ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

Advt_NewsUnder_1
Advt_NewsUnder_1
Advt_NewsUnder_1

z copyಸಗುಣ, ಶೀನಪ್ಪ, ಅಶೋಕ್ ದೇವಾಡಿಗ, ಪ್ರತಾಪ್, ರಘುನಾಥ್ ಶೆಟ್ಟಿ, ಪ್ರಕಾಶ್ ಹೆಗ್ಡೆ, ನಾರಾಯಣ ಗೌಡ,, ರಮೇಶ್ ಕೋಟ್ಯಾನ್, ಜೋಯ್ ಕಿಶೋರ್ ಮೆಂಡೋನ್ಸಾ, ಜಯಂತಿ, ರೂಪಾ, ಮಾಧವ, ನಂದ ಕುಮಾರ್

 

11 ಮಂದಿ ಬಿಜೆಪಿ ಬೆಂಬಲಿತರ ಗೆಲುವು : ಮತ ಅಸಿಂಧುಗೊಳಿಸಿದ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪ

ಶಿರ್ಲಾಲು : ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘದ 11 ಮಂದಿ ನಿರ್ದೇಶಕರ ಸ್ಥಾನಕ್ಕೆ ಫೆ. ೧೮ ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಆದರೆ ಈ ಆಯ್ಕೆಯನ್ನು ವಿರೋಧಿಸಿದ ಕಾಂಗ್ರೆಸ್ ಬೆಂಬಲಿತರು ಮತ ಎಣಿಕೆ ಮತ್ತು ಚುನಾವಣೆ ನಡೆಸಿದ ಪ್ರಕ್ರೀಯೆ ಸರಿಯಾಗಿಲ್ಲ ಹಾಗೂ ಮತಪತ್ರದಲ್ಲಿ ಮೀಸಲಾತಿ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಹೆಸರು ಒಂದೇ ಮತ ಪತ್ರದಲ್ಲಿ ಹಾಕಿ ಮತದಾರರಲ್ಲಿ ಗೊಂದಲ ಉಂಟುಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಮತ ಎಣಿಕೆ ಸ್ಥಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜಮಾಯಿಸಿ ಹೊ ಕೈ ಮತ್ತು ಗೊಂದಲ ನಡೆದು ಮತ ಎಣಿಕೆ ಪ್ರಕ್ರೀಯೆ ಮುಗಿಯುವಾಗ ರಾತ್ರಿ 1 ಗಂಟೆ ದಾಟಿದ ಪ್ರಸಂಗವೂ ನಡೆದಿದೆ.
ಚುನಾವಣೆಯಲ್ಲಿ ಜಯಗಳಿಸಿದವರು ಯಾರ‍್ಯಾರು?
ಸಹಕಾರಿ ಸಂಘದ ಒಟ್ಟು 13 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರಾದ ಸಗುಣ ಪುಚ್ಚೆದೊಟ್ಟು ಮತ್ತು ಬಿಜೆಪಿ ಬೆಂಬಲಿತರಾದ ಶೀನಪ್ಪ ಮಲೆಕ್ಕಿಲ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಶೋಕ್ ದೇವಾಡಿಗ, ಪ್ರತಾಪ್, ರಘುನಾಥ್ ಶೆಟ್ಟಿ, ಪ್ರಕಾಶ್ ಹೆಗ್ಡೆ, ನಾರಾಯಣ ಗೌಡ, ರಮೇಶ್ ಕೋಟ್ಯಾನ್, ಜೋಯ್ ಕಿಶೋರ್ ಮೆಂಡೋನ್ಸಾ, ಜಯಂತಿ, ರೂಪಾ, ಮಾಧವ ಮತ್ತು ನಂದ ಕುಮಾರ್ ಅವರು ಜಯಗಳಿಸಿದ್ದಾರೆ. ಆಯ್ಕೆಯಾದ ಎಲ್ಲರೂ ಬಿ.ಜೆ.ಪಿ ಬೆಂಬಲಿತರು.
ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದವರು ಯಾರ‍್ಯಾರು?
ಒಟ್ಟು 11 ಸ್ಥಾನಗಳಿಗೆ ಕುಶಾಲಪ್ಪ ಗೌಡ, ಕೇಶವ ಬಂಗೇರ, ವಾಸು ಹೆಗ್ಡೆ, ಕೃಷ್ಣಪ್ಪ ಪೂಜಾರಿ, ಅಂತೋಣಿ, ಪ್ರೇಮಾ, ಗುಣಮ್ಮ ಆರ್ ಜೈನ್, ಹರ್ಷ ಆರ್ ಜೈನ್, ಗೋಪಾಲ ಪೂಜಾರಿ, ರಮಾನಂದ ಕೆ ಇವರು ಸ್ಪರ್ಧಾ ಕಣದಲ್ಲಿದ್ದರೂ ಎಲ್ಲರೂ ಪರಾಭವಗೊಂಡಿದ್ದಾರೆ. ಇನ್ನೋರ್ವ ಅಭ್ಯರ್ಥಿ ಸುರೇಶ್ ಸಪಲ್ಯ ಅವರೂ ಸ್ಪರ್ಧಿಸಿದ್ದು. ಅವರೂ ಕೂಡ ಪರಾಭವಗೊಂಡಿದ್ದಾರೆ.
ಗೊಂದಲದ ಏನು?
ಬಿಜೆಪಿ ಕಡೆಯಿಂದ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಚುನಾವಣೆ ನಡೆದ 11 ಸ್ಥಾನಗಳಲ್ಲಿ 7 ಸ್ಥಾನಗಳು ಸಾಮಾನ್ಯ ಮೀಸಲಾತಿ, 2 ಮಹಿಳೆ ಮತ್ತು 2 ಹಿಂದುಳಿದ ವರ್ಗಕ್ಕೆ ನಿಗಧಿಯಾಗಿತ್ತು. ಅಂತೆಯೇ ಚುನಾವಣೆ ಕೂಡ ನಡೆದು ಒಟ್ಟು268 ಮತಗಳು ಚಲಾವಣೆಗೊಂಡಿದ್ದವು. ರಾತ್ರಿಯೇ ಮತ ಎಣಿಕೆ ಪ್ರಕ್ರೀಯೆ ಪ್ರಾರಂಭವಾಗಿ, ಮತಪತ್ರಗಳನ್ನು 25 ರಂತೆ ಕಟ್ಟು ಮಾಡಿ ಇಡುವ ವೇಳೆ ಲೆಕ್ಕಕ್ಕಿಂತ ಜಾಸ್ತಿ ಮತಗಳು ಒತ್ತಲ್ಪಟ್ಟಿದ್ದ 138 ಮತಗಳು ಕುಲಗೆಟ್ಟದ್ದೆಂದು ಚುನಾವಣಾಧಿಕಾರಿ ಚಂದ್ರಶೇಖರ್ ಅವರು ತಿರ್ಮಾನಕ್ಕೆ ಬಂದು ಅದನ್ನು ಪ್ರತ್ಯೇಕಿಸಿಟ್ಟಿದ್ದರು. ಈ ಕ್ರಮವನ್ನು ಖಂಡಿಸಿದ ಕಾಂಗ್ರೆಸ್ ಬೆಂಬಲಿತರು, ಹಾಗಾದರೆ ಮೀಸಲಾತಿಗೆ ತಕ್ಕುದಾಗಿ ಪ್ರತ್ಯೇಕ ಮತ ಪತ್ರ ಮಾಡಬೇಕಾಗಿತ್ತು. ಒಂದೇ ಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮತ ಎಣಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಬೆಂಬಲಿತರು ಮತ್ತು ಬಿಜೆಪಿ ಬೆಂಬಲಿತರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಜೋಯ್ ಕಿಶೋರ್ ಮೆಂಡೋನ್ಸಾ ಕಾಂಗ್ರೆಸ್ ಮುಖಂಡರಾದ ಗ್ರಾಮಾಂತರ ಪ್ರದೇಶ ರೈತ ಕಿಸಾನ್ ಘಟಕದ ಅಧ್ಯಕ್ಷರೂ ಆಗಿರುವ ಸಂಜೀವ ಪೂಜಾರಿ ಅವರ ನಡುವೆ ತಳ್ಳಾಟ ಕೂಡ ನಡೆಯಿತು.
ಒಂದು ಕಡೆಯವರು ಆರೋಪಿಸುವಂತೆ ಚುನಾವಣಾಧಿಕಾರಿ ಕೈಯಿಂದ ಮತಪತ್ರ ಎಳೆಯುವ ಯತ್ನ ಕೂಡ ನಡೆಯಿತು. ಬಳಿಕ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದ ಬಳಿಕ ಗುಂಪನ್ನು ಚದುರಿಸಿ ನಿಯಮಾನುಸಾರ ಮತ ಎಣಿಕೆಗೆ ಅವಕಾಶ ಮಾಡಿಕೊಟ್ಟರು. ತಡ ರಾತ್ರಿವರೆಗೂ ಮತ ಎಣಿಕೆ ನಡೆದು ಮಧ್ಯ ರಾತ್ರಿ ವಿಜೇತರನ್ನು ಘೋಷಿಸಲಾಯಿತು.
ಮತ ಎಣಿಕೆ ಕೇಂದ್ರದಲ್ಲಿ ಗೊಂದಲ ಏರ್ಪಡುತ್ತಿದ್ದಂತೆ ಸ್ಥಳಕ್ಕೆ ಬಿಜೆಪಿ ಅಧ್ಯಕ್ಷ ರಂಜನ್ ಜಿ ಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ತಾಲೂಕು ಬಿಜೆಪಿ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾ. ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಾ.ಪಂ. ಸದಸ್ಯ ವಿಜಯ ಗೌಡ, ಸದಾನಂದ ಪೂಜಾರಿ ಉಂಗಿಲಬೈಲು, ಮೋಹನ್‌ದಾಸ್ ಮೊದಲಾದವರು ಭೇಟಿ ನೀಡಿದರು. ಕಾಂಗ್ರೆಸ್ ಕಡೆಯಿಂದ ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ ಭೇಟಿ ನೀಡಿದರು. ಎರಡೂ ಪಕ್ಷದಿಂದ ಕಾರ್ಯಕರ್ತರು ಜಮಾವಣೆಗೊಂಡು ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಬೆಳ್ತಂಗಡಿ, ಪುಂಜಾಲಕಟ್ಟೆ, ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಸೂಕ್ತ ಭದ್ರತೆ ವ್ಯವಸ್ಥೆ ಮಾಡಿದರು.
ಪೊಲೀಸ್ ರಕ್ಷಣೆಯಲ್ಲಿ ಮತ ಎಣಿಕೆ:
ಗೊಂದಲ ಏರ್ಪಟ್ಟು ಮತ ಎಣಿಕೆ ಕಾರ್ಯ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಮುಂದುವರಿದಾಗ ಎಸ್.ಐ ರವಿ ಅವರು ಸ್ಥಳದಲ್ಲಿದ್ದು, ಅಭ್ಯರ್ಥಿಗಳು ಮತ್ತು ಅವರ ಏಜೆಂಟರು ಹೊರತುಪಡಿಸಿ ಉಳಿದೆಲ್ಲರನ್ನೂ ಹೊರತೆರಳುವಂತೆ ಸೂಚಿಸಿ ಕ್ರಮ ಕೈಗೊಂಡ ಬಳಿಕ ಮತ ಎಣಿಕೆ ನಡೆಯಿತು.
ಕಾಂಗ್ರೆಸಿಗರು ಏನೆನ್ನುತ್ತಾರೆ?
ಪ್ರಕರಣದ ಬಗ್ಗೆ ಆಕ್ಷೇಪವೆತ್ತಿರುವ ಕಾಂಗ್ರೆಸ್ ಬೆಂಬಲಿತರು, ಚುನಾವಣಾಧಿಕಾರಿ ಮಾಡಿದ ಕ್ರಮ ಸರಿಯಲ್ಲ. ಮೀಸಲಾತಿಯಂತೆ ಮತ ಹಾಕಬೇಕಾದರೆ ಅಂತೆಯೇ ಮತ ಪತ್ರ ಪ್ರತ್ಯೇಕ ಮಾಡಬೇಕಿತ್ತು. ಪಕ್ಕದ ಪಡಂಗಡಿಯಲ್ಲಿ ನಡೆದ ಚುನಾವಣೆಯಲ್ಲಿ ಈ ರೀತಿ ಮಾಡಲಾಗಿದೆ. ಈ ವಿಚಾರವಾಗಿ ಚುನಾವಣೆ ನಡೆಸುವ ಇಲಾಖೆಗೇ ಗೊಂದಲವಿದ್ದಂತಿದೆ. ನಮ್ಮ ಕಡೆಯಿಂದ ಹಿಂದುಳಿದ ವರ್ಗ ಒಂದು ಹೊರತುಪಡಿಸಿ 10 ಕ್ಷೇತ್ರಗಳಿಗೆ ಅಭ್ಯರ್ಥಿ ಹಾಕಿದ್ದೆವು. ಸುರೇಶ್ ಸಪಲ್ಯ ಅವರು ಸ್ವತಂತ್ರ್ಯವಾಗಿ ಕಣದಲ್ಲಿದ್ದರು. ಒಂದೇ ಮತ ಪತ್ರ ಇದ್ದುದರಿಂದ ಒಟ್ಟಿಗೆ ಮತ ಹಾಕಿದ್ದೇವೆ. ಮೀಸಲಾತಿ ಆಧಾರಿತವಾಗಿಯೇ ಮತ ಹಾಕಬೇಕಿತ್ತು ಎಂಬುದು ಎಷ್ಟು ಸರಿ ಎಂದಿದ್ದಾರೆ. 268ರಲ್ಲಿ 138ಮತಗಳನ್ನು ಅಧಿಕಾರಿ ತಿರಸ್ಕೃತ ಎಂದು ಬೇರ್ಪಡಿಸಿಟ್ಟಾಗಲೇ ನಾವು ಚುನಾವಣಾಧಿಕಾರಿ ಕ್ರಮವನ್ನು ಆಕ್ಷೇಪಿಸಿ ಲಿಖಿತ ದೂರು ಅರ್ಜಿ ನೀಡಿದ್ದೇವೆ. ಅಂತಿಮ ಘೋಷಣೆ ಕೂಡ ಸರಿಯಲ್ಲ. ಮುಂದಿನ ಕಾನೂನು ದಾವೆಯ ಬಗ್ಗೆ ನಾಯಕರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ. ಬಿಜೆಪಿ ಕಡೆಯಿಂದ ಪ್ರತಿಕ್ರೀಯಿಸಿದ ಸ್ಥಳೀಯ ನಾಯಕರು, ಸಂಜೀವ ಪೂಜಾರಿ ಕೊಡಂಗೆಯವರು ಮತ ಎಣಿಕೆ ಕೇಂದ್ರಕ್ಕೆ ಅಕ್ರಮ ಪ್ರವೇಶಗೈದು ನಮ್ಮ ಅಭ್ಯರ್ಥಿಯ ಮೇಲೆ ಕೈ ಮಾಡಿದ್ದಾರೆ. ಚುನಾವಣಾಧಿಕಾರಿ ಕೈಯಿಂದ ಮತ ಪತ್ರ ಕಸಿಯುವ ಪ್ರಯತ್ನ ಕೂಡ ನಡೆದಿದೆ. ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎಂದು ದೂರಿದ್ದಾರೆ. ಹಲ್ಲೆ ಯತ್ನದ ಬಗ್ಗೆ ಸಂಜೀವ ಪೂಜಾರಿ ಅವರ ಬಳಿ ಸುದ್ದಿ ಮಾತನಾಡಿಸಿದಾಗ, ಜೋಯ್ ಕಿಶೋರ್ ಮೆಂಡೋನ್ಸಾ ಅವರು ಪರಿಚಿತರೇ ಆಗಿದ್ದು ಪರಿಚಯದಿಂದಲೇ ಅವರ ಕೈ ಹಿಡಿದು ಮಾತನಾಡಿಸಿದ್ದೇನಷ್ಟೇ ಹೊರತು ಅಭ್ಯರ್ಥಿಯ ಮೇಲೆ ಕೈ ಮಾಡಿಲ್ಲ. ಮತಪತ್ರ ಕಸಿಯುವ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.