ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ದೈವೀಚ್ಚೆ ಮತ್ತು ನಮ್ಮ ಸಂಕಲ್ಪ ಕೂಡಿಬಂದರೆ ಸುಭೀಕ್ಷೆ ಖಚಿತ : ವಿದ್ಯಾಪ್ರಸನ್ನ ಸ್ವಾಮೀಜಿ

kolpady bhrammakalasa copy  10 ದಿನಗಳ ಅವಧಿಯಲ್ಲಿ ಡಾಂಬರು ರಸ್ತೆ ಮಾಡಿಸಿಕೊಟ್ಟ ಶಾಸಕ ಬಂಗೇರ
ದೇವಾಲಯದ ದಾರುಶಿಲ್ಪದ ವಿಶೇಷತೆ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಬಂದಿದ್ದ ವಿಶೇಷ ವರದಿಯ ನೆಲೆಯಲ್ಲಿ ವೀಕ್ಷಣೆಯ ಆಸಕ್ತಿ ಹೊಂದಿದ್ದ ಶಾಸಕ ವಸಂತ ಬಂಗೇರ ಅವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ರಾಜಾರಾಮ ಶರ್ಮ, ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಸ್ಥಳೀಯ ಗ್ರಾ.ಪಂ.ಸ. ಜಯಂತ ಗೌಡ, ಊರವರಾದ ಸುಲೈಮಾನ್, ಯೋಗೀಶ್ ಗೌಡ ಸಹಿತ ಪ್ರಮುಖರು ಶಾಸಕರ ಗಮನಸೆಳೆದಂತೆ ತಕ್ಷಣ ಸ್ಪಂದಿಸಿದ ಶಾಸಕ ವಸಂತ ಬಂಗೇರರು ಉಜಿರೆಯ ಗುತ್ತಿಗೆದಾರ ಶ್ರೀನಿವಾಸ ಗೌಡ ಅವರನ್ನು ಸಂಪರ್ಕಿಸಿ ಮರುದಿನವೇ ಇಂಜಿನಿಯರ್‌ರನ್ನು ಸ್ಥಳಕ್ಕೆ ಕರೆಸಿ ಕೇವಲ 10 ದಿನಗಳ ಅಂತರದಲ್ಲೇ ಕೊಲ್ಪಾಡಿ ದೇವಸ್ಥಾನ ರಸ್ತೆಯನ್ನು ಡಾಂಬರೀಕರಣಗೊಳಿಸಿ ಊರವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಪ್ರಸಂಗವನ್ನು ರಾಜಾರಾಮ ಶರ್ಮ ಅವರು ನೆನೆದು ಶಾಸಕರಿಗೆ ಕೃತಜ್ಞತೆ ಅರ್ಪಿಸಿದರು. ಮರದ ಕೆಲಸ ಇತ್ಯಾಧಿಯಾಗಿ ಸಹಕಾರ ನೀಡಿದ ಅರಣ್ಯ ಇಲಾಖೆ ಹಾಗೂ ಸಚಿವ ರಮಾನಾಥರೈ ಅವರನ್ನೂ ಸಭೆಯಲ್ಲಿ ನೆನೆದುಕೊಳ್ಳಲಾಯಿತು. ದೇವಾಲಯದ ಕೆಲಸ ನಡೆಯುತ್ತಿದ್ದ ವೇಳೆ ಸ್ವಯಂಪ್ರೇರಣೆಯಿಂದ ಬಂದು ಪ್ರಚಾರ ನೀಡಿದ ಸುದ್ದಿ ಪತ್ರಿಕೆಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು.

ಬೆಳಾಲು: ಮಾನವನು ಮಾಡುವ ಕರ್ಮಗಳಲ್ಲಿ ಸಂಕಲ್ಪ ಮುಖ್ಯ. ಅದನ್ನು ನಡೆಸಿಕೊಡುವುದು ದೈವೀಚ್ಚೆ. ಕೆಲವೊಮ್ಮೆ ನಮ್ಮ ಇಚ್ಚೆ ದೇವರ ಇಚ್ಚೆಬೇರೆಯೇ ಇರುತ್ತದೆ. ಕೊನೆಗೆ ದೇವರ ಚಿತ್ತವೇ ಗೆಲ್ಲುತ್ತದೆ. ಆದರೆ ನಮ್ಮ ಸಂಕಲ್ಪ ಮತ್ತು ದೈವೀಚ್ಚೆ ಕೂಡಿ ಬಂದರೆ ಅಲ್ಲಿ ಸುಭೀಕ್ಷೆಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಯತಿಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಹೇಳಿದರು.
ಬೆಳಾಲು ಗ್ರಾಮದ ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ನಿಮಿತ್ತ ಫೆ. 6 ರಂದು ಸಂಜೆ ನಡೆದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬುದ್ಧಿಗೆ ಪ್ರಚೋದನೆ ಕೊಡುವ ದೇವರು ಶ್ರೀಸುಬ್ರಹ್ಮಣ್ಯ:
ಸುಬ್ರಹ್ಮಣ್ಯ ದೇವರು ದೇವಸೇನಾ ನಾಯಕರಾಗಿ ಉದಿಸಿಬಂದವರು. ತಾಮಸ ಶಕ್ತಿ ಸುಲಭದಲ್ಲಿ ಮೇಲೈಸುತ್ತದೆ. ಸಾತ್ವಿಕ ಶಕ್ತಿಯ ಮೇಲೆ ಮೋಡ ಕವಿದಂತಾಗುವುದು ಸಾಮಾನ್ಯ. ಅಂತಹ ಕಾಲಘಟ್ಟದಲ್ಲಿ ರಾಕ್ಷಸರ ಸಂಹಾರಕ್ಕಾಗಿ ಸುಬ್ರಹ್ಮಣ್ಯ ದೇವರು ಹುಟ್ಟಿಬರುತ್ತಾರೆ. ಸುಬ್ರಹ್ಮಣ್ಯ ದೇವರು ಬುದ್ಧಿಗೆ ಪ್ರಚೋದನೆ ಕೊಡುವ ದೇವರು. ಊರಿನಲ್ಲಿ ಬಹಳ ಸುಂದರವಾಗಿ ಮೂಡಿಬಂದಿರುವ ಈ ದೇವಾಲಯಕ್ಕೆ ಭಕ್ತರು ದಿನಕ್ಕೊಂದು ಬಾರಿ, ವಾರಕ್ಕೊಂದು ಬಾರಿಯಾದರೂ ಬರುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಷಷ್ಠಿ ಮತ್ತು ಸಂಕ್ರಾಂತಿಯಂದು ಸುಬ್ರಹ್ಮಣ್ಯದೇವರ ದರ್ಶನ ಪಡೆದರೆ ಅತ್ಯಂತ ಪುಣ್ಯದಾಯಕ ಎಂದು ಸ್ವಾಮೀಜಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಮಾತನಾಡಿ, ಊರವರ ಸಾತ್ವಿಕ ಮನೋಭಾವನೆ ಕೈಗನ್ನಡಿಯಂತೆ ಈ ದೇವಾಲಯ ಸುಂದರವಾಗಿ ಮೂಡಿ ಬಂದಿದೆ. ತಾಲೂಕಿನಲ್ಲಿ ಎಲ್ಲೂ ಇಲ್ಲದ ರೀತಿಯ ಕಾಷ್ಟ ಶಿಲ್ಪ, ಮತ್ತು ಕೆತ್ತನೆ ಇಲ್ಲಿ ಮೇಲೈಸಿದೆ. ಆಡಂಬರ ಇಲ್ಲದೆ ಬ್ರಹ್ಮಕಲಶೋತ್ಸವ ಕೂಡ ನಡೆದಿದೆ. ಎಲ್ಲೆಡೆ ಇತರ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ದೊರೆತರೆ ಇಲ್ಲಿ ವೈದಿಕ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ದೊರೆತಿದೆ ಎಂದರು.
ಮುಖ್ಯ ಅತಿಥಿಯಾಗಿ ಅಬುದಾಬಿಯ ಉದ್ಯಮಿ ಸರ್ವೋತ್ತಮ ಶೆಟ್ಟಿ ಮತ್ತು ಬೆಳಾಲು ಗ್ರಾ. ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್ ಶುಭಹಾರೈಸಿದರು. ಅನುವಂಶಿಯ ಮೊಕ್ತೇಸರ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು.
ಗೌರವಾರ್ಪಣೆ: ದೇವಳದ ಬ್ರಹ್ಮಕಲಶೋತ್ಸವದ ವೈದಿಕ ಮುಖ್ಯಸ್ಥಿಕೆ ವಹಿಸಿದ್ದ ಬ್ರಹ್ಮಶ್ರೀ ಆಲಂಪಾಡಿ ಪದ್ಮನಾಭ ತಂತ್ರಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸುಬ್ರಹ್ಮಣ್ಯ ಕಲ್ಲೂರಾಯ, ಅರ್ಚಕ ಸುಬ್ರಾಯ ನೂರಿತ್ತಾಯ ಇವರನ್ನೂ ಗುರುತಿಸಿ ಗೌರವಿಸಲಾಯಿತು. ಸಂತೋಷ್ ಕಲ್ಲೂರಾಯ ಬಳಗದವರು ವೈದಿಕ ಪ್ರಾರ್ಥನೆ ನೆರವೇರಿಸಿದರು. ಅನುವಂಶಿಕ ಮೊಕ್ತೇಸರ ಸೂರ್ಯನಾರಾಯಣ ಶರ್ಮ ಸ್ವಾಗತಿಸಿದರು. ರಾಜಾರಾಮ ಶರ್ಮ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಚಿತ್ರ: ಶರ್ಮಾ ಉಜಿರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.