ನಾರಾವಿ: ವಲಯ ಒಕ್ಕೂಟಗಳ ಪದಗ್ರಹಣ-ಸಾಧನಾ ಸಮಾವೇಶ

vnr ನಾರಾವಿ: ಪ್ರತಿಯೊಂದು ಕ್ಷೇತ್ರ ಸಮಾಜದಲ್ಲಿ ಬಲಿಷ್ಠವಾಗಬೇಕೆಂಬ ಉದ್ದೇಶ ಡಾ| ಹೆಗ್ಗಡೆಯವರದ್ದು. ಅದಕ್ಕಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಪರಿಣಾಮಕಾರಿ ಅನುಷ್ಠಾನ ಆಗಿದೆ. ಇದಕ್ಕೆ ಒಕ್ಕೂಟ ಹಾಗೂ ಯೋಜನೆಯ ಪ್ರತಿನಿಧಿಗಳೇ ಕಾರಣ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಹೇಳಿದರು.
ಅವರು ಫೆ.18ರಂದು ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ನಾರಾವಿ ವಲಯ, ಪ್ರಗತಿ ಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟಗಳು, ಜನಜಾಗೃತಿ ವೇದಿಕೆ ಹಾಗೂ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಜರಗಿದ ನಾರಾವಿ ವಲಯ ಒಕ್ಕೂಟಗಳ ಪದಗ್ರಹಣ ಮತ್ತು ಸಾಧನಾ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಕಿಣಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ, ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್, ವೈದ್ಯಾಧಿಕಾರಿ ಡಾ| ಶೀತಲ್ ಕುಮಾರ್, ಒಕ್ಕೂಟಗಳ ವಲಯಧ್ಯಕ್ಷ ಗೋಪಾಲ ಪೂಜಾರಿ, ಜನಜಾಗೃತಿ ವೇದಿಕೆ ಅಧ್ಯಕ್ಷ ಜಯರಾಜ್ ಹೆಗ್ಡೆ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕು| ನಿರೀಕ್ಷಾ ಎನ್. ನಾವರ, ಜ್ಯೋತಿ, ರಾಮಶೆಟ್ಟಿ, ಡೀಕಯ್ಯ ಪೂಜಾರಿ, ಸುಧಾಕರ ಕಾಶಿಪಟ್ಣ, ಸ್ಯಾಕ್ಸೋಫೋನ್‌ವಾದಕ ತ್ರಿವಳಿ ಸಹೋದರಿಯರಾದ ಶ್ರೇಜಾ, ತುಳಸಿ ಹಾಗೂ ಜ್ಯೋತಿ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಪಾನಮುಕ್ತರಿಗೆ ಪ್ರಮಾಣಪತ್ರ ವಿತರಣೆ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿಬಂಧು, ಸ್ವಸಹಾಯ ಸಂಘ ಹಾಗೂ ಜ್ಞಾನ ವಿಕಾಸ ಕೇಂದ್ರದ ಪದಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.