ಬ್ರಹ್ಮಕಲಶೋತ್ಸವದಿಂದ ಮನಸ್ಸು-ಭಾವನೆ ಪರಿಶುದ್ಧವಾಗಲಿ : ಮಾಣಿಲ ಶ್ರೀ

Shirlalu bramhakalasha darmika sabhe copy ಶಿರ್ಲಾಲು: ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ನಮ್ಮ ಬದುಕಿನ ಉತ್ಸವದ ವೈಭವೀಕರಣವಾಗಬೇಕು, ದೇಹದ ಶುದ್ಧೀಕರಣದ ಜೊತೆಗೆ ನಮ್ಮ ಭಾವನೆ, ಮನಸ್ಸು ಪರಿಶುದ್ಧವಾಗಬೇಕು ಎಂದು ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಫೆ. 6ರಂದು ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು, ಶಿರ್ಲಾಲು ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಜರುಗಿದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಭಜನಾ ಸಂಕೀರ್ತನೆಯ ಮೂಲಕ ಈ ಭಾಗದ ನೂರು ಮನೆಯವರು ದೇವಸ್ಥಾನ ನಿರ್ಮಿಸಿರುವುದು ದೊಡ್ಡ ಚರಿತ್ರೆ ಇದು ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ವಿಷಯ, ದೇವಸ್ಥಾನ ಎಂದರೆ ನಮ್ಮ ದೇಹದಂತೆ ದೇವಸ್ಥಾನದ ಬ್ರಹ್ಮಕಲಶದ ಜೊತೆ ನಮ್ಮ ಮನಸ್ಸು, ಭಾವನೆ, ಕರ್ಮದ ಶುದ್ಧಿಯಾಗಬೇಕು. ನಮ್ಮ ಬದುಕಿನ ಸಂಪತ್ತು ಮಕ್ಕಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ದೇಶದ ಸತ್ಪ್ರಜೆಗಳಾಗಿ ರೂಪಿಸಬೇಕು, ನಮ್ಮ ನೆಲ, ಜಲ ರಕ್ಷಣೆಗೆ ಎಲ್ಲರೂ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ ಅಜಿಲ ಅವರು ಮಾತನಾಡಿ ಲೋಕನಾಥೇಶ್ವರ ದೇವಸ್ಥಾನಕ್ಕೆ ಈ ಸೀಮೆಯ ಇತಿಹಾಸದಲ್ಲೇ ಪ್ರಥಮವಾಗಿ ಶಾಶ್ವತವಾದ ಕೊಡಿಮರ ನಿರ್ಮಾಣವಾಗಿದೆ. ಇಲ್ಲಿಯ ಯುವಕರ ಸಂಘಟಿತ ಸಾಧನೆಯಿಂದ ಉತ್ತಮ ಕೆಲಸಗಳು ಇಲ್ಲಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಮಾತನಾಡಿ, ನಾವು ನಮ್ಮ ಸಂಸ್ಕೃತಿ, ಆಚರಣೆಗಳಿಂದ ವಿಮುಖರಾಗುತ್ತಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಚಿಂತನೆ ನಡೆಸಬೇಕು, ಪ್ರಕೃತಿಯಲ್ಲಿ ದೇವರನ್ನು ಕಾಣುವ ನಾವು ನಮ್ಮ ಜಿಲ್ಲೆಯ ಜೀವ ನದಿ ನೇತ್ರಾವತಿ ತಿರುವು ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಕೆಡಿಆರ್‌ಡಿಪಿ ಸಮುದಾಯ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಶುಭ ಕೋರಿದರು. ವೇದಿಕೆಯಲ್ಲಿ ಶಿರ್ಲಾಲು ಗ್ರಾ.ಪಂ ಸದಸ್ಯರಾದ ಹರ್ಷ ಆರ್ ಜೈನ್, ಜಯಲಕ್ಷ್ಮೀ ಶಿವಾನಂದ, ಧರ್ಣಪ್ಪ ಪೂಜಾರಿ, ಅರ್ಚಕ ಸೂರ್ಯನಾರಾಯಣ ರಾವ್, ವಂಶೀಯ ಆಡಳಿತ ಮೊಕೇಸರ ಶ್ರೀಧರ ಪೂಜಾರಿ ಮುಡ್ಜಾಲು, ಉಪಾಧ್ಯಕ್ಷರುಗಳಾದ ಸಂಜೀವ ಪೂಜಾರಿ ಕೊಡಂಗೆ, ಧರ್ಣಪ್ಪ ಪೂಜಾರಿ ಮಡೆಮಾರು, ಕೋಶಾಧಿಕಾರಿ ಚಿದಾನಂದ ಪೂಜಾರಿ ಎಲ್ದಕ್ಕ, ಭಜನಾ ಮಂಡಳಿ ಅಧ್ಯಕ್ಷ ಪ್ರದೀಪ್ ಗೌಡ, ಮಹಿಳಾ ಮಂಡಲ ಅಧ್ಯಕ್ಷೆ ವಿಮಲ, ಜೊತೆ ಕಾರ್ಯದರ್ಶಿಗಳಾದ ಪ್ರಭಾಕರ ಮುಡ್ಜಾಲು, ವಿಶ್ವನಾಥ ಪುದ್ದರಬೈಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನ್ನದಾನಿಗಳನ್ನು ಹಾಗೂ ಬ್ರಹ್ಮಕಲಶೋತ್ಸವಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ದೇವಸ್ಥಾನದ ವತಿಯಿಂದ ಸ್ವಾಮೀಜಿಯವರು ಸನ್ಮಾನಿಸಿದರು. ಸಮೀಕ್ಷಾ ಇವರ ಪ್ರಾರ್ಥನೆ ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ. ಗಂಗಾಧರ ಮಿತ್ತಮಾರು ಸ್ವಾಗತಿಸಿದರು. ಪಿ.ಹೆಚ್ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿ, ಬ್ರಹಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಹೆಚ್ ನಿತ್ಯಾನಂದ ಶೆಟ್ಟಿ ನೊಚ್ಚ ಧನ್ಯವಾದವಿತ್ತರು.
ಸಂಜೆ ಭಗವಾನ್ ಶ್ರೀ ಸಾಯಿ ಭಜನಾ ಸೇವಾ ಕ್ಷೇತ್ರ ಹಳೆಕೋಟೆ ಇವರಿಂದ ಭಜನಾ ಸಂಕೀರ್ತನೆ, ರಾತ್ರಿ ನಮ್ಮ ಟಿ.ವಿ ಬಲೇ ತೆಲಿಪಾಲೆ ಸೀಸನ್-೩ರ ದ್ವಿತೀಯ ಪ್ರಶಸ್ತಿ ವಿಜೇತ ಸಮರ ಸಾರಥಿ ತಂಡದಿಂದ‘ಬಲೆ ತೆಲಿಪಾವ’ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.