ದೇವಾಲಯ ಆಧ್ಯಾತ್ಮದ ಬೆಳಕು ನೀಡುವ ಕೇಂದ್ರ : ಒಡಿಯೂರು ಶ್ರೀ

Thenkakaranduru odiyuru swamiji copy ತೆಂಕಕಾರಂದೂರು ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ 

ತೆಂಕಕಾರಂದೂರು : ಊರಿನಲ್ಲಿರುವ ನಿರ್ಮಲ ಮನಸ್ಸಿನವರು ಒಟ್ಟಾಗಲು ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಗಳು ದೇವರು ಕೊಡುವ ಅವಕಾಶವಾಗಿದ್ದು, ದೇವಾಲಯ ಭಕ್ತರಿಗೆ ಆಧ್ಯಾತ್ಮದ ಬೆಳಕು ನೀಡುವ ಕೇಂದ್ರಗಳಾಗಿವೆ ಎಂದು ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಜ.31ರಂದು ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ದೇವಾಲಯಗಳಲ್ಲಿ ಶಕ್ತಿಯು ಕೇಂದ್ರಿಕೃತವಾಗಿರುತ್ತದೆ. ಇಂತಹ ಶಕ್ತಿಯ ಜೀರ್ಣೋದ್ಧಾರದಿಂದ ಊರಿಗೆ ಬೆಳಕು ದೊರೆಯುತ್ತದೆ ಜೊತೆಗೆ ಹೃದಯವನ್ನು ಬೆಳಗಿಸುವ ಕಾರ್ಯವನ್ನು ಮಾಡುತ್ತದೆ ಎಂದರು.
ತೆಂಕಕಾರಂದೂರಿನಲ್ಲಿ ಯುವಕರ ದೊಡ್ಡ ಶಕ್ತಿ ಕಂಡಿದ್ದೇನೆ. ಯುವ ಶಕ್ತಿಯಿಂದ ಮಾತ್ರ ಈ ದೇಶವನ್ನು, ಸಮಾಜವನ್ನು ಪರಿವರ್ತಿಸಬಹುದು. ಮಕ್ಕಳಿಗೆ ಸಣ್ಣ ಪ್ರಾಯದಲ್ಲೆ ಉತ್ತಮ ಸಂಸ್ಕಾರ ದೊರೆತರೆ ಅವರು ಸತ್ಪ್ರಜೆಗಳಾಗಿ ಬಾಳಲು ಸಾಧ್ಯವಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡಬಿದ್ರೆ ಧನಲಕ್ಷ್ಮೀ ಸಮೂಹ ಸಂಸ್ಥೆಯ ಉದ್ಯಮಿ ಕೆ. ಶ್ರೀಪತಿ ಭಟ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ದೇವಾಲಯ, ದೈವಸ್ಥಾನ, ನಾಗಾಲಯ ಸೇರಿದಂತೆ ೩,೫೦೦ ಶಕ್ತಿಯ ಆರಾಧನಾ ಕೇಂದ್ರಗಳಿದ್ದು, ಇತರ ಜಿಲ್ಲೆ, ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆ ಹೆಚ್ಚು ಸುಸಂಸ್ಕೃತ ಜನರಿರುವ ಜಿಲ್ಲೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಲ್ಲಾ ಪರಿವರ್ತನೆಗಳಿಗೆ ಮೂಲ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ್ ನಾರಾಯಣ ಮಾತನಾಡಿ, ನಾವು ಜೀವನದಲ್ಲಿ ಅಹಂಕಾರವನ್ನು ತ್ಯಜಿಸಬೇಕು, ಒಂದು ಹಂತದಲ್ಲಿ ಸಂಪಾದನೆ ಸಾಕು ಎಂಬ ಭಾವನೆ ಬರಬೇಕು, ಸರಳವಾಗಿ ಬದುಕುವುದನ್ನು ಕಲಿಯಬೇಕು, ವಿವೇಕ ಜಾಗೃತಿಯಿಂದ ಉತ್ತಮ ಪ್ರಗತಿಯಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಮಾತನಾಡಿ, ನಾವು ತಾಯಿ, ಗೋವು, ದೇವಸ್ಥಾನ ಮೂರನ್ನು ಗೌರವಿಸಬೇಕು, ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಡುವ ಕೆಲಸಗಳಾಗಬೇಕು, ಧರ್ಮ, ಸಂಸ್ಕೃತಿ ಇರುವಲ್ಲಿ ಯುವಕರು ಯಾವಾಗಲೂ ಇರುತ್ತಾರೆ ಜಿಲ್ಲೆಯ ಕ್ರೀಡೆ ಕಂಬಳವನ್ನು ಉಳಿಸುವಲ್ಲಿ ಹೋರಾಟ ಅಗತ್ಯ ಎಂದರು.
ಜ್ಯಾತ್ಯತೀತ ಜನತಾದಳ ರಾಜ್ಯ ಕಾರ್ಯದರ್ಶಿ ರಾಜಶ್ರೀ ಹೆಗ್ಡೆ, ಉದ್ಯಮಿ ರವಿ ಪೂಜಾರಿ ಮಜಲು, ಮಂಗಳೂರು ಪ್ರೀಮಿಯರ್ ಸೆಕ್ಯೂರಿಟೀಸ್‌ನ ರೋಹಿನಾಥ್, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ. ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಅನ್ನದಾನಿಗಳನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅನಿಲ್‌ಕುಮಾರ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ, ಕೋಶಾಧಿಕಾರಿ ಸಂತೋಷ್ ಹೆಗ್ಡೆ ಉಪಸ್ಥಿತರಿದ್ದರು. ಸಮರ್ಥನ್ ಎಸ್.ರಾವ್ ಕಾಪಿನಡ್ಕ ಮತ್ತು ಶಿವಶಂಕರ್ ಗೇರುಕಟ್ಟೆ ಇವರ ಪ್ರಾರ್ಥನೆ ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕ ಶಿವಶಂಕರ ಭಟ್ ಕಾರ್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ದಿನೇಶ್ ಪಿ.ಕೆ. ವಂದಿಸಿದರು. ಬಳಿಕ ದಯಾನಂದ ಕತ್ತಲ್‌ಸಾರ್ ಮತ್ತು ಬಳಗದವರಿಂದ ‘ತುಳುನಾಡ ಸಂಕ್ರಾಂತಿ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.