ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ, ಒಳ್ಳೆಯ ಮನಸ್ಸು-ಚಿಂತನೆಯಿಂದ ಬದುಕು ಬಂಗಾರ: ಶ್ರೀ ಯೋಗಾನಂದ ಸ್ವಾಮೀಜಿ

Nala devasthana darmika sabhe copy  ನಾಳ : ನಾವು ಬದುಕಿನಲ್ಲಿ ಒಳ್ಳೆಯ ಸತ್ಕಾರ್ಯಗಳನ್ನು ಮಾಡಬೇಕು. ಇದರಿಂದ ಜೀವನದಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯವಿದೆ. ಭಕ್ತರ ಗೆಲುವೇ ಭಗವಂತನಿಗೆ ಆನಂದ ತರುತ್ತದೆ. ಒಳ್ಳೆಯ ಮನಸ್ಸು ಮತ್ತು ಚಿಂತನೆಯಿಂದ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ಕಾಸರಗೋಡು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನಾಳ ಇದರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಜ.28ರಂದು ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ನಾವು ಭಗವಂತನ ಅನುಗ್ರಹದಿಂದ ಸಂಪತ್ತನ್ನು ಗಳಿಸುತ್ತೇವೆ. ಈ ರೀತಿ ಬಂದ ಸಂಪತ್ತನ್ನು ಮತ್ತೆ ದೇವರಿಗೆ ಕೊಟ್ಟಾಗ ದೇವರು ತೃಪ್ತಿಯಾಗಿ ಮತ್ತಷ್ಟು ಸಂಪತ್ತನ್ನು ಕರಣಿಸುತ್ತಾರೆ ಎಂದರು.
ಬದುಕಿನಲ್ಲಿ ನಂಬಿಕೆ ಮುಖ್ಯ ಇಂತಹ ನಂಬಿಕೆಗಳು ಗಟ್ಟಿಯಾಗಲು ದೇವರ ಜಾತ್ರೆ, ಉತ್ಸವ, ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ನಾವು ಮಾಡುವ ಕರ್ಮ ಪರಿಶುದ್ಧತೆಯಿಂದ ಕೂಡಿರಬೇಕು, ಒಳ್ಳೆಯ ಮನಸ್ಸು, ಉತ್ತಮ ಸಂಸ್ಕಾರಗಳು ನಮ್ಮ ಜೀವನವನ್ನು ಉನ್ನತಿಯೇಡೆಗೆ ಸಾಗಿಸುತ್ತದೆ. ಅಂತಹ ಭಕ್ತರಿರುವುದರಿಂದ ನಾಳ ಕ್ಷೇತ್ರ ಸಮಾಜದಲ್ಲಿ ಬೆಳಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ಅವರು ಮಾತನಾಡಿ, ನಾಳ ದೇವಸ್ಥಾನದ ಅಭಿವೃದ್ಧಿಯಲ್ಲಿ ಹಿಂದಿನಿಂದಲೂ ಈ ಊರಿನ ಭಕ್ತರು ಕೈಜೋಡಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಆದಾಯವನ್ನು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಇನ್ನು ಮುಂದೆಯೂ ಎಲ್ಲಾ ಕಾರ್ಯಗಳಿಗೆ ಭಕ್ತರ ಸಹಕಾರ ಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಜೆಪಿ ಯುವ ಮೋರ್ಚಾ ದ.ಕ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮಾತನಾಡಿ ಮಹಿಳೆಯವರು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ, ಧಾರ್ಮಿಕ ಶಿಕ್ಷಣ ನೀಡಿ ಅವರನ್ನು ಈ ದೇಶದ ಪ್ರಜ್ಞಾವಂತ ನಾಗರಿಕರಾಗಿ ಬೆಳೆಸಬೇಕು ಎಂದು ಕರೆ ನೀಡಿದರು. ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡಿದ ಉತ್ತಮ ಕಾರ್ಯಗಳಿಗೆ ದೇವರು ತಕ್ಕ ಫಲವನ್ನು ನೀಡುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ವೇಣೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಮೈಸೂರಿನ ಉದ್ಯಮಿ ಗೇರುಕಟ್ಟೆ ಜಿ.ಕೆ ನಿವಾಸದ ಹೇಮಂತ್ ಕುಮಾರ್, ತುಳು ಚಲನಚಿತ್ರ ಕಲಾವಿದ ಪೃಥ್ವಿ ಅಂಬಾರ್, ಹಾಸ್ಯ ಕಲಾವಿದ ಮಂಜು ರೈ, ಮಂಗಳೂರಿನ ಇನ್‌ಕಮ್ ಟ್ಯಾಕ್ಸ್ ಡೈರೆಕ್ಟರ್ ಚಂದ್ರಕಾಂತ್ ಮಾತನಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಪಿಲಿಬೈಲು ಯಮುನಕ್ಕ ಚಲನಚಿತ್ರ ಸಹ ನಿರ್ಮಾಪಕ ಕೆ. ಹರೀಶ್ ರಾವ್ ನಾಳ ಇವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಈ ಚಿತ್ರದ ನಾಯಕ ನಟ ಪೃಥ್ವಿ ಅಂಬಾರ್, ಹಾಸ್ಯ ಕಲಾವಿದ ಮಂಜು ರೈ ಇವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ, ಗೆಜ್ಜೆಗಿರಿ ಪಡುಮಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಮಡಂತ್ಯಾರು ಯಕ್ಷಕೂಟ ಬಳಗದ ಗೌರವಾಧ್ಯಕ್ಷ ರಾಮಣ್ಣ ಪೂಜಾರಿ ಕೋಟೆಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ. ಜನಾರ್ದನ ಪೂಜಾರಿ, ಕೆ.ಎನ್ ಆನಂದ ಶೆಟ್ಟಿ ಐಸಿರಿ, ದಿನೇಶ್ ಗೌಡ, ಕೆ.ಎನ್ ಬಾಬು, ಅಂಬಾ ವಿ. ಆಳ್ವ, ವಿಜಯ ಹೆಚ್ ಪ್ರಸಾದ್, ಭಾರತಿ ವಂಜಾರೆ ಉಪಸ್ಥಿತರಿದ್ದರು.
ಪತ್ರಕರ್ತ ರಾಜೇಶ್ ಪೆಂರ್ಬುಡ ಸ್ವಾಗತಿಸಿದರು. ಸುಗುಣ ಆಳ್ವ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ದಿವಾಕರ ಆಚಾರ್ಯ ಮತ್ತು ಉಮೇಶ್ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಆಚಾರ್ಯ ವಂದಿಸಿದರು. ರಾತ್ರಿ ದೇವರ ಬಲಿ ಹೊರಟು ಉತ್ಸವ, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, ರಾತ್ರಿ 12ಕ್ಕೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.