ಅರಣ್ಯ-ಕಂದಾಯ ಇಲಾಖೆ ನಡುವೆ ಜಾಗದ ಗೊಂದಲ : ಉದ್ಯಾನವನದಿಂದ ಹೊರಬಂದ ನಾರಾವಿ ನೂಜೋಡಿಯ ೨೫ ಮಲೆಕುಡಿಯ ಕುಟುಂಬಗಳಿಗೆ ದೊರೆಯದ ಹಕ್ಕುಪತ್ರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

4 copy

ನಾರಾವಿ: ಕಂದಾಯ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ವೇಣೂರು ಹೋಬಳಿ ಮಟ್ಟದ ಜನಸಂಪರ್ಕ ಸಭೆಯು ನಾರಾವಿ ಗ್ರಾಮ ಪಂಚಾಯತದ ಅಧ್ಯಕ್ಷ ರವೀಂದ್ರ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಎ.೧ರಂದು ನಾರಾವಿ ಶ್ರೀ ಗೋಪಾಲಕೃಷ್ಣ ಸಭಾ ಭವನ ಕಾಶಿಮಠ ನಾರಾವಿಯಲ್ಲಿ ನಡೆಯಿತು.
ಸಭೆಯಲ್ಲಿ ವೇಣೂರು ಹೋಬಳಿ ವ್ಯಾಪ್ತಿಯ ಗ್ರಾಮಗಳ ೯೪ಸಿಯ ಹಕ್ಕುಪತ್ರ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್‌ನ್ನು ವಿತರಿಸಿ ಮಾತನಾಡಿದ ಶಾಸಕ ಕೆ.ವಸಂತ ಬಂಗೇರ ಅವರು ಬಿಪಿಎಲ್ ಪಡಿತರ ಚೀಟಿದಾರರಿಗೆ ಎ.೧ರಿಂದ ವಿತರಿಸಲಾಗುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ೫ರಿಂದ ೭ ಕೆ.ಜಿಗೆ ಹೆಚ್ಚಿಸಲಾಗಿದೆ. ಜೊತೆಗೆ ೧ ಕೆ.ಜಿ ತೊಗರಿ ಬೇಳೆ ನೀಡಲಾಗುತ್ತದೆ. ರಾಜ್ಯದಲ್ಲಿ ಇರುವ ಬಡವರು ಹಸಿವಿನಿಂದ ಸಂಕಷ್ಟಕ್ಕೆ ಒಳಗಾಗಬಾರದು ಎಂಬುದೇ ಸರಕಾರದ ಉದ್ದೇಶವಾಗಿದೆ ಎಂದರು. ಪ್ರತಿಯೊಂದು ಸರಕಾರದ ಯೋಜನೆ ಜನಸಾಮಾನ್ಯರಿಗೆ ತಲುಪಬೇಕು ಎಂಬ ಉದ್ದೇಶದಿಂದ ಜನಸಂಪರ್ಕ ಸಭೆ ನಡೆಯುತ್ತಿದೆ. ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಾರಾವಿ ಗ್ರಾ.ಪಂ ಅಧ್ಯಕ್ಷ ರವೀಂದ್ರ ಪೂಜಾರಿಯವರು ಮಾತನಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಮ್ಮತದಿಂದ ಕೆಲಸ ಮಾಡಿದರೆ ಪ್ರಗತಿ ಸಾಧ್ಯವಾಗುತ್ತದೆ. ಇಂತಹ ಸಭೆಗಳಿಗೆ ಜನರು ಸಮಸ್ಯೆಗಳನ್ನು ಇಟ್ಟುಕೊಂಡು ಬರುತ್ತಾರೆ ಆದರೆ ಸಭೆಯಲ್ಲಿ ಇದನ್ನು ವ್ಯಕ್ತಪಡಿಸುವುದಿಲ್ಲ, ಇದು ಸರಿಯಲ್ಲ ಗ್ರಾಮ ಮಟ್ಟದಲ್ಲಿ ನಡೆದಾಗ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಪರಿಹರಿಸಿಕೊಳ್ಳಬೇಕು ಎಂದರು. ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ ತಾಲೂಕಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಿಂದೆ ೯೪ಸಿಯಲ್ಲಿ ನಾಲ್ಕೈದು ಹಕ್ಕುಪತ್ರ ಕೊಡಿಸುವುದೇ ದೊಡ್ಡ ಸಾಹಸವಾಗುತ್ತಿದ್ದು, ಆದರೆ ಅವರ ಉತ್ತಮ ಕಾರ್ಯದಿಂದ ನೂರಾರು ಮಂದಿಗೆ ಹಕ್ಕುಪತ್ರ ಸಿಗುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ತಹಶೀಲ್ದಾರ್ ತಿಪ್ಪೇಸ್ವಾಮಿಯವರು ಮಾತನಾಡಿ, ಜನಸಂಪರ್ಕ ಸಭೆಯ ಉದ್ದೇಶಗಳನ್ನು ವಿವರಿಸಿ, ತಾಲೂಕಿನಲ್ಲಿ ೯೪ಸಿಯಲ್ಲಿ ೨೦ ಸಾವಿರ ಅರ್ಜಿ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.
ಅರಣ್ಯ-ಕಂದಾಯ ನಡುವೆ ಗೊಂದಲ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ೨೫ ಮಲೆಕುಡಿಯ ಕುಟುಂಬಗಳು ನಾರಾವಿ ಗ್ರಾಮದ ನೂಜೋಡಿ ಎಂಬಲ್ಲಿ ವಾಸ್ತವ್ಯವಿದ್ದು ಕೃಷಿ ಮಾಡಿಕೊಂಡು ಬದುಕುತ್ತಿದ್ದಾರೆ. ಇವರು ಅಕ್ರಮ-ಸಕ್ರಮ ಮತ್ತು ೯೪ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇವರ ಜಾಗದ ಬಗ್ಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವೆ ಗೊಂದಲವಿದೆ. ಅರಣ್ಯ ಇಲಾಖೆಯವರು ಇದು ಕಂದಾಯ ಇಲಾಖಾ ಜಾಗ ಎಂದರೆ, ಕಂದಾಯದವರು ಇದು ಅರಣ್ಯ ಜಾಗ ಎಂದು ಹೇಳುತ್ತಾರೆ. ಇದರಿಂದಾಗಿ ಇವರಿಗೆ ಹಕ್ಕುಪತ್ರ ದೊರೆಯುವಲ್ಲಿ ಸಮಸ್ಯೆ ಎದುರಾಗಿದೆ ಎಂದು ಆ ಭಾಗದ ನಾಗರಿಕರು ಸಭೆಯಲ್ಲಿ ಅಹವಾಲು ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ವನ್ಯಜೀವಿ ಇಲಾಖೆಯ ಅಧಿಕಾರಿ ಅರಣ್ಯಹಕ್ಕು ಕಾಯ್ದೆಯಲ್ಲಿ ಅರ್ಜಿ ಕೊಟ್ಟರೆ ಹಕ್ಕುಪತ್ರ ದೊರೆಯುತ್ತದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾಗರಿಕರು ಅರಣ್ಯಹಕ್ಕು ಕಾಯ್ದೆಯಲ್ಲಿ ಕೊಟ್ಟ ಅರ್ಜಿ ರಿಜೆಕ್ಟ್ ಆಗಿ ಬಂದಿದೆ ಇದನ್ನು ಮರುಪರಿಶೀಲಿಸಿ ಎಂದು ಒತ್ತಾಯಿಸಿದರು. ನಾರಾವಿ ಗ್ರಾ.ಪಂ ಸದಸ್ಯ ಉದಯ ಹೆಗ್ಡೆಯವರು ಮಾತನಾಡಿ ಇಲ್ಲಿಯ ಜಾಗ ಕಂದಾಯ ಇಲಾಖೆಗೆ ಬರುತ್ತದೆ ಎಂದಾಗ ತಹಶೀಲ್ದಾರ್ ತಿಪ್ಪೇಸ್ವಾಮಿಯವರು ಕಂದಾಯ ಜಾಗವಾದರೆ ಪರಿಶೀಲನೆ ನಡೆಸಿ ಹಕ್ಕುಪತ್ರ ನೀಡುವುದಾಗಿ ಭರವಸೆಯಿತ್ತರು.
ನಾರಾವಿ ಹಿ.ಪ್ರಾ ಶಾಲೆ ಬಳಿಯಿಂದ ಹಾದು ಹೋಗುವ ರಸ್ತೆ ಕಳೆದ ೬೦ ವರ್ಷಗಳಿಂದ ಸಾರ್ವಜನಿಕರ ಉಪಯೋಗಕ್ಕೆ ಇತ್ತು. ಈ ರಸ್ತೆಯನ್ನು ಸರಕಾರದ ಹಣದಿಂದ ಅಭಿವೃದ್ಧಿ ಪಡಿಸಲಾಗಿದೆ. ಈಗ ಖಾಸಗಿ ವ್ಯಕ್ತಿ ಕಲ್ಲುರಾಶಿ ಹಾಕಿ ತಡೆಯೊಡ್ಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಇದರ ಬಗ್ಗೆ ತಹಶೀಲ್ದಾರರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಉದಯ ಹೆಗ್ಡೆ ಆರೋಪಿಸಿದರು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ರಸ್ತೆ ಪಟ್ಟೆ ಜಾಗದಲ್ಲಿ ಹೋಗುತ್ತಿರುವುದರಿಂದ ಇದರ ಪ್ರವೇಶಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸ್ವಷ್ಟಪಡಿಸಿದರು. ಸರಕಾರದ ಹಣ ವಿನಿಯೋಗಿಸಲಾಗಿದೆ ರಸ್ತೆ ಸಾರ್ವಜನಿಕರ ಉಪಯೋಗಕ್ಕೆ ಬರಬೇಕು ಎಂದು ಉದಯ ಹೆಗ್ಡೆ ಹೇಳಿದಾಗ ರಸ್ತೆ ಜಾಗದ ಬಗ್ಗೆ ಸರ್ವೆ ನಡೆಸುವುದಾಗಿ ತಿಳಿಸಿದರು.
ಅಕ್ಷರದಾಸೋಹ ಯೋಜನೆಯಲ್ಲಿ ಭಾರತ್ ಗ್ಯಾಸ್‌ನವರಿಗೆ ಶಾಲೆಗಳಿಗೆ ಗ್ಯಾಸ್ ಪೂರೈಕೆಗೆ ಅವಕಾಶ ನೀಡಲಾಗಿದ್ದು, ಡಿಪೋಸಿಟ್ ವ್ಯತ್ಯಾಸದ ಹಣ ನೀಡುವ ಬಗ್ಗೆ ಹೆಚ್.ಮಹಮ್ಮದ್ ವೇಣೂರು ಪ್ರಶ್ನಿಸಿದರು. ಈ ಸಮಯ ಯೋಜನೆಯ ನಿರ್ದೇಶಕ ಲಕ್ಷ್ಮಣ ಶೆಟ್ಟಿಯವರು ಉತ್ತರಿಸಿ, ವ್ಯತ್ಯಾಸದ ಹಣ ನೀಡಲು ಕಾರ್ಯನಿರ್ವಾಹಣಾಧಿಕಾರಿಗಳು ಈಗಾಗಲೇ ಆದೇಶ ನೀಡಿದ್ದು, ೨೭ ಶಾಲೆಯವರು ಉಳಿಕೆ ಅನುದಾನ ನೀಡಿದ್ದಾರೆ. ಹಣ ನೀಡಿದ ಶಾಲೆಗಳಿಗೆ ಮರು ಆದೇಶ ಮಾಡಲು ಕಾರ್ಯನಿರ್ವಾಹಣಾಧಿಕಾರಿಗಳನ್ನು ಕೋರುವುದಾಗಿ ತಿಳಿಸಿದರು. ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ಜಿಲ್ಲಾ ಕೆಡಿಪಿ ಸದಸ್ಯ ಶ್ರೀನಿವಾಸ ಕಿಣಿ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ನಾರಾವಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ತಾ.ಪಂ. ಸದಸ್ಯರಾದ ರೂಪಲತಾ ನಾರಾವಿ, ವಿನೂಷ ಪ್ರಕಾಶ್ ಅಳದಂಗಡಿ, ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ ಜೈನ್, ಗ್ರಾ.ಪಂ. ಅಧ್ಯಕ್ಷರುಳಾದ ಸತೀಶ್‌ಕುಮಾರ್ ಮಿತ್ತಮಾರ್ ಅಳದಂಗಡಿ, ಸದಾನಂದ ಶೆಟ್ಟಿ ಮರೋಡಿ, ಮೋಹನ್ ಅಂಡಿಂಜೆ, ದೇವಕಿ ಬಳೆಂಜ, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಉಪಸ್ಥಿತರಿದ್ದರು.
ರಶ್ಮೀ ನಾರಾವಿ ಇವರ ಪ್ರಾರ್ಥನೆ ಬಳಿಕ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಸ್ವಾಗತಿಸಿದರು. ಯಶೋಧರ ಬಂಗೇರ ಮರೋಡಿ ಕಾರ್ಯಕ್ರಮ ನಿರೂಪಿಸಿ, ನಾರಾವಿ ಪಿಡಿಒ ನಿರ್ಮಲ ಕುಮಾರ್ ವಂದಿಸಿದರು. ನಾರಾವಿ ಜನಸಂಪರ್ಕ ಸಭೆ ಮಾದರಿ ಜನಸಂಪರ್ಕ ಸಭೆ ಎಂದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಸನ್ಮಾನ : ಕಾರ್ಯಕ್ರಮದಲ್ಲಿ ಸರಕಾರದ ಯೋಜನೆ ಅನುಷ್ಠಾನದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ತಹಶೀಲ್ದಾರ್ ತಿಪ್ಪೇಸ್ವಾಮಿ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಹಾಗೂ ಜನಸಪಂಪರ್ಕ ಸಭೆಗೆ ಬಂದ ಸಾರ್ವಜನಿಕರಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ತನ್ನ ಸ್ವಂತ ಖರ್ಚಿನಿಂದ ಮಾಡಿದ ಜಿಲ್ಲಾ ಕೆಡಿಪಿ ಸದಸ್ಯ ಶ್ರೀನಿವಾಸ ಕಿಣಿ ನಾರಾವಿ ಇವರನ್ನು ಶಾಸಕ ಕೆ. ವಸಂತ ಬಂಗೇರ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ಹಾಗೂ ೯೪ಸಿ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕರು ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.