸರ್ವೇ ನಡೆಸಿ ಡಿಪಿಆರ್ ಸಲ್ಲಿಸುವಂತೆ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಸದ್ಯ ಪರ್ಯಾಯ ರಸ್ತೆ ನಿರ್ಮಾಣ ಪ್ರಸ್ತಾವ ಪ್ರಾಥಮಿಕ ಹಂತದಲ್ಲಿದ್ದು, ಸರ್ವೆ ಬಳಿಕ ಎಷ್ಟು ಮರ ತೆರವುಗೊಳಿಸ ಬೇಕಾಗಬಹುದು ಎಂಬುದು ಸಹಿತ ಇತರ ವಿವರ ಗೊತ್ತಾಗಲಿದೆ. ಹಾಗಾಗಿ ವರದಿ ಬಳಿಕವಷ್ಟೇ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಶಿರಾಡಿ-ಚಾರ್ಮಾಡಿ ಘಾಟಿಗಳಿಗೆ ಪರ್ಯಾಯವಾಗಿ ಮೂಡಿಗೆರೆ-ಬೈರಾಪುರದ ನಾಣ್ಯ ಬೈರವೇಶ್ವರ ದೇವಸ್ಥಾನದಿಂದ ಹೊಳೆಗುಂಡಿ ಮಾರ್ಗವಾಗಿ ಶಿಶಿಲ ತಲುಪುವ ಮಾರ್ಗ ಗುರುತಿಸಲಾಗಿತ್ತು. ಈ ಮಾರ್ಗದಲ್ಲಿ ಸರ್ವೆ ನಡೆಸಿದ್ದು, ದಟ್ಟ ರಕ್ಷಿತಾರಣ್ಯ ಪ್ರದೇಶದ ಜತೆಗೆ ತೀವ್ರ ತಿರುವುಗಳಿವೆ. ದಟ್ಟಾ ಅರಣ್ಯದ ಜತೆಗೆ ವನ್ಯಜೀವಿ ಸಂಕುಲಕ್ಕೂ ಹಾನಿಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಈ ಮಾರ್ಗವನ್ನು ಪರಿಗಣಿಸಿಲ್ಲ ಅಲ್ಲದೇ ಸರ್ವೆಯೂ ಸ್ಥಗಿತಗೊಂಡಿದೆ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.