ಪತ್ರಕರ್ತರ ಸಂಘದಿಂದ ಸಣ್ಣಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಸಮ್ಮಾನ, ರೂ.150 ಕೋಟಿಗೂ ಮಿಕ್ಕಿ ಕಾಮಗಾರಿ ಮಂಜೂರಾತಿಗೆ ಪ್ರಯತ್ನ : ಬಂಗೇರ

belthangady patrakartara sanga bangera sanmana copyಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕನಾಗಿ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ತಾಲೂಕಿನಲ್ಲಿ ದಾಖಲೆ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ಇನ್ನೂ ಒಂದು ವರ್ಷದ ಅವಕಾಶವಿದ್ದು, ಈ ಅವಧಿಯಲ್ಲಿ ರೂ. 150 ಕೋಟಿಗೂ ಮಿಕ್ಕಿ ಅನುದಾನದ ಕಾಮಗಾರಿ ತರಿಸಲು ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಅವರನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಫೆ.21ರಂದು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಾಸಕರು ಪತ್ರಕರ್ತರು ರಾಜಕಾರಣಿಗಳಿಗೆ ಇದುವರೆಗೆ ಎಲ್ಲಿಯೂ ಸನ್ಮಾನಿಸಿಲ್ಲ. ಬೆಳ್ತಂಗಡಿ ತಾಲೂಕಿನ ಎಲ್ಲಾ ಪತ್ರಕರ್ತರು ಒಟ್ಟಾಗಿ ಮಾಡಿರುವ ಸನ್ಮಾನ ನನ್ನ ಜೀವನದ ಅತೀ ದೊಡ್ಡ ಸನ್ಮಾನವಾಗಿದೆ ಎಂದು ಅಭಿಪ್ರಾಯ ಪಟ್ಟರು.
1968ರಲ್ಲಿ ನನ್ನ ಅಣ್ಣ ಚಿದಾನಂದ ಶಾಸಕರಾದ ಅವಧಿಯಲ್ಲಿ ತಾನು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದು, 2018ಕ್ಕೆ 50 ವರ್ಷಗಳಾಗುತ್ತದೆ. ನಾನು ರಾಜಕೀಯದಲ್ಲಿ ಗಳಿಸಿದ್ದು, ಏನೂ ಇಲ್ಲ, ಕಳೆದುಕೊಂಡದ್ದೇ ಜಾಸ್ತಿ, ಒಳ್ಳೆಯ ಕೆಲಸಕ್ಕೆ ದೇವರ ಆರ್ಶೀವಾದ ಇದೆ ಎಂಬುದಕ್ಕೆ ನಾನೇ ಸಾಕ್ಷಿ, ರಾಜಕೀಯದಲ್ಲಿ ಹಣ ಮಾಡುವುದಿದ್ದರೆ ಎಷ್ಟೋ ಮಾಡಬಹುದಿತ್ತು ಆದರೆ ಆ ಇರಾದೆ ನನ್ನಲ್ಲಿಲ್ಲ, ಇದರಿಂದಾಗಿ ನನ್ನ ಮೇಲೆ ಎಷ್ಟೋ ಆಪಾದನೆಗಳು, ಹಲವಾರು ಕಷ್ಟಗಳು ಎದುರಾದರೂ ದೇವರು ರಕ್ಷಣೆ ನೀಡಿದ್ದಾರೆ ಎಂದರು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 11 ರಸ್ತೆಗಳಿಗೆ ರೂ.20 ಕೋಟಿ, ನನ್ನ ಶಾಸಕ ನಿಧಿಯಲ್ಲಿ 3 ಕೋಟಿ, ಪುದುವೆಟ್ಟು ಗ್ರಾಮದಲ್ಲಿ ಹಲವು ವರ್ಷಗಳ ಬೇಡಿಕೆಯಾದ ಸೇತುವೆಗೆ ರೂ.7.50 ಕೋಟಿ, ಬೆಳ್ತಂಗಡಿಯಲ್ಲಿ ಮಿನಿ ವಿಧಾನ ಸೌಧ ಸೇರಿದಂತೆ ರಸ್ತೆ, ಸೇತುವೆ, ವಿದ್ಯುತ್, ಕುಡಿಯುವ ನೀರು ಮೊದಲಾದ ಕಾಮಗಾರಿಗಳನ್ನು ಮಾಡಿಸಿದ್ದೇನೆ. ನಕ್ಸಲ್ ಬಾಧಿತ ಪ್ರದೇಶದಲ್ಲಿ 23 ಗೌರವ ಶಿಕ್ಷಕರ ನೇಮಕ ಮಾಡಿದ್ದು, ತಾಂತ್ರಿಕ ಕಾರಣದಿಂದ ಅವರಿಗೆ ವೇತನ ಸಿಗದಿದ್ದಾಗ ನನ್ನ ಕೈಯಿಂದ ರೂ.7.50 ಲಕ್ಷ ಕೊಟ್ಟಿದ್ದೇನೆ ಎಂದರು.
ಮೆಡಿಕಲ್ ಕಾಲೇಜಿಗೆ ಪ್ರಯತ್ನ: ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಮಂಜೂರಾಗಲಿದ್ದು, ಅದನ್ನು ಬೆಳ್ತಂಗಡಿಗೆ ತರುವ ಪ್ರಯತ್ನ ನಡೆಸುತ್ತಿದ್ದೇನೆ. ತಣ್ಣೀರುಪಂತಕ್ಕೆ ಪಾಲಿಟೆಕ್ನಿಕ್, ಬೆಳ್ತಂಗಡಿ ತಾಲೂಕಿಗೆ ರಬ್ಬರ್ ಕ್ಲಸ್ಟರ್ ಪ್ರಯತ್ನ, ಹೊಸಂಗಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದೆ. ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನ ಬಳಿ ಕೈಗಾರಿಕಾ ಪ್ರದೇಶಕ್ಕೆ 9.98 ಜಾಗ ಹಿಂದೆ ಮೀಸಲಿಟ್ಟಿದ್ದು, ಅಲ್ಲಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಿ ಕೈಗಾರಿಕೆ ಮಾಡುವವರಿಗೆ ನೀಡಲಾಗುವುದು ಎಂದು ತಿಳಿಸಿದರು. ಪತ್ರಕರ್ತರ ಸಂಘದ ನೂತನ ಕಟ್ಟಡಕ್ಕೆ ತನ್ನ ನಿಧಿಯಿಂದ ರೂ.5ಲಕ್ಷ ಅನುದಾನ ನೀಡುವುದಾಗಿ ಭರವಸೆಯಿತ್ತರು.
ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ದೇವಿ ಪ್ರಸಾದ್ ತಾಲೂಕಿನಲ್ಲಿ ಕುಡಿಯುವ ನೀರಿನ ಬಹಳಷ್ಟು ಸಮಸ್ಯೆಯಿದ್ದು, ತಾಲೂಕಿಗೆ 100 ಕಿಂಡಿಅಣೆಕಟ್ಟು ಮಂಜೂರು ಮಾಡುವಂತೆ ಶಾಸಕರಲ್ಲಿ ವಿನಂತಿಸಿದರು.
ಪತ್ರಕರ್ತರಾದ ಪುಷ್ಪರಾಜ ಶೆಟ್ಟಿ ಸ್ವಾಗತಿಸಿದರು. ಲಕ್ಷ್ಮೀ ಮಚ್ಚಿನ ಸನ್ಮಾನಿತರನ್ನು ಪರಿಚಯಿಸಿದರು. ದೀಪಕ್ ಆಠವಳೆ ಸನ್ಮಾನ ಪತ್ರ ವಾಚಿಸಿದರು. ಶಿಬಿ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಹೃಷಿಕೇಶ್ ಧರ್ಮಸ್ಥಳ ವಂದಿಸಿದರು. ಪತ್ರಕರ್ತರಾದ ಆರ್.ಎನ್. ಪೂವಣಿ, ಬಿ.ಎಸ್. ಕುಲಾಲ್, ಮಂಜುನಾಥ ರೈ, ಆಶ್ರಫ್‌ಆಲಿ ಕುಂಞ, ಪದ್ಮನಾಭ ವೇಣೂರು, ಮನೋಹರ ಬಳೆಂಜ, ರಾಜೇಶ್ ಪೆಂರ್ಬುಡ, ಭುವನೇಶ್, ಶ್ರೀನಿವಾಸ ತಂತ್ರಿ, ಆಚುಶ್ರೀ ಬಾಂಗೇರು, ಧನಕೀರ್ತಿ ಆರಿಗ, ಸಂಜೀವ ಎನ್.ಸಿ. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.